ರಾಜಕೀಯ ರಂಗದ ಗೆಳೆಯರೊಂದಿಗೆ ಔತಣಕೂಟದಲ್ಲಿ ದರ್ಶನ್ ಭಾಗಿ
ಹಲವು ತಿಂಗಳಿನಿಂದಲೂ ಬಿಡುವಿನ ಸಮಯ ಕಳೆಯುತ್ತಿದ್ದಾರೆ ನಟ ದರ್ಶನ್. ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ, 'ರಾಜವೀರ ಮದಕರಿ ನಾಯಕ' ಸಿನಿಮಾದ ಒಂದು ಹಂತದ ಚಿತ್ರೀಕರಣ ಮುಗಿಸಿರುವ ದರ್ಶನ್ ಪ್ರಸ್ತುತ ಬಿಡುವಾಗಿದ್ದಾರೆ.
ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಬಿಡುವಾಗಿರುವ ನಟ ದರ್ಶನ್, ಪ್ರವಾಸ, ಗೆಳೆಯರ ಭೇಟಿ, ವನ್ಯಜೀವಿ ಛಾಯಾಗ್ರಹಣ, ದೇವಸ್ಥಾನಗಳ ಭೇಟಿ, ಫಾರಂ ನಲ್ಲಿ ಕೃಷಿ, ಪಶು ಸಂಗೋಪನೆಗಳಲ್ಲಿ ತೊಡಗಿಕೊಂಡಿದ್ದಾರೆ.
ಇದೀಗ ಇದೇ ಬಿಡುವಿನ ಸಮಯದಲ್ಲಿ ರಾಜಕಾರಣಿ ಮಿತ್ರರನ್ನು ಭೇಟಿ ಮಾಡಿದ್ದಾರೆ ನಟ ದರ್ಶನ್. ಹೌದು, ಬಿಜೆಪಿ ಸಂಸದ ಪಿ.ಸಿ.ಮೋಹನ್, ನಟ, ನಿರ್ಮಾಪಕ ಹಾಗೂ ಜೆಡಿಎಸ್ ಮುಖಂಡ ಸಿ.ಆರ್.ಮನೋಹರ್ ಅವರುಗಳನ್ನು ನಟ ದರ್ಶನ್ ಭೇಟಿ ಮಾಡಿದ್ದಾರೆ.

ಔತಣಕೂಟ ಏರ್ಪಡಿಸಿದ್ದ ಸಿ.ಆರ್.ಮನೋಹರ್
ನಿರ್ಮಾಪಕ, ಜೆಡಿಎಸ್ ಮುಖಂಡರೂ ಆಗಿರುವ ಸಿ.ಆರ್.ಮನೋಹರ್ ಅವರು ನಿನ್ನೆ (ಜನವರಿ 26) ತಮ್ಮ ಫಾರಂ ಹೌಸ್‌ನಲ್ಲಿ ಔತಣಕೂಟವೊಂದನ್ನು ಏರ್ಪಡಿಸಿದ್ದು, ಔತಣಕೂಟದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್, ದರ್ಶನ್ ಹಾಗೂ ಇನ್ನೂ ಕೆಲವು ಪ್ರಮುಖರು ಭಾಗವಹಿಸಿದ್ದರು.

ಚಿತ್ರಗಳನ್ನು ಹಂಚಿಕೊಂಡಿರುವ ಸಿ.ಆರ್.ಮನೋಹರ್
ಔತಣಕೂಟದಲ್ಲಿ ಗೆಳೆಯರೆಲ್ಲಾ ಒಟ್ಟಿಗಿರುವ ಚಿತ್ರಗಳನ್ನು ಸಿ.ಆರ್.ಮನೋಹರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಿ.ಸಿ.ಮೋಹನ್ ಅವರು ದರ್ಶನ್ ಅವರಿಗೆ ಹಳೆಯ ಗೆಳೆಯರು. ಸಿ.ಆರ್.ಮನೋಹರ್ ಸಹ. ಪಿ.ಸಿ.ಮೋಹನ್ ಪರ ಚುನಾವಣೆ ಪ್ರಚಾರವನ್ನೂ ಸಹ ದರ್ಶನ್ ಮಾಡಿದ್ದರು.

ಹಲವಾರು ಗೆಳೆಯರನ್ನು ಹೊಂದಿರುವ ದರ್ಶನ್
ನಟ ದರ್ಶನ್‌ಗೆ ರಾಜಕೀಯ ರಂಗದಲ್ಲಿ ಹಲವಾರು ಗೆಳೆಯರಿದ್ದಾರೆ. ಪಕ್ಷಾತೀತವಾಗಿ ಗೆಳೆಯರನ್ನು ಹೊಂದಿದ್ದಾರೆ ದರ್ಶನ್. ಕೆಲವು ಆಪ್ತ ಗೆಳೆಯರ ಪರವಾಗಿ ಚುನಾವಣೆಯಲ್ಲಿ ಪ್ರಚಾರವನ್ನೂ ಮಾಡಿದ್ದಾರೆ. ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ನಿರ್ಮಾಪಕ ಮುನಿರತ್ನ ಪರ ಪ್ರಚಾರ ಮಾಡಿದ್ದರು ದರ್ಶನ್.
Recommended Video

ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ
ದರ್ಶನ್ ನಟನೆಯ 'ರಾಜವೀರ ಮದಕರಿ ನಾಯಕ' ಸಿನಿಮಾದ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಆದರೆ ಎರಡನೇ ಹಂತ ಪ್ರಾರಂಭವಾಗುವ ವೇಳೆಗೆ ಲಾಕ್‌ಡೌನ್ ಆಗಿದ್ದು. ಮುಂದುವರೆದ ಭಾಗದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದೆ. ಈ ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











