ಎರಡೂವರೆ ತಿಂಗಳ ಬಳಿಕ ಜೈಲಿನಿಂದ ಹೊರಬಂದ ದರ್ಶನ್ ಲುಕ್ ಹೇಗಿದೆ? ಇಲ್ಲಿದೆ ವಿಡಿಯೋ
ರೇಣುಕಾಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆರೋಪಿಗಳ ಜಾಮೀನು ರದ್ದಾಗಿತ್ತು. ಆಗಸ್ಟ್ 14ರಂದು ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ದರ್ಶನ್ ತೂಕ ಕಳೆದುಕೊಂಡು ತೆಳ್ಳಗಾಗಿದ್ದಾರೆ, ಸರಿಯಾದ ಸೌಲಭ್ಯ ಇಲ್ಲದೇ ಕಂಗೆಟ್ಟಿದ್ದಾರೆ ಅಂತ ಸುದ್ದಿ ಆಗಿತ್ತು. ಅಂತೂ ಇಂತೂ 81 ದಿನಗಳ ಬಳಿಕ ಕೋರ್ಟ್ ವಿಚಾರಣೆಗಾಗಿ ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ.
ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ವಿಚಾರಣೆಗಾಗಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಜೈಲಿನಿಂದ ಕರೆದುಕೊಂಡು ಬರಲಾಗಿತ್ತು. ಎಲ್ಲಾ 17 ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಲಾಗಿತ್ತು. ದೋಷಾರೋಪ ಪ್ರಕ್ರಿಯೆ ವಿಚಾರಣೆಗಾಗಿ ಕರೆದುಕೊಂಡು ಬರಲಾಗಿತ್ತು. ಎರಡೂವರೆ ತಿಂಗಳ ಬಳಿಕ ದರ್ಶನ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ದರ್ಶನ್ ಜೈಲಿನಿಂದ ಹೊರ ಬಂದು ಪೊಲೀಸ್ ವಾಹನ ಏರಿ ಕೋರ್ಟ್‌ಗೆ ಆಗಮಿಸಿರುವ ಫೋಟೊ, ವೀಡಿಯೋ ವೈರಲ್ ಆಗ್ತಿದೆ.

ನೀಲಿ ಬಣ್ಣದ ಜಾಕೆಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ. ಬಳಿಕೆ ಸಿಎಆರ್ ವಾಹನದಲ್ಲಿ ಕುಳಿತಾಗ ಮುಖಕ್ಕೆ ಮಾಸ್ತ್ ಧರಿಸಿದ್ದಾರೆ. ವಿಗ್ ಇಲ್ಲದೇ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲಿನಲ್ಲಿ ವಿಗ್ ಮೇಂಟೇನ್ ಮಾಡುವುದು ಕಷ್ಟ ಎಂದು ತೆಗೆದಿದ್ದಾರೆ. ನಗುತ್ತಲೇ ವ್ಯಾನ್ ಇಳಿದು ದರ್ಶನ್ ಕೋರ್ಟ್ ಒಳಗೆ ಹೋದರೂ ಮುಖದಲ್ಲಿ ಆತಂಕ ಕಾಣುತ್ತಿತ್ತು. 5ರಿಂದ 10 ಕೆಜಿ ತೂಕ ಇಳಿದು ಸಣ್ಣ ಆಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.
ಕಳೆದ ವರ್ಷ ಜೂನ್ 8ರಂದು ರೇಣುಕಾಸ್ವಾಮಿ ಅಪಹರಣ ಹಾಗೂ ಹತ್ಯೆ ನಡೆದಿತ್ತು. ಬಳಿಕ ಜೂನ್ 9ರಂದು ಆತನ ಶವ ಸಿಕ್ಕಿತ್ತು. ಜೂನ್ 11ರಂದು ದರ್ಶನ್ ಸೇರಿ ಎಲ್ಲಾ ಆರೋಪಿಗಳ ಬಂಧನವಾಗಿತ್ತು. ಬಳಿಕ ವಿಚಾರಣೆ ನಡೆದು ನ್ಯಾಯಾಂಗ ಬಂಧನಕ್ಕೆ ಆರೋಪಿಗಳನ್ನು ಒಪ್ಪಿಸಿದ್ದರು. ಅಕ್ಟೋಬರ್ 30ರಂದು ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದರು.
ಡಿಸೆಂಬರ್‌ನಲ್ಲಿ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಹಾಗಾಗಿ ಎಲ್ಲರೂ ನಿರಾಳರಾಗಿದ್ದರು. ಜೈಲಿನಿಂದ ಹೊರಬಂದಿದ್ದ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣ, ಡಬ್ಬಿಂಗ್ ಸಹ ಮುಗಿಸಿದ್ದರು. ಆದರೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡುವಂತೆ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಜಾಮೀನು ರದ್ದು ಮಾಡಿತ್ತು. ಹಾಗಾಗಿ ಆಗಸ್ಟ್ 14ರಂದು ದರ್ಶನ್ ಸೇರಿ ಎಲ್ಲಾ ಆರೋಪಿಗಳು ಮತ್ತೆ ಕೇಂದ್ರ ಕಾರಾಗೃಹ ಸೇರಿದ್ದರು.


Click it and Unblock the Notifications











