'ಡೇರ್‌ಡೆವಿಲ್ ಮುಸ್ತಾಫಾ': ಟೀಸರ್‌ನಿಂದ ಗಮನ ಸೆಳೆದ ಹುಡುಗರು
ನಾಡಿನ ಹೆಸರಾಂತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 08). ತೇಜಸ್ವಿ ಅವರ 'ಡೇರ್‌ಡೆವಿಲ್ ಮುಸ್ತಾಫಾ' ಕತೆಯನ್ನು ಸಿನಿಮಾ ಮಾಡುತ್ತಿರುವ ಯುವಕರ ತಂಡ, ಸಾಹಿತಿಯ ಹುಟ್ಟುಹಬ್ಬದಂದು ತಮ್ಮ ಸಿನಿಮಾದ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಪಾತ್ರ ಪರಿಚಯದ ಈ ಟೀಸರ್ ಬಹುವಾಗಿ ಗಮನ ಸೆಳೆಯುತ್ತಿದೆ.
'ಡೇರ್‌ಡೆವಿಲ್ ಮುಸ್ತಾಫಾ' ಕತೆಯನ್ನು ಶಶಾಂಕ್ ಸೋಗಲ್ ನಿರ್ದೇಶನ ಮಾಡುತ್ತಿದ್ದು, ''ರೆಟ್ರೋಗ್ರಾಮ್ ಎಂಬ ವಿಶಿಷ್ಟ ಪರಿಕಲ್ಪನೆಯ ಮೂಲಕ 'ಜಯಮಾಲಾ ದಮಯಂತಿ ಯಾರಪ್ಪ? ಎಂಬ ಹಾಡಿನ ಜೊತೆಗೆ ಚಿತ್ರದ ಪಾತ್ರ ಪರಿಚಯ ಮತ್ತು ಪೋಸ್ಟರ್ ಅನಾವರಣಗೊಳಿಸಿದೆ ಚಿತ್ರತಂಡ.
ಕತೆಯಲ್ಲಿ ಬರುವ ಸಣ್ಣ ಹಾಸ್ಯದ ತುಣಕನ್ನೇ ಪ್ರಧಾನವಾಗಿರಿಸಿಕೊಂಡು 'ಜಯಮಾಲಾ ದಮಯಂತಿ ಯಾರಪ್ಪ' ಎಂಬ ಹಾಡನ್ನು ಶಶಾಂಕ್ ಸೋಗಲ್ ಬರೆದಿದ್ದು, ಗೀತೆಗೆ ರಾಗ ಸಂಯೋಜಿಸಿರುವುದು ಸಂಗೀತ ನಿರ್ದೇಶಕ ನವನೀತ್ ಶ್ಯಾಮ್. ಹಾಡಿರುವವರು ಆದಿತ್ಯ ಅಶ್ರೀ, ಆಶಿತ್, ಅಭಯ್.

ಇನ್‌ಸ್ಟಾಗ್ರಾಂ ಫೀಡ್ ಮಾದರಿಯಲ್ಲಿ ಹಾಡನ್ನು ಪ್ರೆಸೆಂಟ್ ಮಾಡಿದ್ದು, ಹಾಡಿನ ಜೊತೆ-ಜೊತೆಗೆ ಸಿನಿಮಾದಲ್ಲಿನ ಪಾತ್ರ ಪರಿಚಯವನ್ನೂ, ಪಾತ್ರಗಳ ವ್ಯಕ್ತಿತ್ವದ ಪರಿಚಯವನ್ನೂ ಸ್ಥೂಲವಾಗಿ ಮಾಡಿಕೊಡಲಾಗಿದೆ.
ಸಿನಿಮಾದಲ್ಲಿ ಹಿರಿಯ ನಟರಾದ ಮಂಡ್ಯ ರಮೇಶ್, ಎಂಎಸ್ ಉಮೇಶ್, ಸುಂದರ್ ವೀಣ ಜೊತೆಗೆ ನಾಗಭೂಷಣ್, ಮೈಸೂರು ಪೂರ್ಣ, ಮೈಸೂರು ಆನಂದ್, ಆದಿತ್ಯ ಅಶ್ರೀ, ಸುಪ್ರೀತ್ ಭಾರಧ್ವಜ್, ಆಶಿತ್, ಶ್ರೀವತ್ಸ, ಪ್ರೇರಣ, ಹರಿಣಿ, ವಿಜಯ್ ಶೋಭರಾಜ್, ಚೈತ್ರಾ ಶೆಟ್ಟಿ, ಕಾರ್ತಿಕ್ ಪತ್ತಾರ್, ಕೃಷ್ಣೇಗೌಡ, ಮಹದೇವ ಇನ್ನೂ ಹಲವರು ನಟಿಸಿದ್ದಾರೆ.
ಶಶಾಂಕ್ ಸೋಗಲ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಸಿನಿಮಾಮರ ತಂಡವು ನಿರ್ಮಾಣ ಮಾಡುತ್ತಿದೆ. 'ಡೇರ್‌ಡೆವಿಲ್ ಮುಸ್ತಾಫಾ'ವು ತೇಜಸ್ವಿ ಅವರ ಸಣ್ಣ ಕತೆಯಾಗಿದ್ದು, ಅದನ್ನು ತುಸು ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡುತ್ತಿದೆ ಈ ಯುವ, ಉತ್ಸಾಹಿ ಬಳಗ.
ಇಂದು ಬಿಡುಗಡೆ ಆಗಿರುವ 'ರೆಟ್ರೋಗ್ರಾಮ್'ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಸಿನಿಮಾವು ಶೀಘ್ರವಾಗಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈ ಹಿಂದೆ ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಹಲವು ಸಣ್ಣ ಕತೆಗಳನ್ನು ಸಿನಿಮಾ ಮಾಡಲಾಗಿದೆ. 'ತಬರನ ಕತೆ'ಯನ್ನು ಗಿರೀಶ್ ಕಾಸರವಳ್ಳಿ ಅವರು ಅದೇ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಎನ್.ಲಕ್ಷ್ಮಿನಾರಾಯಣ ಎಂಬುವರು 'ಅಬಚೂರಿನ ಪೋಸ್ಟಾಫೀಸು' ಕತೆಯನ್ನು ಸಿನಿಮಾ ಮಾಡಿದ್ದಾರೆ. ಸದಾನಂದ ಸುವರ್ಣ ಅವರು 'ಕುಬಿ ಮತ್ತು ಇಯಾಲ' ಕತೆಯನ್ನು ಸಿನಿಮಾ ಮಾಡಿದ್ದಾರೆ. ಇದಕ್ಕೆ ಚಿತ್ರಕತೆ ಬರೆದಿರುವುದು ಗಿರೀಶ್ ಕಾಸರವಳ್ಳಿ, 'ಕಿರಗೂರಿನ ಗಯ್ಯಾಳಿಗಳು' ಕತೆಯನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶ್ವೇತ ಶ್ರೀವತ್ಸ, ಸುಕ್ರುತಾ ವಾಗ್ಲೆ, ಗಿರಿಜಾ ಲೋಕೇಶ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಇನ್ನೂ ಹಲವು ನಟರು ನಟಿಸಿದ್ದಾರೆ. ಈ ಸಿನಿಮಾಕ್ಕೆ ಚಿತ್ರಕತೆ ಬರೆದಿರುವುದು ಅಗ್ನಿ ಶ್ರೀಧರ್. ಈಗ 'ಡೇರ್‌ಡೆವಿಲ್ ಮುಸ್ತಾಫಾ' ಕತೆ ಸಿನಿಮಾ ಆಗುತ್ತಿದೆ.


Click it and Unblock the Notifications











