'ಲವ್ ಮಾಕ್ ಟೇಲ್' ತೆಲುಗು ರಿಮೇಕ್ ಗೆ ಟೈಟಲ್ ಫಿಕ್ಸ್: ಆದಿ-ನಿಧಿಮಾ ಪಾತ್ರದಲ್ಲಿ ಸ್ಟಾರ್ ಕಲಾವಿದರು
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ ಸಿನಿಮಾ ಲವ್ ಮಾಕ್ ಟೇಲ್. ಅದಿ-ನಿಧಿಮಾ ಪಾತ್ರ, ಡಾರ್ಲಿಂಗ್ ಕೃಷ್ಣ ನಿರ್ದೇಶನ, ಹಾಡುಗಳು ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿವೆ. ಕೇವಲ ಕನ್ನಡಿಗರು ಮಾತ್ರವಲ್ಲದೆ ಪರಭಾಷೆಯ ಅಭಿಮಾನಿಗಳು ಸಹ ಲವ್ ಮಾಕ್ ಟೇಲ್ ಗೆ ಫಿದಾ ಆಗಿದ್ದಾರೆ.
ಕನ್ನಡದಲ್ಲಿ ಸೂಪರ್ ಹಿಟ್ ಆದ ಲವ್ ಮಾಕ್ ಟೇಲ್ ಚಿತ್ರಕ್ಕೆ ಪರಭಾಷೆಯಲ್ಲಿ ರಿಮೇಕ್ ರೈಟ್ಸ್ ಗೆ ಬೇಡಿಕೆಯು ಹೆಚ್ಚಾಗಿದೆ. ಸದ್ಯ ಲವ್ ಮಾಕ್ ಟೇಲ್ ಚಿತ್ರದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಕನ್ನಡಿಗರನ್ನು ರಂಜಿಸಿದ್ದ ಲವ್ ಮಾಕ್ ಟೇಲ್ ಈಗ ತೆಲುಗು ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಜ್ಜಾಗಿದೆ. ಈಗಾಗಲೇ ತೆಲುಗು ರಿಮೇಕ್ ಗೆ ಟೈಟಲ್ ಫಿಕ್ಸ್ ಆಗಿದ್ದು, ಕನ್ನಡದ ಖ್ಯಾತ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದೆ ಓದಿ..

'ಚುಕ್ಕಲ ಪಲ್ಲಕಿಲೋ'ಆಗಿ ತೆಲುಗಿಗೆ ಎಂಟ್ರಿ ಕೊಟ್ಟ ಲವ್ ಮಾಕ್ ಟೇಲ್
ಕನ್ನಡದ ಲವ್ ಮಾಕ್ ಟೇಲ್ ಸಿನಿಮಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈಗಾಗಲೆ ಟೈಟಲ್ ಸಹ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಚುಕ್ಕಲ ಪಲ್ಲಕಿಲೋ' ಎಂದು ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದರೆ 'ಚುಕ್ಕಲ ಪಲ್ಲಕಿಲೋ' ಚಿರಂಜೀವಿ ಅಭಿನಯದ 'ಸ್ಟೇಟ್ ರೌಡಿ' ಸಿನಿಮಾದ ಪ್ರಸಿದ್ಧ ಹಾಡಿನ ಸಾಲು ಇದಾಗಿದೆ.

ಚಿತ್ರಕ್ಕೆ ನಾಗಶೇಖರ್ ನಿರ್ದೇಶನ
ತೆಲುಗು ರಿಮೇಕ್ 'ಲವ್ ಮಾಕ್ ಟೇಲ್' ಚಿತ್ರಕ್ಕೆ ಕನ್ನಡ ಖ್ಯಾತ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತೆಲುಗು ನಿರ್ಮಾಪಕ ಶ್ರೀಧರ್ ರೆಡ್ಡಿ ನಾಗಶೇಖರ್ ಅವರಿಗೆ ಸಾಥ್ ನೀಡಿದ್ದಾರೆ.
ಆದಿ-ನಿಧಿಮಾ 'ಮಿಲನ'ಕ್ಕೆ ಆರು ವರ್ಷ: ಖುಷಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಆದಿ-ನಿಧಿಮಾ ಪಾತ್ರದಲ್ಲಿ ಸ್ಟಾರ್ ಕಲಾವಿದರು
'ಲವ್ ಮಾಕ್ ಟೇಲ್' ಚಿತ್ರದಲ್ಲಿ ಆದಿ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ನಿಧಿಮಾ ಪಾತ್ರದಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಕನ್ನಡಿಗರ ನಿದ್ದೆಗೆಡಿಸಿದ್ದ ಈ ಎರಡೂ ಪಾತ್ರಗಳಲ್ಲಿ ತೆಲುಗಿನ ದೊಡ್ಡ ಕಲಾವಿದರು ಬಣ್ಣಹಚ್ಚುತ್ತಿದ್ದಾರಂತೆ. ಆದರೆ ಯಾರು ಎನ್ನುವುದನ್ನು ನಾಗಶೇಖರ್ ರಿವೀಲ್ ಮಾಡಿಲ್ಲ. ಇನ್ನೂ ಚಿತ್ರದಲ್ಲಿ ನಾಗಶೇಖರ್ ಬಿಟ್ಟರೆ ಉಳಿದ ಕಲಾವಿದರು ಮತ್ತು ತಂತ್ರಜ್ಞರೆಲ್ಲರೂ ತೆಲುಗಿನವರೆ ಇರಲಿದ್ದಾರಂತೆ.

ನಾಗಶೇಖರ್ ಪ್ರತಿಕ್ರಿಯೆ
ಈ ಬಗ್ಗೆ "ಫಿಲ್ಮಿ ಬೀಟ್ ಕನ್ನಡ" ಜೊತೆ ಮಾತನಾಡಿದ ನಿರ್ದೇಶಕ ನಾಗಶೇಖರ್ "ತೆಲುಗಿನಲ್ಲಿ ದೊಡ್ಡ ಕಲಾವಿದರು ಬಣ್ಣಹಚ್ಚುತ್ತಿದ್ದಾರೆ. ಈಗಾಗಲೇ ಮಾತುಕತೆ ನಡೆದಿದೆ. ಈಗಲೇ ಕಲಾವಿದರ ಬಗ್ಗೆ ಬಹಿರಂಗಪಡಿಸುವುದಿಲ್ಲ. ಆದರೆ ಸಧ್ಯದಲ್ಲೇ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸುತ್ತೇನೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭಿಸುತ್ತೇನೆ" ಎಂದು ಹೇಳಿದ್ದಾರೆ.

ಡಾರ್ಲಿಂಗ್ ಕೃಷ್ಣಗೆ ನಾಗಶೇಖರ್ ನಿರ್ದೇಶನ
ನಾಗಶೇಖರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ತಮಿಳಿನಲ್ಲಿ 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಚಿತ್ರದಲ್ಲಿ ನಿರತರಾಗಿದ್ದು, 90ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಆಗಲೆ ಕನ್ನಡದಲ್ಲಿ [email protected] ಸಿನಿಮಾ ಅನೌನ್ಸ್ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲಿ ಲವ್ ಮಾಕ್ ಟೇಲ್ ರಿಮೇಕ್ ಮಾಡುತ್ತಿದ್ದಾರೆ. ಈ ಮೂರು ಸಿನಿಮಾದ ಕೆಲಸಗಳನ್ನು ಒಟ್ಟಿಗೆ ಪ್ರಾರಂಭ ಮಾಡುತ್ತಾರಂತೆ ನಾಗಶೇಖರ್. ಲಾಕ್ ಡೌನ್ ಮುಗಿಯುತ್ತಿದ್ದಂತೆ ಸಿನಿಮಾ ಚಿತ್ರೀಕರಣಗೆ ಹೊರಡಲಿದ್ದಾರೆ.


Click it and Unblock the Notifications











