Kousalya Supraja Rama Review: ಯೂತ್‌ಫುಲ್ ಲವ್ ಸ್ಟೋರಿ ಜತೆ ಸಂಬಂಧಗಳ ಪಾಠ ಮಾಡುವ 'ಕೌಸಲ್ಯಾ ಸುಪ್ರಜಾ ರಾಮ'
ಇಂದು ( ಜುಲೈ 28 ) ತಿಂಗಳ ಕೊನೆಯ ಶುಕ್ರವಾರ ಕನ್ನಡದಲ್ಲಿ ಬಿಡುಗಡೆಯಾದ ಹಲವು ಚಿತ್ರಗಳ ಪೈಕಿ ಹೆಚ್ಚು ನಿರೀಕ್ಷೆ ಹಾಗೂ ಚರ್ಚೆಯನ್ನು ಹುಟ್ಟುಹಾಕಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಶನ್‌ನ 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರ. ಬಿಡುಗಡೆಗೂ ಮುನ್ನ ಚಿತ್ರತಂಡದಿಂದ ಹೊರಬಂದಿದ್ದ ಚಿತ್ರದ ಟ್ರೈಲರ್ ಚಿತ್ರದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿತ್ತು.
ಲವ್ ಸ್ಟೋರಿಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಕಲೆ ಬಲ್ಲ ನಿರ್ದೇಶಕ ಶಶಾಂಕ್ ತಮ್ಮ ಕೊನೆಯ ಚಿತ್ರಗಳಾದ ಮುಂಗಾರು ಮಳೆ 2, ತಾಯಿಗೆ ತಕ್ಕ ಮಗ ಹಾಗೂ ಲವ್ 360ಗಳಲ್ಲಿ ತಮ್ಮ ಹಿಂದಿನ ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ ಹಾಗೂ ಕೃಷ್ಣ ಲೀಲಾ ರೀತಿಯ ಚಾಪು ಮೂಡಿಸುವಲ್ಲಿ ವಿಫಲವಾಗಿದ್ದರು. ಆದರೆ ಈ ಬಾರಿ ಒಳ್ಳೆಯ ಸಂದೇಶ ಸಾರುವ ಕಥೆಯನ್ನು ಇಟ್ಟುಕೊಂಡು ಲವ್ ಕಹಾನಿ ಹೇಳಿರುವ ಶಶಾಂಕ್ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಚಿತ್ರದ ಒನ್‌ಲೈನ್ ಸ್ಟೋರಿ ಏನು?
ಚಿಕ್ಕ ವಯಸ್ಸಿನಿಂದಲೇ ಅಪ್ಪ ಹೇಳಿಕೊಡುವ ಪುರುಷತ್ವದ ಪಾಠ ಕೇಳಿ ಬೆಳೆಯುವ ನಾಯಕ ಹೇಗೆ ಗಂಡು ಎಂಬ ಅಹಂನಿಂದ ಸಂಬಂಧಗಳ ಮೌಲ್ಯ ತಿಳಿಯದೇ ಹೇಗೆ ಬದುಕುತ್ತಾನೆ, ಲವ್ ಲೈಫ್ ಅನ್ನು ಹೇಗೆ ಹಾಳು ಮಾಡಿಕೊಳ್ತಾನೆ ಹಾಗೂ ಬಳಿಕ ಹೇಗೆ ಅದನ್ನು ಅರಿತು ಬದಲಾಗ್ತಾನೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.
ಚಿತ್ರದ ಕಥೆ ಏನು?
ಒನ್‌ಲೈನ್ ಸ್ಟೋರಿಯಲ್ಲಿ ಹೇಳಿದಂತೆ ನಾಯಕ ರಾಮ್ ತನ್ನ ತಂದೆ ಹೇಳಿಕೊಟ್ಟಂತೆ ಗಂಡು ಎಂಬ ಅಹಂನೊಂದಿಗೆ ಕಾಲೇಜು ಜೀವನದವರೆಗೂ ಬಂದಿರುತ್ತಾನೆ. ಆ ವೇಳೆ ಆಗುವ ನಾಯಕಿ ಶಿವಾನಿ ಪರಿಚಯದಿಂದ ಹುಡುಗಿಯರೆಂದರೆ ಆಗದ ನಾಯಕ ರಾಮ್ ಪ್ರೀತಿಯಲ್ಲಿ ಬೀಳುತ್ತಾನೆ. ಈ ಪ್ರೀತಿಯೂ ಸಹ ನಾಯಕನ ನಾನು ಗಂಡು ಎಂಬ ಅಹಂಕಾರಕ್ಕೆ ಸಿಲುಕಿ ಹಾಳಾಗುತ್ತೆ. ಬಳಿಕ ನಾಯಕ ತನ್ನ ತಂದೆ - ತಾಯಿ ಆರಿಸಿದ ಹುಡುಗಿಯನ್ನೇ ಮದುವೆಯಾಗ್ತಾನೆ. ಹೀಗೆ ಒಲ್ಲದ ಮನಸ್ಸಿನಿಂದ ನಿರ್ದಿಷ್ಟ ಕಾರಣವೊಂದಕ್ಕೆ, ಅಹಂ ಪಕ್ಕಕ್ಕಿಟ್ಟು ಮದುವೆಯಾಗುವ ನಾಯಕನ ಜೀವನ ಸರಿ ಹೋಗುತ್ತಾ ಅಥವಾ ಮತ್ತೆ ತನ್ನ ಅಹಂ ಅನ್ನು ಮುಂದುವರೆಸುತ್ತಾನಾ ಎಂಬುದೇ ಚಿತ್ರದ ಕಥೆ.
ಚಿತ್ರದ ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳು:
ಪಾಸಿಟಿವ್: ಲವ್ ಸ್ಟೋರಿಯಲ್ಲಿ ನಿರ್ದೇಶಕರು ಸಂಬಂಧಗಳ ಬೆಲೆಯನ್ನು ಹೇಳಿರುವುದು ಚಿತ್ರವನ್ನು ಪ್ರೇಕ್ಷಕರು ಕೊನೆಯವರೆಗೂ ನೋಡುವಂತೆ ಮಾಡಿದ್ದು, ಇದು ಚಿತ್ರದ ಪಾಸಿಟಿವ್ ಅಂಶಗಳಲ್ಲಿ ಪ್ರಮುಖ ಅಂಶ ಎನ್ನಬಹುದು. ನಾಯಕನಾಗಿ ಡಾರ್ಲಿಂಗ್ ಕೃಷ್ಣ ಹಾಗೂ ನಾಯಕಿಯರಾಗಿ ಬೃಂದಾ ಆಚಾರ್ ಮತ್ತು ಮಿಲನ ನಾಗರಾಜ್ ಅದ್ಭುತವಾಗಿ ನಟಿಸಿದ್ದಾರೆ. ಉಳಿದಂತೆ ನಾಯಕನ ಸ್ನೇಹಿತನ ಪಾತ್ರದಲ್ಲಿ ನಟಿಸಿರುವ ನಾಗಭೂಷಣ್, ತಂದೆ - ತಾಯಿ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಹಾಗೂ ಸುಧಾ ಬೆಳವಾಡಿ ಮತ್ತು ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ನಟನೆಗೆ ಫುಲ್ ಮಾರ್ಕ್ಸ್ ನೀಡಬಹುದು.
ನೆಗೆಟಿವ್: ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಇನ್ನೂ ಚೆನ್ನಾಗಿದ್ದರೆ ಇಂತಹ ಗಮನ ಸೆಳೆಯುವ ಕಥೆ ಪ್ರೇಕ್ಷಕರಿಗೆ ಇನ್ನೂ ಇಷ್ಟವಾಗುತ್ತಿತ್ತು. ಇದನ್ನು ಮೈನಸ್ ಪಾಯಿಂಟ್ ಎಂದು ಪರಿಗಣಿಸಬಹುದಾಗಿದೆ. ಕೆಲವೊಂದು ದೃಶ್ಯಗಳಲ್ಲಿ ಕಾಮಿಡಿ ಸಂಭಾಷಣೆ ಕ್ಲಿಕ್ ಆಗಿಲ್ಲ. ಚಿತ್ರದ ಕಥೆಯನ್ನು ಗೆಸ್ ಮಾಡಬಹುದಾಗಿದ್ದು, ಎಮೋಷನಲ್ ಅಂಶಗಳು ಹೆಚ್ಚು ಕಾಡುವ ಕಾರಣ ಅದು ಹೆಚ್ಚೇನೂ ಪರಿಣಾಮ ಬೀರಿಲ್ಲ.
ಹೃದಯ ಮುಟ್ಟುವ ಸಂಬಂಧಗಳ ಮೌಲ್ಯದ ಪಾಠ: ನಾಯಕನಿಗೆ ತನ್ನ ತಾಯಿಯ ಕುರಿತು ಆಗುವ ಆತ್ಮಾವಲೋಕನ ಹಾಗೂ ಆ ಸನ್ನಿವೇಶದಲ್ಲಿ ಬರುವ ದೃಶ್ಯಗಳು ಮತ್ತು ಸಂಭಾಷಣೆಗಳು ವೀಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಅಂತ್ಯದಲ್ಲಿ ಗಂಡ ಹಾಗೂ ಹೆಂಡತಿ ನಡುವೆ ಏನೇ ಸಮಸ್ಯೆ ಬಂದರೂ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಸಂದೇಶ ಸಹ ಸಿನಿ ರಸಿಕರ ಮನ ಗೆದ್ದಿದೆ.
ಒಟ್ಟಿನಲ್ಲಿ ಕೌಸಲ್ಯಾ ಸುಪ್ರಜಾ ರಾಮ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಲ್ಲ ಚಿತ್ರವಾಗಿದ್ದು, ಒಂದೊಮ್ಮೆ ಸಿನಿಮಾವನ್ನು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಬಹುದಾಗಿದೆ.


Click it and Unblock the Notifications











