ದರ್ಶನ್‌ಗೆ ಭಾರೀ ಆಘಾತ ; ಇನ್ನೊಂದು ವರ್ಷ ಜೈಲು ಖಾಯಂ - ಕೋರ್ಟ್ ಆದೇಶದಲ್ಲಿ ಏನಿದೆ ?
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ ಚುಕ್ತಾ ಮಾಡಲೇಬೇಕು. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಸದ್ಯ ಕಣ್ಮುಂದೆ ಇರುವ ವ್ಯಕ್ತಿಯೇ ದರ್ಶನ್.
ಹೌದು. ಹೆಚ್ಚೇನು ಇಲ್ಲ. ಮೂರು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ದರ್ಶನ್ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು ಇದ್ದರು.

ಆದರೆ ಪರಸ್ತ್ರೀ ವ್ಯಾಮೋಹ ಇವತ್ತು ದರ್ಶನ್ ಅವರನ್ನು ಕಂಬಿ ಹಿಂದೆ ಕರೆದೊಯ್ದು ನಿಲ್ಲಿಸಿದೆ. ಕತ್ತಲ ಕೋಣೆಯಲ್ಲಿ ದಿನ ನಿತ್ಯ ನರಕ ದರ್ಶನವೂ ಆಗ್ತಿದೆ. ಸಾಕ್ಷಿಗಳ ವಿಚಾರಣೆ ಬೇರೆ ಬೇಗ ನಡೆಯುತ್ತಿಲ್ಲ. ಇದೆಲ್ಲದರಿಂದ ಹೈರಾಣಾಗಿರುವ ದರ್ಶನ್ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ತಮ್ಮ ಬಗ್ಗೆ ಕನಿಕರ ವ್ಯಕ್ತಪಡಿಸುತ್ತೆ ಎಂದುಕೊಂಡಿದ್ದರು. ಆದರೆ ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು. ದರ್ಶನ್‌ಗೆ ಬಿಗ್ ಶಾಕ್ ನೀಡಿದೆ ಸುಪ್ರೀಂ ಕೋರ್ಟ್.
ಹೌದು, ಅಸಲಿಗೆ ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ನಿರಾಕರಣೆ,ವೃತ್ತಿ ಬದುಕು ಅಂತ್ಯವಾಗುವ ಭಯ, ಹೀಗೆ ಸಾಲು ಸಾಲು ಕಾರಣಗಳನ್ನು ನೀಡಿ ದರ್ಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ನೀಡುವಂತೆ ಕೇಳಿಕೊಂಡಿದ್ದರು. ದರ್ಶನ್ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆಯನ್ನು ಇಂದು (ಮೇ 15) ಮಾಡಿದ ಸುಪ್ರೀಂ ಕೋರ್ಟ್ ದರ್ಶನ್ ಇನ್ನು ಒಂದು ವರ್ಷ ಕದಲದಂತೆ ಆದೇಶ ನೀಡಿದೆ.
ದರ್ಶನ್ ಪರ ಇಂದು ಖ್ಯಾತ ವಕೀಲ ಮುಕುಲ್ ರೋಹ್ಟಗಿ, ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು. 272ಕ್ಕೂ ಹೆಚ್ಚಿನ ಸಾಕ್ಷಿಗಳು ಈ ಪ್ರಕರಣದಲ್ಲಿವೆ ಆದರೆ ಇಲ್ಲಿಯವರೆಗೆ ಕೇವಲ 10 ಸಾಕ್ಷಿಗಳ ವಿಚಾರಣೆಯನ್ನು ಮಾತ್ರ ಮಾಡಲಾಗಿದೆ ಎಂದರು. ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ಮುಗಿಸಿ ಎಂದು ನಾವು ಕೇಳಿದ್ದೇವೆ ಆದರೆ ಮುಖ್ಯ ಸಾಕ್ಷಿಗಳ ವಿಚಾರಣೆಯನ್ನೇ ಇದುವರೆಗೂ ಮುಕ್ತಾಯ ಮಾಡಿಲ್ಲ ಎಂದು ವಾದಿಸಿದ ಮುಕುಲ್ ರೋಹ್ಟಗಿ, ನವೆಂಬರ್ 3 ರಂದು ದೋಷಾರೋಪ ಹೊರಿಸಲಾಗಿದ್ದು, ಸಾಕ್ಷಿ ವಿಚಾರಣೆಯಲ್ಲಿ ಸಾಕಷ್ಟು ವಿಳಂಬ ಮಾಡಲಾಗ್ತಿದೆ, ಹೀಗಾಗಿ ಜಾಮೀನು ಕೊಡಿ ಎಂದು ವಾದಿಸಿದರು.
ಆದರೆ, ರೊಹ್ಟಗಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರ ಪರ ವಕೀಲರಾದ ಸಿದ್ಧಾರ್ಥ್ ಲೂತ್ರಾ, ನೀವು (ಆರೋಪಿಗಳು) ಸಾಕ್ಷ್ಯಗಳಿಗೆ ಏನೇನು ಮಾಡಿದ್ದೀರೆಂದು ಹೇಳಿದರೆ ನಿಮ್ಮ ಜಾಮೀನು ಅರ್ಜಿಯೇ ರದ್ದಾಗಲಿದೆ ಎಂದರು. ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲರು,
60 ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ನಡೆಸುವವರೆಗೆ ಜಾಮೀನು ಕೊಡಬಾರದು ಎಂದು ಮನವಿಯನ್ನು ಮಾಡಿಕೊಂಡರು. ಮುಂದಿನ ಒಂದು ವರ್ಷದಲ್ಲಿ ಸಾಕ್ಷ್ಯಗಳ ವಿಚಾರಣೆ ಮುಗಿಸುವುದಾಗಿ ಹೇಳಿದರು.

ಇದೇ ಸಮಯದಲ್ಲಿ 1 ವರ್ಷದಲ್ಲಿ 60 ಪ್ರಮುಖ ಸಾಕ್ಷಿಗಳನ್ನು ಮೊದಲು ವಿಚಾರಣೆ ನಡೆಸಬೇಕು. ವಿಚಾರಣಾ ನ್ಯಾಯಾಲಯವು ಖಾಲಿ ಇದ್ದು, ವಾರಕ್ಕೆ 2 ದಿನ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಇದನ್ನು ಪ್ರತಿನಿತ್ಯ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಹೇಳಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾ. ಪರ್ದಿವಾಲಾ ಮತ್ತು ನ್ಯಾ. ವಿಜಯ್ ಬಿಷ್ನೋಯಿ ಅವರ ಪೀಠ ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ಮುಗಿಸಿ, ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲಿಯೇ ಆರೋಪಿ (ದರ್ಶನ್) ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಸೆಷನ್ಸ್ ಕೋರ್ಟ್‌ಗೆ ಹೊಸ ನ್ಯಾಯಾಧೀಶರನ್ನು ನಿಯೋಜಿಸಲು ಹೈಕೋರ್ಟ್‌ಗೆ ಸೂಚನೆ ನೀಡಿದೆ. ಜೈಲಿನ ಮ್ಯಾನ್ಯುಯಲ್ ಪ್ರಕಾರ ಆರೋಪಿಗೆ ಇತರೆ ಕೈದಿಗಳಿಗೆ ನೀಡಿರುವ ಸವಲತ್ತುಗಳನ್ನೇ ನೀಡಬೇಕು ಎಂದು ಸೂಚಿಸಿದೆ. ಕ್ವಾರಂಟೈನ್ ಸೆಲ್ ಬಗ್ಗೆ ಯಾವುದೇ ಸೂಚನೆ ಅಥವಾ ಆದೇಶವನ್ನು ನೀಡುವುದಿಲ್ಲವೆಂದು ಹೇಳಿದ ಪೀಠ ಅಗತ್ಯವಿರುವ ಸೌಲಭ್ಯಗಳನ್ನು ಜೈಲು ಸೂಪರಿಂಟೆಂಡೆಂಟ್ ಒದಗಿಸಬೇಕು ಎಂದು ಹೇಳಿದೆ. ಈ ಹಿನ್ನೆಲೆ ದರ್ಶನ್‌ಗೆ ಈಗ ಒಂದು ವರ್ಷ ಜೈಲೇ ಗತಿಯಾಗಿದೆ.


Click it and Unblock the Notifications