ರೇಣುಕಾಸ್ವಾಮಿ ಮೊಬೈಲ್ ಡೇಟಾ ಸಂಗ್ರಹಿಸಿದ ಪೊಲೀಸರು; ಅಶ್ಲೀಲ ಮೆಸೇಜ್‌ಗೆ ಪವಿತ್ರಾ ಗೌಡ ರಿಪ್ಲೇ ಏನಿತ್ತು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ. ಒಂದ್ಕಡೆ ಆರೋಪಿಗಳು ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮತ್ತೊಂದು ಕಡೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕಾಗಿ ಪ್ರಕರಣದ ಸಂಬಂಧ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.
ಆರೋಪಿಗಳು ರೇಣುಕಾಸ್ವಾಮಿ ಹತ್ಯೆಯ ಬಳಿಕ ಆತನ ಮೊಬೈಲ್ ಫೋನ್ ಅನ್ನು ರಾಜಕಾಲುವೆಯಲ್ಲಿ ಎಸೆದಿದ್ದರು. ಆ ಫೋನ್ ಹುಡುಕಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಫೋನ್ ಸಿಕ್ಕಿರಲಿಲ್ಲ. ಇದೀಗ ಅದೇ ನಂಬರ್‌ನ ಹೊಸ ಸಿಮ್ ಖರೀದಿಸಿ ರಿಟ್ರೀವ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮಾಹಿತಿಗಳನ್ನು ಸಂಪೂರ್ಣವಾಗಿ ಜಾಲಾಡುತ್ತಿದ್ದಾರೆ.

ರೇಣುಕಾಸ್ವಾಮಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾ ಆಪ್‌ಗಳ ಮಾಹಿತಿ ಕಲೆ ಹಾಕಿದ್ದಾರೆ. ಆತ ಯಾರಿಗೆಲ್ಲಾ ಮೆಸೇಜ್‌ಗಳನ್ನು ಕಳುಹಿಸಿದ್ದ. ಅದಕ್ಕೆ ಏನೆಲ್ಲಾ ರಿಪ್ಲೇಗಳು ಬಂದಿತ್ತು ಎನ್ನುವ ವಿವರಗಳು ಲಭ್ಯವಾಗಿದೆ ಎನ್ನಲಾಗ್ತಿದೆ. ಇದು ಪ್ರಕರಣದ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ ಎಂದು ಟಿವಿ9 ವಾಹಿನಿ ವರದಿ ಮಾಡಿದೆ. ಇನ್ನು ಇದರಲ್ಲಿ ನಟಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿದ್ದ ಅಶ್ಲೀಲ ಮೆಸೇಜ್ ಏನು? ಅದಕ್ಕೆ ಆಕೆಯ ರಿಪ್ಲೇ ಏನು? ಎನ್ನುವುದು ಗೊತ್ತಾಗಿದೆ ಎನ್ನಲಾಗ್ತಿದೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಮೆಸೇಜ್‌ಗಳೇ ಆತನಿಗೆ ಮುಳುವಾಗಿತ್ತು. ಈ ಬಗ್ಗೆ ಆಕೆ ದರ್ಶನ್‌ಗೆ ಹೇಳಿದ್ದಳು. ಇದರಿಂದ ಕೆರಳಿದ ದರ್ಶನ್ ಆಪ್ತರ ಮೂಲಕ ರೇಣುಕಾಸ್ವಾಮಿಯನ್ನು ಅಪಹರಿಸಿ ಬುದ್ಧಿ ಕಲಿಸಲು ಮುಂದಾಗಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿ ಹಾಕಿ ಥಳಿಸಲಾಗಿತ್ತು. ಈ ವೇಳೆ ಆತನ ಪ್ರಾಣವೇ ಹೋಗಿದೆ ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ತಮಗೂ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಎಂದು ಕೆಲ ನಟಿಯರು ಆರೋಪಿಸುತ್ತಿದ್ದಾರೆ. ಹಾಗಾಗಿ ಆತ ಯಾರೆಗೆಲ್ಲಾ ಏನೇನು ಮೆಸೇಜ್ ಕಳುಹಿಸಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಹತ್ಯೆ ಬೆನ್ನಲ್ಲೇ ಆರೋಪಿಗಳು ಆತನ ಫೋನ್ ಬಿಸಾಕಿದ್ದರು. ಹಾಗಾಗಿ ಅದರ ಮಾಹಿತಿ ಸಂಗ್ರಹಿಸುವುದು ಕೊಂಚ ಕಷ್ಟವಾಗಿತ್ತು. ಇದೀಗ ಆ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.
ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಬಳಿಕ ಸಾಕ್ಷ್ಯ ನಾಶಕ್ಕೆ ಸಾಕಷ್ಟು ಪ್ರಯತ್ನ ನಡೆಸಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ. ಅದೇ ಕಾರಣಕ್ಕೆ ಪಟ್ಟಣಗೆರೆ ಶೆಡ್‌ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿದ್ದರು. ಇದೀಗ ಪೊಲೀಸರು ಅದನ್ನು ಕೂಡ ರಿಟ್ರೀವ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ವಾಹನದಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿದ್ದವರ ಫಿಂಗರ್ ಪ್ರಿಂಟ್ ಸಹ ಮ್ಯಾಚ್ ಆಗಿದೆ ಎಂದು ಮಾಹಿತಿ ಪೊಲೀಸರು ಸಿಕ್ಕಿದೆ.
ಈಗಾಗಲೇ ದರ್ಶನ್ ಸೇರಿ ಎಲ್ಲಾ ಆರೋಪಿಗಳು 50 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಶೀಘ್ರದಲ್ಲೇ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಯಿದೆ.


Click it and Unblock the Notifications











