ತೆಲುಗು ನಟನ ಚಿತ್ರಕ್ಕೆ ಬೆಂಬಲವಾಗಿ ನಿಂತ ದಾಸ ದರ್ಶನ್ ಹಾಗೂ ಕಿಚ್ಚ ಸುದೀಪ್
ಸದ್ಯ ಎಲ್ಲಾ ಇಂಡಸ್ಟ್ರಿಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಪರ್ವ ನಡೀತಿದೆ. ಒಂದು ಭಾಷೆಯಲ್ಲಿ ನಿರ್ಮಾಣವಾಗುವ ಚಿತ್ರವನ್ನು ಐದೈದು ಭಾಷೆಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಇನ್ನು ಸಿನಿಮಾ ಪ್ರಚಾರಕ್ಕೆ ಆಯಾ ಭಾಷೆಯ ಸ್ಟಾರ್ ನಟರನ್ನು ಬಳಸಿಕೊಳ್ಳುವ ಪ್ರಯತ್ನವೂ ನಡೀತಿದೆ.
ಆಯಾ ಭಾಷೆಯಲ್ಲಿ ತಮ್ಮ ಆಪ್ತರನ್ನು ಪ್ರೀ ರಿಲೀಸ್ ಈವೆಂಟ್‌ಗೆ ಕರೆಯೋದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸಾಂಗ್ಸ್, ಟ್ರೈಲರ್ ಶೇರ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಇತ್ತೀಚೆಗೆ ಹೊಸ ಟ್ರೆಂಡ್ ಎನ್ನಬಹುದು. ಕನ್ನಡ ಸಿನಿಮಾ ಸ್ಟಾರ್‌ಗಳು ಬೇರೆ ಭಾಷೆಯ ಸಿನಿಮಾ ಟೀಸರ್, ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಬೆಂಬಲ ಸೂಚಿಸುತ್ತಾ ಬರ್ತಿದ್ದಾರೆ.

ಸದ್ಯ ತೆಲುಗು ನಟ ಮಂಚು ಮನೋಜ್ ನಟನೆಯ 'ಮಿರೈ' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಇದನ್ನು ನಟರಾದ ದರ್ಶನ್ ಹಾಗೂ ಸುದೀಪ್ ಇಬ್ಬರೂ ಹಂಚಿಕೊಂಡು ತಂಡಕ್ಕೆ ಶುಭ ಕೋರಿದ್ದಾರೆ. ನಟ ಮಂಚು ಮನೋಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿ ಅವರ ಮುಂದಿನ ಸಿನಿಮಾ ಟೀಸರ್ ರಿವೀಲ್ ಆಗಿದೆ. ನಟ ದರ್ಶನ್ ಸಾಮಾನ್ಯವಾಗಿ ಈ ರೀತಿ ಬೇರೆ ಭಾಷೆಯ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡಲ್ಲ. ಆದರೆ 'ಮಿರೈ' ಬಗ್ಗೆ ಪೋಸ್ಟ್ ಮಾಡಿರುವುದು ಕೆಲವರಿಗೆ ಅಚ್ಚರಿ ತಂದಿದೆ.
ತೆಲುಗು ಖ್ಯಾತ ನಟ ಮೋಹನ್ ಬಾಬು ಪುತ್ರ ಮಂಚು ಮನೋಜ್. ತಂದೆ ಹಾದಿಯಲ್ಲೇ ಅವರ ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಮನೋಜ್ ಸಹೋದರ ವಿಷ್ಣು ಕನ್ನಡ 'ಬೇಡರ ಕಣ್ಣಪ್ಪ' ಸಿನಿಮಾ ರೀಮೆಕ್‌ನಲ್ಲಿ ನಟಿಸುತ್ತಿದ್ದಾರೆ. ಸಹೋದರಿ ಮಂಚು ಲಕ್ಷ್ಮಿ ಕೂಡ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯ ಮಂಚು ಮನೋಜ್ ಕೂಡ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.
7 ವರ್ಷಗಳ ಬಳಿಕ ಮಂಚು ಮನೋಜ್ 'ಮಿರೈ' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗಿದೆ. 'ಹನುಮಾನ್' ಚಿತ್ರದಲ್ಲಿ ನಟಿಸಿಸ್ದ ತೇಜಾ ಸಜ್ಜಾ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಮನೋಜ್ 'ದಿ ಬ್ಲ್ಯಾಕ್ ಸ್ವಾರ್ಡ್' ಎನ್ನುವ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಚು ಮನೋಜ್ ತಮ್ಮ ಉದ್ದನೆಯ ಕೂದಲು ಮತ್ತು ಸನ್ ಗ್ಲಾಸ್ ತೊಟ್ಟು ಗಮನ ಸೆಳೆದಿದ್ದಾರೆ.

ಹಾಲಿವುಡ್ ರೇಂಜ್‌ನಲ್ಲಿ ಬಹಳ ಅದ್ಧೂರಿಯಾಗಿ 'ಮಿರೈ' ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಕಾರ್ತಿಕ್ ಗಟ್ಟಮನೇನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಟಿ. ಜಿ ವಿಶ್ವ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಚಿತ್ರದಲ್ಲಿ ಮನೋಜ್ ಪಾತ್ರ ಪರಿಚಯದ ಸಣ್ಣ ಟೀಸರ್ ಮಾತ್ರ ಬಂದಿದೆ. ಮುಂದಿನ ವರ್ಷ ಏಪ್ರಿಲ್ 18ಕ್ಕೆ ಸಿನಿಮಾ ತೆರೆಗೆ ಬರಲಿದೆ. ಥ್ರೀಡಿಯಲ್ಲೂ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ.
'ಮಿರೈ' ಟೀಸರ್ ಹಂಚಿಕೊಂಡಿರುವ ಸುದೀಪ್ "ಹುಟ್ಟುಹಬ್ಬದ ಶುಭಾಶಯಗಳು ಸಹೋದರ ಮನೋಜ್.. ದಿ ಬ್ಲ್ಯಾಕ್ ಸ್ವಾರ್ಡ್ ನೋಡಲು ಸಖತ್ತಾಗಿದೆ. ನನಗೆ ನಿನ್ನ ಸ್ಕ್ರೀನ್ ಪ್ರಸೆನ್ಸ್, ಎನರ್ಜಿ ಸದಾ ಇಷ್ಟ. 'ಮಿರೈ' ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಟ ದರ್ಶನ್ ಕನ್ನಡದಲ್ಲೇ ಪೋಸ್ಟ್ ಆರಂಭಿಸಿದ್ದಾರೆ. ಆತ್ಮೀಯ ಮನೋಜ್ ಸಹೋದರನಿಗೆ ಜನ್ಮದಿನದ ಶುಭಾಶಯಗಳು. ದಿ ಬ್ಲ್ಯಾಕ್ ಸ್ವಾರ್ಡ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಬರೆದು ಟೀಸರ್ ಶೇರ್ ಮಾಡಿದ್ದಾರೆ.


Click it and Unblock the Notifications











