ಕುದುರೆ, ರೇಸ್ ಕೋರ್ಸ್, ಜಾಕಿ ; ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಮ್ಮ ಈ ನಡುವಳಿಕೆಯಿಂದ ಅನೇಕ ಸಲ ದರ್ಶನ್ ವಿವಾದಕ್ಕೀಡಾಗಿದ್ದು ಇದೆ. ಆದರೆ ಅದ್ಯಾವುದಕ್ಕೂ ದರ್ಶನ್ ತಲೆ ಕೆಡಿಸಿಕೊಂಡಿಲ್ಲ. ಕೆಡಿಸಿಕೊಂಡಿದ್ದರೆ ಚಿತ್ರರಂಗದಲ್ಲಿ 25 ವರ್ಷಗಳನ್ನ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ನಿನ್ನೆ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ್ದು ಇದನ್ನೇ.
ಅಭಿಮಾನದ ಮಳೆಯಲ್ಲಿ ನಿನ್ನೆ ಮತ್ತೊಮ್ಮೆ ಮಿಂದೆದ್ದ ದರ್ಶನ್, ಹೃದಯದಿಂದ ಬಂದ ಮಾತುಗಳನ್ನಾಡಿದರು. ಯಾರ ಮುಲಾಜನ್ನೂ ದರ್ಶನ್ ನೋಡಲಿಲ್ಲ. 25 ವರ್ಷದ ಸುದೀರ್ಘ ಪ್ರಯಾಣವನ್ನೊಮ್ಮೆ ಹಿಂದೆ ತಿರುಗಿ ನೋಡಿದ ದರ್ಶನ್, ತಮ್ಮನ್ನ ತಾವು ಟಾಂಗಾ ಕುದುರೆಗೆ ಹೋಲಿಸಿಕೊಂಡರು. ಚಿತ್ರರಂಗವನ್ನ ರೇಸ್ ಕೋರ್ಸ್ ಗೆ ಹೋಲಿಸಿದರು. ನಿರ್ಮಾಪಕರನ್ನ ಕುದುರೆಯ ಮಾಲೀಕರು ಎಂದರು. ನಿರ್ದೇಶಕರಿಗೆ ಜಾಕಿ ಪಟ್ಟವನ್ನೂ ಕಟ್ಟಿದರು. ಮಾತುಗಳ ನಡುವೆ ವ್ಯೆಯಕ್ತಿಕ ವಿಚಾರ ಕೂಡ ಬಂತು. ಅಭಿಮಾನಿಗಳ ಅಭಿಮಾನದ ಮುಂದೆ ದಾಸನ ತಲೆ ಇನ್ನೊಮ್ಮೆ ಬಾಗಿತು

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಗಂಧದಗುಡಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾನು ಟಾಂಗಾ ಕುದುರೆ ಆಗಿದ್ದೆ. ಅಲ್ಲಿ-ಇಲ್ಲಿ ಓಡಾಡುತ್ತಿದ್ದೆ. ನನ್ನನ್ನು ನೋಡಿದ ಕೆಲವರು ಈ ಕುದುರೆ ಎತ್ತರ ಇದೆ, ಕಟ್ಟುಮಸ್ತಾಗಿದೆ ಎಂದು ರೇಸ್ ಕೋರ್ಸ್ ಗಂಧ-ಗಾಳಿ ಗೊತ್ತಿರದಿದ್ದರೂ ರೇಸ್ ಕೋರ್ಸ್ ಅಲ್ಲಿ ತಂದು ನಿಲ್ಲಿಸಿದರು. ಆ ರೇಸ್ನಲ್ಲಿ ದೊಡ್ಡ-ದೊಡ್ಡ ಕುದುರೆಗಳು ಇದ್ದವು. ಆ ಕುದುರೆಯ ಮಾಲೀಕರು 'ಮೆಜೆಸ್ಟಿಕ್' ಸಿನಿಮಾ ನಿರ್ಮಾಪಕ ರಾಮಮೂರ್ತಿ. ನನ್ನನ್ನು ಬೈಯ್ಯುವ, ನಿನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಾನು ಎಂದು ಹೇಳುವ ಅರ್ಹತೆ ಹಾಗೂ ಯೋಗ್ಯತೆ ಇರುವುದು ಕೇವಲ ರಾಮಮೂರ್ತಿ ಅವರಿಗೆ ಮಾತ್ರ ಎಂದ ದರ್ಶನ್, ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ ಪಿಎನ್ ಸತ್ಯ ಅವರನ್ನು ಕೂಡಿಸಿದರು ಎಂದರು.
ಮೆಜೆಸ್ಟಿಕ್ ನಿಂದ ಇಲ್ಲಿಯವರೆಗೆ ಓಡ್ತಾನೇ ಇದ್ದೀನಿ ಎಂದ ಅಭಿಮಾನಿಗಳ ನೆಚ್ಚಿನ ಕಾಟೇರ, ತರುಣ್, ಮಿಲನಾ ಪ್ರಕಾಶ್ ಹೀಗೆ ಜಾಕಿಗಳು ಬದಲಾಗುತ್ತಲೇ ಇದ್ದಾರೆ. ಕುದುರೆಗೆ ಓಡುವುದು ಮಾತ್ರವೇ ಗೊತ್ತು, ಅದನ್ನು ಓಡಿಸುತ್ತಿರುವವರು ಜಾಕಿಗಳು. ಸಿನಿಮಾ ನನ್ನದಲ್ಲ, ಎಲ್ಲ ನಿರ್ದೇಶಕರದ್ದು ಎನ್ನುವ ಮೂಲಕ ಗೆಲುವಿನ ಎಲ್ಲ ಕ್ರೆಡಿಟ್ ನ ತಮ್ಮ ನಿರ್ದೇಶಕರಿಗೆ ನೀಡಿದರು. ಚಿತ್ರರಂಗ, ರಾಜಕೀಯ, ವ್ಯಾಪಾರ, ಯಾವುದೇ ಇರಲಿ, ಅಲ್ಲಿ ಶ್ರಮ ಇರಲೇ ಬೇಕು.

ಶ್ರದ್ಧೆ ಬೇಕೇ ಬೇಕು ಎಂದ ದರ್ಶನ್ ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇ ಬೇಕು ಎಂದರು. ಅವಮಾನಗಳು ಆದರೆ ಮುಂದೊಂದು ದಿನ ಸನ್ಮಾನ ಅಂದರು. ಇನ್ನೂ ಇದರ ನಡುವೆ ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ, ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು, ಚಪ್ಪಲಿ ಬಿದ್ದಾಗ ಅದನ್ನೂ ಸ್ವೀಕರಿಸಬೇಕು ಎಂದ ದರ್ಶನ್, ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ ಎಂದರು. ನಾನು ಬ್ಯಾಡ್ ಬಾಯ್ ಎಂದರು
ಇನ್ನೂ ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದರು ದರ್ಶನ್.

ತಿರುಪತಿಗೆ ಬಸ್ಸಿನಲ್ಲೆ ಹೋಗಿದ್ದೆ, ಕಾರಿನಲ್ಲಿ ಹೋಗಿದ್ದೆ. ದೇವರ ಬಳಿ ಕ್ಷಮೆ ಕೇಳುವುದಿಲ್ಲ, ತಲೆ ಇಡಬೇಡಿ, ತಲೆ ಹೊಡಿಬೇಡಿ, ಗುರಿ ಇಟ್ಟುಕೊಳ್ಳಿ, ಇನ್ನೂ ಸೊನ್ನೆಯಲ್ಲೇ ಇದ್ದೇನೆ. ಅತಿಯಾಸೆ ಕೆಲಸದ ಮೇಲೆ, ಏನೇ ಮಾಡಿ, ಒಂದಲ್ಲ ಒಂದಿನ ಜಯ ಸಿಗುತ್ತದೆ ಎಂದ ದರ್ಶನ್, ಸುಮಲತಾ ಅವರ ಬಗ್ಗೆ ಮಾತನಾಡಿ, 'ಸುಮ ಅವರು ನನಗೆ ಬುದ್ಧಿ ಕಲಿಸಿದ್ದಾರೆ. ಅಂಬರೀಶ್ ಮನೆಯಲ್ಲಿ ಏಟು ತಿಂದಿದ್ದೀನಿ. ನಾನು ತಪ್ಪು ಮಾಡಿದಾಗ ಬೈದು ತಿದ್ದಿದ್ದಾರೆ. ನನಗೆ ಬುದ್ಧಿ ಕಲಿಸಿದ ತಾಯಿ ಸುಮಾ ಅವರು. ಅಭಿಷೇಕ್ ನಿಗಿಂತಲೂ ಹೆಚ್ಚಿನ ಪ್ರೀತಿಯನ್ನು ನನಗೆ ತೋರಿಸಿದ್ದಾರೆ' ಎಂದರು ದರ್ಶನ್.
ಚಿತ್ರರಂಗದ ಹಿರಿಯರು ಆಶೀರ್ವಾದ ಮಾಡಿದ್ದಾರೆ. 57-58 ಸಿನಿಮಾಗಳಲ್ಲಿ ನಟಿಸಿದ್ದೀನಿ, ಆ ಸಿನಿಮಾಗಳಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದ ತಂತ್ರಜ್ಞಾನರು, ನಟಿಯರು ಆಗಿರಬಹುದು, ಗೊತ್ತೊ-ಗೊತ್ತಿಲ್ಲದೆ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ' ಎಂದ ದರ್ಶನ್, ತಮ್ಮ ಈ ಮಾತುಗಳ ಮೂಲಕ ಅನೇಕರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರವನ್ನ ಕೊಟ್ಟರು. ವ್ಯೆಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನ ಯಾವುದೇ ಮುಚ್ಚು ಮರೆಯಿಲ್ಲದೇ ಹಂಚಿಕೊಂಡರು. ಒಂದರ್ಥದಲ್ಲಿ ತಮ್ಮ ಬದುಕಿನ ಪುಸ್ತಕವನ್ನ ನಿನ್ನೆ ಎಲ್ಲರ ಎದುರು ತೆರೆದಿಟ್ಟರು ದರ್ಶನ್ .


Click it and Unblock the Notifications











