ಯೋಗರಾಜ್ ಭಟ್ ನಿರ್ದೇಶನದಲ್ಲಿ ದರ್ಶನ್ ನಟನೆ; 'ಕ್ರಾಂತಿ' ಬಿಡುಗಡೆಗೂ ಮುನ್ನವೇ ಶೂಟ್ ಶುರು!
ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ರಾಬರ್ಟ್ ಚಿತ್ರದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಾವ ಚಿತ್ರವೂ ಸಹ ಬಿಡುಗಡೆಗೊಂಡಿಲ್ಲ. ಇನ್ನು ಈ ವರ್ಷ ದರ್ಶನ್ ಅಭಿನಯದ ಯಾವ ಚಿತ್ರವೂ ಸಹ ಬಿಡುಗಡೆಯಾಗುವುದಿಲ್ಲ ಎನ್ನುವುದು ಬೇಸರದ ಸಂಗತಿಯೂ ಸಹ ಹೌದು. ಎಲ್ಲಾ ಯೋಜನೆಯಂತೆ ನಡೆದಿದ್ದರೆ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರವಾದ ಕ್ರಾಂತಿ ಇದೇ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಗೊಳ್ಳಬೇಕಿತ್ತು.
ಆದರೆ ಚಿತ್ರದ ಚಿತ್ರೀಕರಣ ಮುಗಿಯದಿದ್ದ ಕಾರಣ ಚಿತ್ರ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದು, ಮುಂಬರುವ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ತೆರೆಗೆ ಬರಲಿದೆ. ಹೀಗಾಗಿ ಕ್ರಾಂತಿ ಚಿತ್ರತಂ ಪ್ರಚಾರ ಕಾರ್ಯಗಳು ಹಾಗೂ ಹಾಡು ಬಿಡುಗಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ನಡುವೆ ದರ್ಶನ್ ಬಣ್ಣ ಹಚ್ಚಲಿರುವ ಮುಂದಿನ ಚಿತ್ರವೊಂದರ ಬಗೆಗಿನ ಮಾಹಿತಿ ಹೊರಬಿದ್ದಿದೆ.
ಹೌದು, ಕ್ರಾಂತಿ ಬಳಿಕ ದರ್ಶನ್ ಯೋಗರಾಜ್ ಭಟ್ ನಿರ್ದೇಶನದ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆಯೇ ಹರಿದಾಡಿದ್ದ ಈ ಸುದ್ದಿ ಈಗ ನಿಜವಾಗಿದ್ದು, ಕ್ರಾಂತಿ ಬಿಡುಗಡೆಗೂ ಮುನ್ನವೇ ಈ ಚಿತ್ರದ ಚಿತ್ರೀಕರಣ ಕೂಡ ನಡೆಯಲಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ.

ಗರಡಿ ಸೇರಲಿದ್ದಾರೆ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ ನಟ ಸೂರ್ಯ ಹಾಗೂ ಹಿರಿಯ ನಟ ಬಿಸಿ ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನವಿದ್ದು, ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತವನ್ನು ಸಂಯೋಜನೆ ಮಾಡಿದ್ದಾರೆ. ಹೆಸರೇ ಹೇಳುವಂತೆ ಈ ಚಿತ್ರ ದೇಸಿ ಕ್ರೀಡೆಯಾದ ಕುಸ್ತಿಯ ಕುರಿತಾಗಿ ಇರಲಿದ್ದು, ದರ್ಶನ್ ಈ ಚಿತ್ರದಲ್ಲಿ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಾ ಎಂಬ ಕುತೂಹಲ ಸದ್ಯ ಮೂಡಿದೆ.

ಕ್ರಾಂತಿ ರಿಲೀಸ್‌ಗೂ ಮುನ್ನ ಶೂಟಿಂಗ್
ಸದ್ಯ ಕ್ರಾಂತಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿರುವ ನಟ ದರ್ಶನ್ ಗರಡಿ ಚಿತ್ರದ ಚಿತ್ರೀಕರಣದಲ್ಲಿ ನಾಳೆಯಿಂದಲೇ ( ಡಿಸೆಂಬರ್ 8 ) ಭಾಗವಹಿಸಲಿದ್ದಾರೆ. ಅತಿಥಿ ಪಾತ್ರವನ್ನು ನಿರ್ವಹಿಸಲಿರುವ ಕಾರಣ ದರ್ಶನ್ ಭಾಗದ ಚಿತ್ರೀಕರಣ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಇರಲಿದ್ದು, ಬೇಗನೆ ಚಿತ್ರೀಕರಣ ಮುಗಿಯಲಿದೆ.

ದರ್ಶನ್ ಅತಿಥಿ ಪಾತ್ರ ನಿರ್ವಹಿಸಿರುವ ಚಿತ್ರಗಳ ಪಟ್ಟಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೂರ್ಣ ಪ್ರಮಾಣದ ನಾಯಕ ನಟನಾದ ಬಳಿಕ ಅತಿಥಿ ಪಾತ್ರ ನಿರ್ವಹಿಸಿದ ಚಿತ್ರಗಳ ಪಟ್ಟಿ ಹೀಗಿದೆ: ದಿಲ್, ನನ್ನ ಹೆಂಡ್ರಿ ಮದುವೆ, ಕುಷಲವೇ ಕ್ಷೇಮವೇ, ಮೊನಾಲಿಸಾ, ಜೊತೆ ಜೊತೆಯಲಿ, ಅರಸು, ಸ್ನೇಹಿತರು, ಅಗ್ರಜ, ಮುಮ್ತಾಜ್, ನಾಗರಹಾವು, ಚೌಕ, ಪ್ರೇಮ ಬರಹ ( ಹಾಡೊಂದರಲ್ಲಿ ), ಅಮರ್, ಇನ್ಸ್ಪೆಕ್ಟರ್ ವಿಕ್ರಮ್ ಹಾಗೂ ಗರಡಿ.


Click it and Unblock the Notifications











