ಮತ್ತೊಂದು ಸುಂದರ ಹಾಡು ಕೊಟ್ಟ 'ಡೇರ್‌ಡೆವಿಲ್ ಮುಸ್ತಫಾ' ತಂಡ
ಪೂರ್ಣಚಂದ್ರ ತೇಜಸ್ವಿ ರಚಿತ 'ಡೇರ್‌ಡೆವಿಲ್ ಮುಸ್ತಫಾ' ಕತೆಯನ್ನು ಅವರ ಓದುಗರೇ ಸಿನಿಮಾ ಮಾಡುತ್ತಿದ್ದು, ಈಗಾಗಲೇ ತಮ್ಮ ಪೋಸ್ಟರ್, ಹಾಡುಗಳಿಂದಾಗಿ ಬಹುವಾಗಿ ಗಮನ ಸೆಳೆದಿದ್ದಾರೆ.
ಇದೀಗ 'ನಿನ್ನಂಥೋರ್ ಯಾರೂ ಇಲ್ವಲ್ಲೊ ಲೋಕದ ಮ್ಯಾಲೆ' ಎಂಬ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸುಂದರವಾದ ಈ ಹಾಡು ಕೇಳುಗರನ್ನು ಸೆಳೆಯುತ್ತಿದೆ.
'ಮೈಸೂರು ದೊರೆಯೆ ರಣಧೀರ ನಾಯ್ಕನೆ' ಎಂದು ಪ್ರಾರಂಭವಾಗುವ ಈ ಹಾಡು ಜನಪದ ಶೈಲಿಯಲ್ಲಿದ್ದು ಕೇಳಲು ಮುದ ನೀಡುತ್ತದೆ. ಡಾ.ರಾಜ್‌ಕುಮಾರ್ ಅವರನ್ನು ರಣಧೀರ ನಾಯ್ಕನಂತೆ ಚಿತ್ರಿಸಿ ನಾಯ್ಕನ ವೀರತನ-ಶೂರತ್ವವನ್ನು ಹೊಗಳುವ ಹಾಡು ಇದಾಗಿದೆ.

ಹಾಡಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದ್ದು, ''ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. ಸುಮಾರು 40 ವರ್ಷಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡ ಅಭಿನಯಿಸಿದ ಪ್ರಸನ್ನ ನಿರ್ದೇಶಿಸಿದ, ಡಾ ಕೆ.ವಿ.ನಾರಾಯಣ ರಚಿಸಿದ 'ಹುತ್ತವ ಬಡಿದರೆ' ನಾಟಕಕ್ಕಾಗಿ ಡಾ.ಸಿ ವೀರಣ್ಣ ರಚಿಸಿದ ಈ ಹಾಡಿನ ಸಂಗೀತ ಸಂಯೋಜನೆ ಮಾಡಿದವರು ಬಿ.ವಿ.ಕಾರಂತ.
ಈ ಪ್ರಸಿದ್ಧ ರಂಗಗೀತೆಯನ್ನು ನಮ್ಮ 'ಡೇರ್‌ಡೆವಿಲ್ ಮುಸ್ತಾಫಾ' ಚಿತ್ರದಲ್ಲಿ ಕಾಲೇಜು ಹುಡುಗರು ವಾರ್ಷಿಕೋತ್ಸವದಲ್ಲಿ ಹಾಡಿ ಕುಣಿಯುವಂತೆ ಚಿತ್ರಿಸಲಾಗಿದೆ. ಈ ಹಾಡೊಳಗೆ ಮೈಸೂರು ರಾಜ ರಣಧೀರ ಕಂಠೀರವರ ಸಾಹಸದ ಕತೆಯಿದೆ. ಸಿನಿಮಾ ಹೊರತಾಗಿ ಈ ಹಾಡನ್ನು ವೈಭವದಿಂದ ಕಟ್ಟಿಕೊಡಬೇಕು ಎಂದೆನಿಸಿದಾಗ ಹೊಳೆದದ್ದು ಡಾ ರಾಜಕುಮಾರ್ ಅನಿಮೇಷನ್. ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಸುಮಾರು 800 ಕಲಾಭಿಮಾನಿಗಳು ನಮ್ಮ ಟೀಶರ್ಟ್ ಕೊಂಡು ಈ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಈ ದಸರೆಯ ಸಂದರ್ಭದಲ್ಲಿ ಈ ಹಾಡಿನ ಬಿಡುಗಡೆ ಅತ್ಯಂತ ಉಚಿತವಾಗಿ ಇದೆ ಎಂದು ನಾವಾದರೂ ಭಾವಿಸಿದ್ದೇವೆ'' ಎಂದಿದೆ ಚಿತ್ರತಂಡ.
ಪ್ರಸ್ತುತ 'ಡೇರ್‌ಡೆವಿಲ್ ಮುಸ್ತಫಾ' ಚಿತ್ರತಂಡ ಬಿಡುಗಡೆ ಮಾಡಿರುವ ಹಾಡನ್ನು ವಾಸುಕಿ ವೈಭವ್ ಹಾಡಿದ್ದು, ಸಂಗೀತವನ್ನು ನವನೀತ್ ಶ್ಯಾಮ್ ಒದಗಿಸಿದ್ದಾರೆ.
ಈ ಹಿಂದೆ ಇದೇ ಚಿತ್ರತಂಡವು 'ಜಯಮಾಲಾ ದಮಯಂತಿ ಯಾರಪ್ಪ' ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಸಿನಿಮಾದ ಪಾತ್ರಗಳ ಪರಿಚಯ ನೀಡುವ ಈ ಹಾಡು ಸಹ ಬಹಳ ಹಿಟ್ ಆಗಿತ್ತು.
'ಡೇರ್‌ಡೆವಿಲ್ ಮುಸ್ತಫಾ' ಸಿನಿಮಾವನ್ನು ಶಶಾಂಕ್ ಸೋಗಲ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್, ಸಂದರ್ ವೀಣಾ, ಹರಿಣಿ, ನಾಗಭೂಷಣ, ಮೈಸೂರು ಪೂರ್ಣಚಂದ್ರ ಇನ್ನೂ ಹಲವರು ನಟಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿಯವರ ರಚಿಸಿರುವ 'ಅಬಚೂರಿನ ಪೋಸ್ಟಾಫೀಸು', 'ಕುಬಿ ಮತ್ತು ಇಯಾಲ', 'ತಬರನ ಕತೆ', 'ಕಿರಗೂರಿನ ಗಯ್ಯಾಳಿಗಳು' ಕತೆಗಳು ಸಿನಿಮಾಗಳಾಗಿವೆ. 'ಜುಗಾರಿ ಕ್ರಾಸ್' ಕಾದಂಬರಿ ಧಾರಾವಾಹಿಯಾಗಿ ಪ್ರಸಾರವಾಗಿದೆ. ಇದೀಗ 'ಡೇರ್‌ಡೆವಿಲ್ ಮುಸ್ತಫಾ' ಕತೆ ಸಿನಿಮಾ ಆಗುತ್ತಿದೆ.


Click it and Unblock the Notifications











