ಶೀಘ್ರದಲ್ಲೇ 'ಲವ್ ಮಾಕ್‌ಟೇಲ್' ಜೋಡಿಯ ಮದುವೆ
ಲವ್ ಮಾಕ್ಟೆಲ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ನಾಯಕಿ ಮಿಲನಾ ನಾಗರಾಜ್ ಬಹುವರ್ಷಗಳಿಂದ ನಿಜ ಜೀವನದಲ್ಲೂ ಪ್ರೇಮಿಗಳು ಎಂಬುದು ಹಲವರಿಗೆ ಗೊತ್ತಿರುವ ಸಂಗತಿಯೇ.
Recommended Video
ಲವ್ ಮಾಕ್ಟೇಲ್ ಸಿನಿಮಾ ಹಿಟ್ ಆದ ಬಳಿಕವಂತೂ ಈ ಜೋಡಿ ಸಖತ್ ಹಿಟ್ ಆಗಿದ್ದು, ಇವರು ಹೋದಲ್ಲಿ ಬಂದಲ್ಲಿ, ಸಂದರ್ಶನಗಳಲ್ಲಿ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಗಳೇ ಎದುರಾಗುತ್ತಿವೆ.
ಇದೀಗ ಲವ್ ಮಾಕ್ಟೆಲ್ 2 ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿರುವ ಈ ತಾರಾ ಜೋಡಿ ಮದುವೆ ಆಗಲು ನಿಶ್ಚಯಿಸಿದ್ದಾರೆ. ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಕೊಟ್ಟಿರುವ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.

ಮದುವೆ ಯಾವಾಗ?
ಈ ತಾರಾ ಜೋಡಿಯ ಪೂರ್ಣ ಗಮನ ಈಗ ಲವ್ ಮಾಕ್ಟೆಲ್ 2 ಸಿನಿಮಾದ ಮೇಲೆ ಇದೆಯಂತೆ. ಹಾಗಾಗಿ ಲವ್ ಮಾಕ್ಟೆಲ್ 2 ಸಿನಿಮಾ ಚಿತ್ರೀಕರಣ ಮುಗಿದ ನಂತರ ಇಬ್ಬರೂ ವಿವಾಹವಾಗಲಿದ್ದಾರಂತೆ. ಹೀಗೆಂದು ಡಾರ್ಲಿಂಗ್ ಕೃಷ್ಣ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವೇಳೆಗಾಗಲೆ ಮದುವೆ ಆಗಿರಬೇಕಿತ್ತು: ಕೃಷ್ಣ
ಲವ್ ಮಾಕ್ಟೆಲ್ ಸಿನಿಮಾ ಮುಗಿದ ಬಳಿಕ ಈ ಜೋಡಿ ಮದುವೆ ಆಗಲು ನಿರ್ಧರಿಸಿದ್ದರಂತೆ. ಆದರೆ ಕೊರೊನಾ ವಕ್ಕರಿಸಿದ ಕಾರಣ ಮದುವೆ ಯೋಜನೆ ಮುಂದೂಡಲ್ಪಟ್ಟಿದೆ. ಇದೀಗ ಲವ್ ಮಾಕ್ಟೆಲ್ 2 ಮೇಲೆ ಗಮನಹರಿಸಿರುವ ಕಾರಣ ಮದುವೆ ಮತ್ತಷ್ಟು ಮುಂದಕ್ಕೆ ಹೋಗಿದೆ.

'ಡಿಸೆಂಬರ್‌ನಲ್ಲಿ ಮದುವೆ ಆಗುವ ಯೋಚನೆ ಇತ್ತು'
ಇದೇ ವರ್ಷದ ಡಿಸೆಂಬರ್ ನಲ್ಲಿ ಮದುವೆ ಆಗುವ ಯೋಚನೆ ಹಾಕಿದ್ದೆವು. ಆದರೆ ನಿಯಮಗಳ ನಡುವೆ ಮದುವೆ ಆಗುವುದು ಇಬ್ಬರಿಗೂ ಇಷ್ಟವಿಲ್ಲ. ಇಬ್ಬರ ಕುಟುಂಬವೂ ಬಹಳ ದೊಡ್ಡದು, ಹಾಗಾಗಿ ಲವ್ ಮಾಕ್ಟೆಲ್ 2 ಮುಗಿದ ಮೇಲೆ, ಕೊರೊನಾ ಸಂಕಷ್ಟವೂ ಇಳಿದ ಮೇಲೆ ಮದುವೆ ಆಗುತ್ತೇವೆ ಎಂದಿದ್ದಾರೆ ಕೃಷ್ಣ.

ಲವ್ ಮಾಕ್ಟೆಲ್ 2 ಗೆ ಹೊಸ ನಾಯಕಿ
ಲವ್ ಮಾಕ್ಟೆಲ್ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಒಟ್ಟಿಗೆ ನಿರ್ಮಿಸಿದ್ದರು. ಇದೀಗ ಲವ್ ಮಾಕ್ಟೆಲ್ 2 ಸಿನಿಮಾದಲ್ಲಿ ಹೊಸ ನಾಯಕಿ ಇರಲಿದ್ದಾರೆ ಎಂದು ಡಾರ್ಲಿಂಗ್ ಕೃಷ್ಣ ಸ್ಪಷ್ಟಪಡಿಸಿದ್ದು, ಮಿಲನಾ ನಾಗರಾಜ್ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.


Click it and Unblock the Notifications











