ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ಯಾಕೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿ ತಿಂಗಳು ಕಳೆದಿದೆ. ಜೈಲುವಾಸ ದಿನದಿಂದ ದಿನಕ್ಕೆ ನರಕಯಾತನೆ ತಂದಿದೆ. ಹಾಸಿಗೆ, ದಿಂಬು ಸೇರಿ ಸರಿಯಾದ ಸೌಕರ್ಯ ಸಿಗುತ್ತಿಲ್ಲ ಎಂದು ದರ್ಶನ್ ವಕೀಲರ ಮೂಲಕ 15 ದಿನಗಳ ಹಿಂದೆ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿದೆ ಎಂದು ಹೇಳಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದ್ದರು. ಜಾಮೀನು ರದ್ದು ಮಾಡುವ ಜೊತೆಗೆ ಜೈಲಿನಲ್ಲಿ ವಿಶೇಷ ಸವಲತ್ತು ನೀಡದಂತೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿತ್ತು. ಹಾಗಾಗಿ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಈ ಬಾರಿ ಬಹಳ ಕಟ್ಟುನಿಟ್ಟಿನ ಕ್ರಮ ಕೊಂಡಿದ್ದಾರೆ. ಒಂದು ಬೆಡ್‌ಶೀಟ್ ಬಿಟ್ಟು ಬೇರೆನು ಕೊಟ್ಟಿಲ್ಲ ಎನ್ನಲಾಗ್ತಿದೆ. ಹಾಗಾಗಿ ಹೆಚ್ಚುವರಿ ಬೆಡ್‌ಶೀಟ್ ಹಾಗೂ ದಿಂಬು ಕೇಳಿ ದರ್ಶನ್ ಪರ ವಕೀಲರು ಸೆಷನ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇತ್ತೀಚೆಗೆ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ದರ್ಶನ್ ಮನವಿಯಂತೆ ಹಾಸಿಗೆ, ದಿಂಬು ನೀಡುವಂತೆ ಸೂಚಿಸಿತ್ತು. ವಿಚಾರಣೆ ವೇಳೆ ದರ್ಶನ್ ನನಗೆ ಕೊಂಚ ವಿಷ ಕೊಟ್ಟುಬಿಡಿ ಎಂದು ನ್ಯಾಯಾಧೀಶರ ಮುಂದೆಯೇ ಕೇಳಿದ್ದರು. ಜೈಲಿನಲ್ಲಿ ಓಡಾಟಕ್ಕೆ ಅವಕಾಶ ಇಲ್ಲ, ಕೈ ಎಲ್ಲಾ ಫಂಗಸ್ ಆಗಿದೆ, 20 ದಿನಗಳಿಂದ ಸೂರ್ಯನ ಬೆಳಕು ನೋಡದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಹಾಗಾಗಿ ಜೈಲಿನ ಮ್ಯಾನ್ಯುವಲ್ ಪ್ರಕಾರ ವಿಚಾರಣಾಧೀನ ಕೈದಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿತ್ತು. ವಾಕಿಂಗ್ ಮಾಡಲು ಅವಕಾಶ ನೀಡುವಂತೆ ಜೈಲು ಸಿಬ್ಬಂದಿಗೆ ಕೋರ್ಟ್ ಹೇಳಿತ್ತು. ಆದರೂ ಈವರೆಗೆ ನನಗೆ ಹಾಸಿಗೆ, ದಿಂಬು ಕೊಟ್ಟಿಲ್ಲ ಎಂದು ದರ್ಶನ್ ಮತ್ತೆ ಕೋರ್ಟ್ ಕದ ತಟ್ಟಿದ್ದಾರೆ.
ಕೋರ್ಟ್ ಆದೇಶವನ್ನು ಜೈಲು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಲು ಅವಕಾಶ ಕೊಟ್ಟಿದ್ದಾರೆ. ಇನ್ನುಳಿದಂತೆ ಯಾವುದೇ ಸೌಲಭ್ಯ ದರ್ಶನ್‌ಗೆ ನೀಡಿಲ್ಲ, ಹಾಸಿಗೆ ಹಾಗೂ ದಿಂಬು ಕೂಡ ಕೊಟ್ಟಿಲ್ಲ. ಹಿಂದೆ ಹೇಗೆ ನಡೆದುಕೊಳ್ಳುತ್ತಿದ್ದರೋ ಅದೇ ರೀತಿ ಮುಂದುವರೆಸಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೊಂದು ಕಡೆ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವುದು ನಿಜ ಎಂದು ಅಭಿಮಾನಿಗಳು ವೀಡಿಯೋ ವೈರಲ್ ಮಾಡಿದ್ದಾರೆ. ಬೆನ್ನು ನೋವಿಗೆ ಸರ್ಜರಿ ಮಾಡಿಸಬೇಕು ಎಂದು ಹೇಳಿ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ ರೆಗ್ಯುಲರ್ ಜಾಮೀನು ಸಿಕ್ಕಿತ್ತು. ಆದರೆ ದರ್ಶನ್ ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ. ದರ್ಶನ್ ಜಾಮೀನು ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇನ್ಮನವಿ ಸಲ್ಲಿಸಿತ್ತು. ವಿಚಾರಣೆ ವೇಳೆ ದರ್ಶನ್ ಬೆನ್ನು ನೋವಿಗೆ ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ ಎಂದು ಸರ್ಕಾರ ಪರ ವಕೀಲರು ವಾದಿಸಿದ್ದರು. ಈ ವಿಚಾರವನ್ನು ಸುಪ್ರೀಂ ಗಂಭೀರವಾಗಿ ಪರಿಗಣಿಸಿತ್ತು.
ಬೆನ್ನು ನೋವಿನ ನಡುವೆಯೂ ದರ್ಶನ್ 'ಡೆವಿಲ್' ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಎಂದು ಸಂಭಾಷಣೆಕಾರ ಕಾಂತರಾಜ್ ಹೇಳಿದ್ದಾರೆ. ನಾಯಕಿಯನ್ನು ಹೊತ್ತುಕೊಂಡು ಬರುವ ಸನ್ನಿವೇಶದಲ್ಲಿ ನಟಿಸಿದ ಬಳಿಕ ದರ್ಶನ್ ನೋವು ತಾಳಲಾರದೇ ಸೆಟ್‌ನಲ್ಲಿ ಕುಸಿದು ಮಲಗಿಬಿಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ ನೋಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಡಿಸೆಂಬರ್ 12ರಂದು 'ಡೆವಿಲ್' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











