Darshan: 2 ದಶಕಗಳ ಬಳಿಕ ಒಂದಾಗ್ತಿದ್ದಾರೆ ದರ್ಶನ್ - ಜೋಗಿ ಪ್ರೇಮ್; ದೊಡ್ಡ ಬ್ಯಾನರ್‌ನಲ್ಲಿ ಸಿನಿಮಾ!
ಸದ್ಯ ಚಂದನವನದಲ್ಲಿ ಈ ವರ್ಷ ಸ್ಟಾರ್ ನಟರ ದೊಡ್ಡ ಚಿತ್ರಗಳಾವುವು ಬಿಡುಗಡೆಯಾಗಿಲ್ಲ. ಹೌದು, 2023ರ ಮೊದಲ ಎಂಟು ತಿಂಗಳುಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ, ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಸೇರಿದಂತೆ ಸಿನಿ ರಸಿಕರನ್ನು ಚಿತ್ರಮಂದಿರಗಳತ್ತ ಸೆಳೆಯಬಲ್ಲ ಇನ್ನೂ ಹಲವಾರು ಕನ್ನಡ ಸ್ಟಾರ್ ನಟರು ನಟಿಸಿರುವ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ.
ಹೀಗಾಗಿಯೇ ಉಳಿದ ಚಿತ್ರರಂಗಗಳ ಹಾಗೆ ಕನ್ನಡ ಚಿತ್ರರಂಗ ಈ ವರ್ಷ ಭರ್ಜರಿ ಬಾಕ್ಸ್ ಆಫೀಸ್ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಇನ್ನು ವರ್ಷದ ಆರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಬಿಡುಗಡೆಯಾಗಿತ್ತಾದರೂ ಆ ಚಿತ್ರ ದರ್ಶನ್ ಸ್ಟಾರ್ ಗಿರಿಗೆ ತಕ್ಕಂತಹ ಹಾಗೂ ಹುಟ್ಟುಹಾಕಿದ್ದ ನಿರೀಕ್ಷೆಗೆ ತಕ್ಕಂತಹ ಗೆಲುವು ಸಾಧಿಸಲಾಗದೇ ವಿಫಲವಾಗಿತ್ತು.

ಹೀಗಾಗಿ ಸದ್ಯ ಎಲ್ಲರ ಚಿತ್ತ ದರ್ಶನ್ ನಟನೆಯ ಮುಂದಿನ ಚಿತ್ರ ಕಾಟೇರ ಮೇಲಿದ್ದು, ಈ ಹಿಂದೆ ಬಾಕ್ಸ್ ಆಫೀಸ್ ಸುಲ್ತಾನನಿಗೆ ರಾಬರ್ಟ್ ರೀತಿಯ ಹಿಟ್ ನೀಡಿದ್ದ ನಿರ್ದೇಶಕ ತರುಣ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಹೀಗೆ ದರ್ಶನ್ ಕಾಟೇರ ಚಿತ್ರದಲ್ಲಿ ಬ್ಯುಸಿ ಇದ್ದು ಈ ಸಿನಿಮಾದ ಬಳಿಕ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ದರ್ಶನ್ ಮಿಲನ ಪ್ರಕಾಶ್ ನಿರ್ದೇಶನದ ಅಡಿಯಲ್ಲಿ ಕಾಟೇರ ಬಳಿಕ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದು, ಇದಾದ ಬಳಿಕ ಪ್ರೇಮ್ ಜತೆ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿಯೊಂದು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಹೌದು, ಜೋಗಿ ಪ್ರೇಮ್ ನಿರ್ದೇಶನದ ಅಡಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲಿದ್ದಾರೆ ಹಾಗೂ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಸಹ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ಆಗಸ್ಟ್ 25ಕ್ಕೆ ದೊಡ್ಡ ಘೋಷಣೆ ಮಾಡಲಿದ್ದೇವೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಾ ಬಂದಿದೆ. ಈ ಘೋಷಣೆಯೇ ದರ್ಶನ್ ಹಾಗೂ ಪ್ರೇಮ್ ಕಾಂಬಿನೇಶನ್ ಚಿತ್ರ ಎನ್ನಲಾಗುತ್ತಿದೆ. ಇನ್ನು ಈ ರೀತಿ ದರ್ಶನ್ ಹಾಗೂ ಪ್ರೇಮ್ ಸಿನಿಮಾ ಘೋಷಣೆಯಾದರೆ ಈ ಜೋಡಿ ಕರಿಯ ಚಿತ್ರದ ಬಳಿಕ ಬರೋಬ್ಬರಿ ಎರಡು ದಶಕಗಳ ಬಳಿಕ ಒಂದಾಗಲಿದೆ ಹಾಗೂ ಇತ್ತೀಚಿಗೆ ತಮ್ಮ ನಡುವೆ ಎದ್ದಿದ್ದ ಮನಸ್ತಾಪಕ್ಕೆ ಅಂತ್ಯ ಹಾಡಲಿದೆ.


Click it and Unblock the Notifications











