"ಡಬ್ ಮಾಡಲು ಬಹಳ ನೋವಾಗುತ್ತೆ.. ಧ್ರುವ ಮೇಲೆ ಒತ್ತಡ ಹಾಕ್ಬೇಡ ಎಂದು ದರ್ಶನ್ ಸರ್ ಹೇಳಿದ್ರಂತೆ": ಪ್ರಥಮ್
ದಿವಂಗತ ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಣ್ಣನ ಸಿನಿಮಾ ತೆರೆಗೆ ಬರ್ತಿರೋದು ವಿಶೇಷ. ಚಿತ್ರದಲ್ಲಿ ಚಿರು ಪಾತ್ರಕ್ಕೆ ಸಹೋದರ ಧ್ರುವ ಡಬ್ ಮಾಡಿದ್ದಾರೆ.
3 ವರ್ಷಗಳ ಹಿಂದೆ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಒಂದಷ್ಟು ಸಿನಿಮಾಗಳನ್ನು ಅರ್ಧಕ್ಕೆ ಬಿಟ್ಟು ಹೊರಟುಬಿಟ್ಟಿದ್ದರು. ಚಿರು ಅಗಲಿಕೆಯ ನಂತರ 'ರಣಂ' ಸಿನಿಮಾ ರಿಲೀಸ್ ಆಗಿತ್ತು. ಇನ್ನು 'ರಾಜಮಾರ್ತಾಂಡ' ಸಿನಿಮಾ ಚಿತ್ರೀಕರಣ ಮುಗಿದರೂ ಡಬ್ಬಿಂಗ್ ಮಾಡಿರಲಿಲ್ಲ. ಅಷ್ಟರಲ್ಲೇ ಚಿರು ಬಾರದ ಊರಿಗೆ ಪಯಣ ಬೆಳೆಸಿಬಿಟ್ಟಿದ್ದರು. ಇದೀಗ 3 ವರ್ಷಗಳ ನಂತರ ಆ ಆಕ್ಷನ್ ಎಂಟರ್‌ಟೈನರ್ ಪ್ರೇಕ್ಷಕರ ಮುಂದೆ ಬರ್ತಿದೆ.

'ರಾಜಮಾರ್ತಾಂಡ' ಚಿತ್ರದಲ್ಲಿ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಅಣ್ಣನ ಸಿನಿಮಾ ನೋಡ್ತಾ ನೋಡ್ತಾ ವಾಯ್ಸ್ ಕೊಡಲು ಧ್ರುವ ಬಹಳ ನೋವು ಅನುಭವಿಸಿದ್ದರು. ಧ್ರುವ ಡಬ್ ಮಾಡಿದ್ದ ವಿಡಿಯೋಗಳು ವೈರಲ್ ಆಗಿತ್ತು. 'ರಾಜಮಾರ್ತಾಂಡ' ಚಿತ್ರಕ್ಕೆ ಧ್ರುವ ಸರ್ಜಾ, ಮೇಘನಾ ರಾಜ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಧಾರಸ್ತಂಭಗಳು ಎನ್ನುವ ಪ್ರಥಮ್ ಹೇಳಿಕೆ ವೈರಲ್ ಆಗುತ್ತಿದೆ.
ದರ್ಶನ್ ಹಾಗೂ ಧ್ರುವ ನಡುವೆ ವೈಮನಸ್ಸು ಮೂಡಿದೆ ಎನ್ನುವ ಗುಸುಗುಸು ನಡುವೆ ಪ್ರಥಮ್ ಹೇಳಿಕೆ ಬಹಳ ಸದ್ದು ಮಾಡ್ತಿದೆ. "ಚಿತ್ರದ ನಿರ್ಮಾಪಕರು ಹೇಳುವಂತೆ ರಾಜಮಾರ್ತಾಂಡ ಚಿತ್ರಕ್ಕೆ ಮೂವರು ಆಧಾರಸ್ತಂಭಗಳು. ಧ್ರುವ ಸರ್ಜಾ ಸರ್, ಮೇಘನಾ ಮೇಡಂ ಹಾಗೂ ದರ್ಶನ್ ಸರ್. ಯಾಕಂದರೆ ನಿರ್ಮಾಪಕರು ಯಾವಾಗಲೂ ಹೇಳುತ್ತಿದ್ರು, ಧ್ರುವ ಒಂದು ಸೀನ್ ಡಬ್ ಮಾಡುತ್ತಿದ್ದರು. ಬಳಿಕ ಹೇಳದೇ ಕೇಳದೇ ಹೊರಟು ಬಿಡುತ್ತಿದ್ದರು. ಅಣ್ಣನ ಸಿನಿಮಾ ನೋಡಿದಾಗ ಮನಸ್ಸಿಗೆ ಬಹಳ ಕಾಡುತ್ತಿತ್ತು. ಅದಕ್ಕೆ ಆ ರೀತಿ ಆಗುತ್ತಿತ್ತು"
"ಧ್ರುವ ಅವರಿಗೆ ಈ ವಿಚಾರದಲ್ಲಿ ಒತ್ತಡ ಹಾಕಬೇಡ ಎಂದು ದರ್ಶನ್ ಸರ್ ನಿರ್ಮಾಪಕರಿಗೆ ಹೇಳುತ್ತಿದ್ದರಂತೆ. ಧ್ರುವ ಎಷ್ಟಾದ್ರು ಟೈಮ್ ತಗೊಳ್ಳಿ, ಯಾಕಂದರೆ ಬಹಳ ನೋವಾಗುತ್ತೆ, ಕಷ್ಟ ಆಗುತ್ತೆ, ತನ್ನ ಜೊತೆಗೆ ಸದಾ ಇರುತ್ತಿದ್ದ ಸ್ವಂತ ಅಣ್ಣ ಇಲ್ಲಾ ಅಂದಾಗ ಬಹಳ ನೋವಾಗುತ್ತೆ. ಡಬ್ಬಿಂಗ್ ಲೇಟ್ ಆದ್ರೆ ಆಗಲಿ, ಇನ್ನು ಸ್ವಲ್ಪ ದಿನ ಕಾಯಬೇಕು ಎಂದಿದ್ದರು. ಇದು ಧ್ರುವ ಸರ್ ಮೇಲೆ ಅವರು ಇದ್ದಿದ್ದ ನಂಬಿಕೆ.. ವಿಶ್ವಾಸ"

"ಧ್ರುವ ಸರ್ ಕೂಡ ತಮ್ಮ ಸಿನ್ಮಾಗೂ ತೆಗೆದುಕೊಳ್ಳದಷ್ಟು ಟೈಮ್ ತಗೊಂಡು ಸಿನಿಮಾ ಡಬ್ ಮಾಡಿದ್ದಾರೆ. ಕಾರಣ ಪ್ರತಿ ಸನ್ನಿವೇಶದಲ್ಲಿ ಚಿರು ನೋಡಿದಾಗ ಸ್ಟುಡಿಯೋದಲ್ಲಿ ನಿಂತೇಬಿಡುತ್ತಿದ್ದರು. ಸ್ಟುಡಿಯೋ ಮನೆಗೆ ಹತ್ತಿರ ಇತ್ತು. ನಾನೇ ನೋಡ್ತಿದ್ದೆ" ಎಂದು ಪ್ರಥಮ್ ಹೇಳಿದ್ದಾರೆ. ಇತ್ತೀಚೆಗೆ ಕರ್ನಾಟಕ ಬಂದ್ ಪ್ರತಿಭಟನೆ ಹೋರಾಟದ ವೇದಿಕೆಯಲ್ಲಿ ಪಕ್ಕದಲ್ಲೇ ಇದ್ದರೂ ನಟ ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಮಾತಿಲ್ಲ, ಕಥೆಯಿಲ್ಲ. ಇಬ್ಬರ ನಡುವೆ ಏನಾಯ್ತು? ಎಂದು ಭಾರೀ ಚರ್ಚೆ ನಡೀತಿತ್ತು.
"ಕರ್ನಾಟಕ ಬಂದ್ ಹಿಂದಿನ ದಿನ ಧ್ರುವ ಸರ್ಜಾ ಅಭಿಮಾನಿಯೊಬ್ಬರು ಅಪಘಾತದಲ್ಲಿ ತೀರಿಕೊಂಡಿದ್ದರು. ಅದೇ ಕಾರಣಕ್ಕೆ ಧ್ರುವ ಸರ್ಜಾ ಕಳೆದ ಮೂರ್ನಾಲ್ಕು ದಿನಗಳಿಂದ ಬಹಳ ಮೆತ್ತಗಾಗಿದ್ದಾರೆ. ಅಭಿಮಾನಿ ಅಗಲಿಕೆ ನೋವಿನಲ್ಲೇ ಕೊರಗುತ್ತಿದ್ದಾರೆ. ಕರ್ನಾಟಕ ಬಂದ್ ದಿನ ಅವರ ಮುಖದಲ್ಲಿ ನಗುವಿಲ್ಲ, ಚೈತನ್ಯ ಇರಲಿಲ್ಲ. ಅದಕ್ಕೆ ಬೇರೆ ವಿಚಾರ ತಳಕು ಹಾಕಬೇಡಿ" ಎಂದು ಪ್ರಥಮ್ ಹೇಳಿದ್ದಾರೆ.
'ರಾಜಮಾರ್ತಾಂಡ' ಚಿತ್ರದಲ್ಲಿ ದೀಪ್ತಿ ಸತಿ ನಾಯಕಿಯಾಗಿ ನಟಿಸಿದ್ದಾರೆ. ದೇವರಾಜ್, ಚಿಕ್ಕಣ್ಣ, ಭಜರಂಹಿ ಲೋಕಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅರ್ಜುನ್ ಜನ್ಯಾ ಸಾಂಗ್ಸ್‌ಗೆ ಟ್ಯೂನ್ ಹಾಕಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.


Click it and Unblock the Notifications











