ದರ್ಶನ್‌ಗೂ ಮುನ್ನ ನ್ಯೂಯಾರ್ಕ್ ಟೈಮ್ಸ್‌ಸ್ಕ್ವೇರ್ ಮೇಲೆ ಅಪ್ಪು ದರ್ಶನ; ನಿಮ್ಮ ಫೋಟೊ ಕೂಡ ಹಾಕಿಸಬಹುದು!
ಇತ್ತೀಚೆಗೆ ನ್ಯೂಯಾರ್ಕ್ ಪ್ರತಿಷ್ಠಿತ ಟೈಮ್ ಸ್ಕ್ವೇರ್‌ನಲ್ಲಿ ನಟ ದರ್ಶನ್ ಫೋಟೊ ಪ್ರದರ್ಶನಗೊಂಡಿತ್ತು. ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನಿಗಾಗಿ ಈ ಗೌರವ ಸಮರ್ಪಿಸಿ ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಫೋಟೋಟೈಮ್ ಸ್ಕ್ವೇರ್ ಬಿಲ್‌ಬೋರ್ಡ್ ಮೇಲೆ ರಾರಾಜಿಸಿತ್ತು.
ಈ ಹಿಂದೆ ಬಾಲಿವುಡ್ ನಟ, ನಟಿಯರು ಫೋಟೊ, ವೀಡಿಯೋಗಳು ಕೂಡ ಇದೇ ರೀತಿ ಟೈಮ್ ಸ್ಕ್ವೇರ್ ಬಿಲ್‌ಬೋರ್ಡ್ ಮೇಲೆ ಕಂಡಿತ್ತು. ಅದನ್ನು ನೋಡಿ ಅಭಿಮಾನಿಗಳು ಪುಳಕಿತರಾಗಿದ್ದರು. ಮೊದಲೆಲ್ಲಾ ಖ್ಯಾತನಾಮರ ಫೋಟೊ, ವೀಡಿಯೋಗಳು ಮಾತ್ರ ಅಲ್ಲಿ ಪ್ರದರ್ಶಿಸಲಾಗುತಿತ್ತು. ಈಗ ನೀವು ಕೂಡ ನಿಮ್ಮ ಫೋಟೊ ಅಥವಾ ನಿಮ್ಮ ಪ್ರೀತಿ ಪಾತ್ರರ ಫೋಟೊವನ್ನು ಟೈಮ್ ಸ್ಕ್ವೇರ್ ಮೇಲೆ ಬರುವಂತೆ ಮಾಡಬಹುದು. ಅದಕ್ಕೆ ಹಣ ಪಾವತಿಸಬೇಕು ಅಷ್ಟೆ.

2020ರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಫೋಟೊ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್‌ನಲ್ಲಿ ಪ್ರದರ್ಶನವಾಗಿತ್ತು. ಅದಕ್ಕೂ ಮುನ್ನ 'ಟ್ಯೂಬ್‌ಲೈಟ್' ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಸಲ್ಮಾನ್ ಖಾನ್ ಫೋಟೊವನ್ನು ಅಲ್ಲಿ ಹಾಕಿಸಲಾಗಿತ್ತು. 2021ರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟನೆಯ 'ದಿ ಮ್ಯಾಟ್ರಿಕ್ಸ್ ರೆಸುರೆಕ್ಷನ್ಸ್' ಚಿತ್ರದ ಪೋಸ್ಟರ್ ರಾರಾಜಿಸಿತ್ತು.
2021ರಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದ ಜಾಹೀರಾತು ಕೂಡ ಟೈಮ್ಸ್‌ಸ್ಕ್ವೇರ್ ಬಿಲ್ ಬೋರ್ಡ್ ಮೇಲೆ ಪ್ರದರ್ಶನವಾಗಿತ್ತು. ರಣ್‌ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಜೋಡಿಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ 'ತುಮ್ ಕ್ಯಾ ಮಿಲೇ' ಸಾಂಗ್ ಅಲ್ಲಿ ಪ್ರದರ್ಶಿಸಲಾಗಿತ್ತು.
ಎರಡು ವರ್ಷಗಳ ಹಿಂದೆ ತಮಿಳು ನಟ ದಳಪತಿ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಫೋಟೊವನ್ನು ಅಭಿಮಾನಿಗಳು ಟೈಮ್ಸ್‌ಸ್ಕ್ವೇರ್‌ನಲ್ಲಿ ಹಾಕಿಸಿದ್ದರು. ಕಾರ್ತಿಕ್ ಆರ್ಯನ್ ಫೋಟೊವನ್ನು 2 ವರ್ಷಗಳ ಹಿಂದೆ ಅಲ್ಲಿ ಪ್ರದರ್ಶಿಸಿದ್ದು ವೈರಲ್ ಆಗಿತ್ತು. ಇನ್ನು ತೆಲುಗು ನಟ ಮಹೇಶ್ ಬಾಬು ಪುತ್ರಿ ಸಿತಾರಾ ವಜ್ರಾಭರಣದ ಜಾಹೀರಾತಿನಲ್ಲಿ ಮಿಂಚಿದ್ದರು. ಆ ಜಾಹೀರಾತು ಫೋಟೊಗಳು ರಾರಾಜಿಸಿತ್ತು.
ಕಿರುತೆರೆ ನಟ ಜೈ ಭಾನುಶಾಲಿ ಮತ್ತು ಮಹಿ ವಿಜ್ ದಂಪತಿ ಮಗಳ ಫೋಟೊವನ್ನು ಕೂಡ ಅಭಿಮಾನಿಯೊಬ್ಬರು ಟೈಮ್ಸ್‌ಸ್ಕ್ವೇರ್ ಬಿಲ್‌ಬೋರ್ಡ್ ಮೇಲೆ ಹಾಕಿಸಿದ್ದರು. ಅಂದಹಾಗೆ ನ್ಯೂಯಾರ್ಕ್ ನಗರದ ದೊಡ್ಡ ಕಟ್ಟಡದ ಬಿಲ್‌ಬೋರ್ಡ್‌ನಲ್ಲಿ ಕಾಣಿಸಿಕೊಳ್ಳುವುದು ಮೊದಲ ಬಹಳ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಈಗ ಅದು ಬಹಳ ಸುಲಭ ಎನ್ನುವಂತಾಗಿದೆ. 31 ಅಡಿ ಎತ್ತರ ಮತ್ತು 55 ಅಡಿ ಅಗಲದ ಈ ಜಾಹೀರಾತು ಫಲಕ, ನ್ಯೂಯಾರ್ಕ್ 1560 ಬ್ರಾಡ್‌ವೇಯ 46 ಮತ್ತು 47ನೇ ಸ್ಟ್ರೀಟ್ ನಡುವಿನ ಪೀಲೆ ಸಾಕರ್ ಸ್ಟೋರ್ ಮೇಲಿದೆ.
150 ಅಮೆರಿಕನ್ ಡಾಲರ್ ಅಂದರೆ ಹೆಚ್ಚು ಕಮ್ಮಿ 15 ಸಾವಿರ ರೂಪಾಯಿ ಹಣವನ್ನು ನೀವು ಪಾವತಿಸಿ ನಿಮ್ಮ ಫೋಟೊ, ವೀಡಿಯೋ ಅಲ್ಲಿ ಪ್ರದರ್ಶಿಸಬಹುದು. ಜಾಹೀರಾತು ಫಲಕದಲ್ಲಿ ಬೇರೆ ಬೇರೆ ಜಾಹೀರಾತುಗಳು ಪ್ರದರ್ಶನವಾಗುತ್ತಿರುತ್ತದೆ. ನೀವು 15 ಅಮೆರಿಕನ್ ಡಾಲರ್ ಕೊಟ್ಟು ಸ್ಲಾಟ್ ಬುಕ್ ಮಾಡಿಕೊಂಡರೆ ಒಂದು ದಿನದ 24 ಗಂಟೆಗಳಲ್ಲಿ ಪ್ರತಿ ಗಂಟೆಗೆ ಒಮ್ಮೆ 15 ಸೆಕೆಂಡ್‌ಗಳ ಸಮಯ ನಿಮ್ಮ ಫೋಟೊ, ಸಂದೇಶ ಅಲ್ಲಿ ಪ್ರದರ್ಶನವಾಗುತ್ತದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಹಣ ಪಾವತಿಸಿ ನಿಮ್ಮ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು.
ಇತ್ತೀಚೆಗೆ ದರ್ಶನ್ ಅಭಿಮಾನಿ ತಮ್ಮ ನೆಚ್ಚಿನ ನಟನ ಫೋಟೊವನ್ನು ಟೈಮ್ಸ್‌ಸ್ಕ್ವೇರ್ ಬಿಲ್‌ಬೋರ್ಡ್ ಮೇಲೆ ಹಾಕಿಸಿ ಸಂಭ್ರಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಅಭಿಮಾನಿಗಳು ಹಂಚಿಕೊಂಡು ವೈರಲ್ ಮಾಡಿದ್ದರು. ಫೋಟೊ ಪಕ್ಕ "ಜೀವನದಲ್ಲಿ ಏನೇ ಬಂದರೂ ಕೂಡ ನಾವು ಒಟ್ಟಿಗೆ ಎದುರಿಸುತ್ತೇವೆ, ಅದನ್ನು ದಾಟಿಕೊಂಡು ಮುಂದೆ ಬರುತ್ತೇವೆ, ಲವ್ ಯೂ ಡಿ ಬಾಸ್" ಎಂದು ಹಾಕಲಾಗಿತ್ತು.


Click it and Unblock the Notifications