ಪತ್ನಿ ವಿಜಯಲಕ್ಷ್ಮಿ ಸಮೇತ ಕಾಮಕ್ಯ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿದ ನಟ ದರ್ಶನ್
ಸ್ಯಾಂಡಲ್‌ವುಡ್‌ನಲ್ಲೀಗ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಸಂಘರ್ಷ ಭಾರೀ ಸದ್ದು ಮಾಡ್ತಿದೆ. ಮತ್ತೊಂದು ಕಡೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕೂಡ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದೆಲ್ಲದರ ನಡುವೆ ಅತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತ ಕಾಮಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿರುವ ಇತಿಹಾಸ ಪ್ರಸಿದ್ಧ ಕಾಮಾಕ್ಯ ದೇವಿ ಆಲಯಕ್ಕೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಭೇಟಿ ನೀಡಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಇತ್ತೀಚೆಗೆ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ಪತ್ನಿ, ಮಗನ ಸಮೇತ ದರ್ಶನ್ ಥಾಯ್ಲೆಂಡ್‌ಗೆ ತೆರಳಿದ್ದರು. 10 ದಿನಗಳ ಕಾಲ ಅಲ್ಲೇ ಉಳಿದಿದ್ದರು. 3 ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಬಂದಿದ್ದರು.

ಇದೀಗ ದಿಢೀರನೆ ದರ್ಶನ್ ಅಸ್ಸಾಂಗೆ ತೆರಳಿ ಕಾಮಾಕ್ಯ ದೇವಿ ದರ್ಶನ ಪಡೆದು ಹರಕೆ ತೀರಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿರುವ ಮೇಲ್ಮನವಿ ಆದೇಶ ಶೀಘ್ರದಲ್ಲೇ ಹೊರ ಬೀಳಲಿದೆ. ಈ ಬಗ್ಗೆ ದರ್ಶನ್‌ಗೆ ಭೀತಿ ಶುರುವಾಗಿದೆ ಎಂದು ಚರ್ಚೆ ಆಗುತ್ತಿದೆ. ಒಂದು ವೇಳೆ ಜಾಮೀನು ರದ್ದಾದರೆ ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದು. ಹಾಗಾಗಿ ದರ್ಶನ್ ಮತ್ತೆ ಟೆಂಪಲ್ ರನ್ ಶುರು ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಇದೇ ಕಾಮಕ್ಯಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಆಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದರು. ದೇವರ ಅನುಗ್ರಹದಿಂದ ದರ್ಶನ್ ಜಾಮೀನು ಸಿಕ್ಕಿ ಹೊರಬಂದಿದ್ದರು ಎನ್ನುವಂತೆ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದರು. ಅದಕ್ಕೂ ಮುನ್ನ ಕೊಲ್ಲೂರು, ಬಂಡೆ ಮಹಾಕಾಳೀ ಸೇರಿದಂತೆ ಹಲವು ದೇವಸ್ಥಾನಗಳಿಗೆ ಅವರು ವಿಜಯಲಕ್ಷ್ಮಿ ದರ್ಶನ್ ಭೇಟಿ ನೀಡಿದ್ದರು.
ದರ್ಶನ್ ಇತ್ತೀಚೆಗೆ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಬರ್ತಿದ್ದಾರೆ. ಕೇರಳದ ಕೊಟ್ಟಿಯೂರು ಆಲಯಕ್ಕೆ ಕೂಡ ಪತ್ನಿ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದಿದ್ದರು. ಅಸ್ಸಾಂನ ಗುವಾಹಟಿಯ ಪಶ್ಚಿಮ ಭಾಗದಲ್ಲಿರುವ ನೀಲಾಚಲ್ ಬೆಟ್ಟಗಳಲ್ಲಿ ಕಾಮಾಕ್ಯ ಆಲಯ ಇದೆ. ಸತಿ ದೇವಿಗೆ ಸಂಬಂಧಿಸಿದ 51 ಶಕ್ತಿ ಪೀಠಗಳಲ್ಲಿ ಇದು ಒಂದು. ಪ್ರತಿದಿನ ಸಾವಿರಾರು ಭಕ್ತರು ಅಲ್ಲಿಗೆ ಭೇಟಿ ನೀಡುತ್ತಾರೆ. ಕರ್ನಾಟಕದಿಂದಲೂ ಕೆಲವರು ಹೋಗುತ್ತಿರುತ್ತಾರೆ. ಅಭಿಮಾನಿಗಳು ಆಲಯದಲ್ಲಿ ದರ್ಶನ್ ಅವರನ್ನು ನೋಡಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ದುಷ್ಟಶಕ್ತಿಗಳಿಂದ ಮುಕ್ತಿ ಪಡೆಯಲು ಕೆಲವರು ಹರಕೆ ಹೊತ್ತು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇನ್ನು ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದೆ. ಅಕ್ಟೋಬರ್ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. ಶೀಘ್ರದಲ್ಲೇ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.
'ಡೆವಿಲ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ. ಬಳಿಕ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡಬೇಕಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರವನ್ನು ಶೈಲಜಾ ನಾಗ್ ನಿರ್ಮಾಣ ಮಾಡಲಿದ್ದಾರೆ. ಇನ್ನು ಹಲವರಿಗೆ ದರ್ಶನ್ ಕಾಲ್‌ಶೀಟ್ ಕೊಡಲು ಮನಸ್ಸು ಮಾಡಿದ್ದಾರೆ. ಆದರೆ ಯಾವ ಸಿನಿಮಾಗಳು ಮುಂದೆ ನಿರ್ಮಾಣ ಆಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











