Darshan Birthday : ಹುಟ್ಟುಹಬ್ಬಕ್ಕೆ ಮನೆಗೆ ಬಂದ ಅಭಿಮಾನಿಗಳಿಗೆ ದರ್ಶನ್ ಮಾಡಿಸಿದ ಊಟದಲ್ಲಿ ಏನೇನೆಲ್ಲಾ ಇದೆ?
ಕನ್ನಡ ಚಲನಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಇಂದು ( ಫೆಬ್ರವರಿ 16 ) ತಮ್ಮ 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ವೈರಸ್ ಹಾಗೂ ತಮ್ಮ ಗೆಳೆಯ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣದ ನೋವಿನಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ದರ್ಶನ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಈ ಬಾರಿ ಬಹಳ ದೊಡ್ಡ ಮಟ್ಟದಲ್ಲಿಯೇ ಆಚರಿಸುತ್ತಿದ್ದಾರೆ.
ಇನ್ನು ಪ್ರತಿ ವರ್ಷದ ಹಾಗೆ ಈ ವರ್ಷವೂ ಸಹ ದರ್ಶನ್ ತನ್ನ ಹುಟ್ಟುಹಬ್ಬ ಆಚರಿಸಲೆಂದು ಹಾರ, ಉಡುಗೊರೆ ತರಬೇಡಿ, ಕಟ್‌ಔಟ್ ನಿಲ್ಲಿಸಿ ಹಾಲಾಭಿಷೇಕ ಮಾಡಿ ವ್ಯರ್ಥ ಮಾಡಬೇಡಿ, ಅದರ ಬದಲಾಗಿ ಅಡುಗೆ ಸಾಮಗ್ರಿಗಳನ್ನು ತನ್ನಿ, ದಿನಸಿ ಖರೀದಿಸಲು ಕಷ್ಟದಲ್ಲಿರುವ ಕುಟುಂಬಗಳಿಗೆ ಅದನ್ನು ತಲುಪಿಸಿ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸೋಣ ಎಂದಿದ್ರು.
ಅದೇ ರೀತಿ ತಮ್ಮ ಬಾಸ್ ಮಾತಿಗೆ ಬೆಲೆ ಕೊಟ್ಟ ದರ್ಶನ್ ಅಭಿಮಾನಿಗಳು ಮೂಟೆಗಟ್ಟಲೆ ದಿನಸಿ ಸಾಮಗ್ರಿಗಳನ್ನು ಹೊತ್ತು ದರ್ಶನ್ ಮನೆಗೆ ತಲುಪಿಸಿದ್ದಾರೆ. ಇನ್ನು ಹುಟ್ಟುಹಬ್ಬಕ್ಕೆ ಕೇಕ್, ಹಾರ ಗಿಫ್ಟ್ ತರಬೇಡಿ ಎಂದಿದ್ದ ದರ್ಶನ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗುವುದರಿಂದ ಹಿಂದೆ ಸರಿದಿಲ್ಲ. ತಮ್ಮನ್ನು ಹುಟ್ಟುಹಬ್ಬದ ದಿನದಂದು ನೋಡಲು ಹಿಂದಿನ ದಿನದಿಂದಲೇ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳನ್ನು ನಟ ದರ್ಶನ್ ಭೇಟಿ ಮಾಡಿ ಎಲ್ಲರಿಗೂ ಶೇಕ್ ಹ್ಯಾಂಡ್ ನೀಡಿ ಪ್ರೀತಿಯಿಂದ ನಡೆದುಕೊಂಡಿದ್ದಾರೆ. ಇನ್ನು ತನ್ನನ್ನು ನೋಡಲು ಬಂದ ಅಭಿಮಾನಿಗಳಿಗೆ ದರ್ಶನ್ ಊಟದ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ.

ಊಟದಲ್ಲಿ ಏನೇನೆಲ್ಲಾ ಇದೆ?
ದರ್ಶನ್ ಹುಟ್ಟುಹಬ್ಬ ಆಚರಣೆಯ ದೃಶ್ಯಗಳನ್ನು ಸೆರೆ ಹಿಡಿದಿರುವ ಕನ್ನಡದ ಫಿಲ್ಮೋಲಜಿ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ದರ್ಶನ್ ಮನೆ ಪಕ್ಕ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿಗಳಿಗಾಗಿ ಮಾಡಲಾಗಿರುವ ಊಟದ ವ್ಯವಸ್ಥೆಯ ಬಗ್ಗೆ ಸಹ ತೋರಿಸಲಾಗಿದೆ. ಊಟವನ್ನು ಅಭಿಮಾನಿಗಳಿಗೆ ಉಣ ಬಡಿಸುತ್ತಿದ್ದವರು ಮಾತನಾಡಿದ್ದು, ಮಧ್ಯರಾತ್ರಿ ಹುಟ್ಟುಹಬ್ಬಕ್ಕೆಂದು ಬರುವ ದರ್ಶನ್ ಅವರ ಅಭಿಮಾನಿಗಳಿಗೆ ಅನ್ನ ಸಾಂಬಾರ್ ಹಾಗೂ ಮೈಸೂರು ಪಾಕ್ ಸ್ವೀಟ್ ಅನ್ನು ನೀಡಲಾಗುತ್ತಿದ್ದು, ಬೆಳಗ್ಗೆ ತಿಂಡಿ ವ್ಯವಸ್ಥೆ ಇರಲಿದೆ ಎಂದಿದ್ದಾರೆ. ಇನ್ನು ನಿನ್ನೆ ಮಧ್ಯರಾತ್ರಿಯವರೆಗೂ ಸುಮಾರು ಒಂದು ಸಾವಿರ ಜನಕ್ಕೆ ಊಟ ನೀಡಿದ್ದೇವೆ ಎಂದು ಹೇಳಿದ ಇವರು ಸುಮಾರು 20 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹಾಜರ್
ಇನ್ನು ಹುಟ್ಟುಹಬ್ಬದ ಅಂಗವಾಗಿ ದರ್ಶನ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸುವ ಕಾರಣ ಅಹಿತಕರ ಘಟನೆಗಳು ಉಂಟಾಗಬಾರದು ಎಂಬ ಕಾರಣಕ್ಕಾಗಿ ಮುನ್ನೆಚ್ಚರಿಕೆಯಿಂದ ಪೊಲೀಸ್ ಇಲಾಖೆ ಸುಮಾರು ನೂರು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ ಎನ್ನಲಾಗಿದೆ. ದರ್ಶನ್ ನೋಡಲು ಮನೆ ಮುಂದೆ ಅಭಿಮಾನಿಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದು ಕೆಲ ಕಾಲ ನೂಕುನುಗ್ಗಲು ಸಹ ಉಂಟಾಗಿದೆ.

ಭಿನ್ನ ವಿಭಿನ್ನ ಗಿಫ್ಟ್ ತಂದ ಅಭಿಮಾನಿಗಳು
ದರ್ಶನ್ ತನ್ನ ಅಭಿಮಾನಿಗಳಿಗೆ ಉಡುಗೊರೆ ತರಬೇಡಿ ಎಂದು ಎಷ್ಟೇ ಹೇಳಿದರೂ ಅಭಿಮಾನಿಗಳು ಅದನ್ನು ಕೇಳ್ತಾರಾ? ಅವರು ಮನವಿ ಮಾಡಿದರೂ ನಾವು ಪ್ರೀತಿಯಿಂದ ಗಿಫ್ಟ್ ಕೊಡುವುದನ್ನು ಬಿಡಲ್ಲ ಎಂದು ಹೇಳುತ್ತಿರುವ ಫ್ಯಾನ್ಸ್ ವಿಭಿನ್ನ ಉಡುಗೊರೆಗಳನ್ನು ಹಿಡಿದು ಬಂದಿದ್ದಾರೆ. ಅದರಲ್ಲಿಯೂ ದಾವಣಗೆರೆಯ ದರ್ಶನ್ ಅಭಿಮಾನಿಯೋರ್ವ ಹಸುಗಳಿಗೆ ಕಟ್ಟುವ ಕಲರ್‌ಫುಲ್ ಗಂಟೆಯನ್ನು ತಂದಿದ್ದರು. ದರ್ಶನ್ ಅವರಿಗೆ ಹಸುಗಳೆಂದರೆ ಬಲು ಪ್ರೀತಿ, ಹೀಗಾಗಿಯೇ ಈ ಗೆಜ್ಜೆಯನ್ನು ತಂದಿದ್ದೇನೆ, ಅವರಿಗೆ ಇದು ಇಷ್ಟವಾಗುತ್ತೆ ಎಂಬ ನಂಬಿಕೆ ಇದೆ ಎಂದರು.


Click it and Unblock the Notifications











