ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
ಕನ್ನಡದ ಮೇರುನಟರಲ್ಲಿ ಓರ್ವರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿನ್ನೆಯಷ್ಟೇ ( ಜನವರಿ 29 ) ಲೋಕಾರ್ಪಣೆಗೊಂಡಿದೆ. ಮೈಸೂರಿನ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ಹನ್ನೊಂದು ಕೋಟಿಯನ್ನು ನಿರ್ಮಾಣಕ್ಕೆ ಖರ್ಚು ಮಾಡಿದೆ.
ವಿಷ್ಣುವರ್ಧನ್ ನಿದನ ಹೊಂದಿ ಹದಿಮೂರು ವರ್ಷಗಳ ಬಳಿಕ ಕೊನೆಗೂ ಸ್ಮಾರಕ ನಿರ್ಮಾಣವಾದದ್ದು ಅಭಿಮಾನಿಗಳಿಗೆ ದೊಡ್ಡ ಮಟ್ಟದ ಖುಷಿಯನ್ನು ತಂದುಕೊಟ್ಟಿತ್ತು. ಮೈಸೂರಿಗೆ ರಾಜ್ಯದ ಮೂಲೆ ಮೂಲೆಯಿಂದ ವಿಷ್ಣು ಅಭಿಮಾನಿಗಳು ಆಗಮಿಸಿ ಸ್ಮಾರಕವನ್ನು ವೀಕ್ಷಿಸಿ ತಮ್ಮ ಬಹು ವರ್ಷಗಳ ಆಸೆ ಈಡೇರಿತಲ್ಲಾ ಎಂದು ಭಾವುಕರಾದರು. ಇನ್ನು ವಿಷ್ಣುವರ್ಧನ್ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಲನಚಿತ್ರರಂಗದ ಸ್ಟಾರ್ ನಟರೂ ಸಹ ವಿಷ್ಣು ಸ್ಮಾರಕದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ನಿನ್ನೆ ಕಿಚ್ಚ ಸುದೀಪ್, ಶಿವ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಸೇರಿದಂತೆ ಹಲವು ಸ್ಟಾರ್ ನಟರು ವಿಷ್ಣು ಸ್ಮಾರಕದ ಬಗ್ಗೆ ಟ್ವೀಟ್ ಮಾಡಿದ್ದರು. ಈ ಸಾಲಿಗೆ ಇದೀಗ ಕನ್ನಡ ಚಲನಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸೇರಿಕೊಂಡಿದ್ದಾರೆ. ಈ ಇಬ್ಬರೂ ಸಹ ವಿಷ್ಣುವರ್ಧನ್ ಸ್ಮಾರಕದ ಕುರಿತು ಈ ಕೆಳಕಂಡಂತೆ ಟ್ವೀಟ್ ಮಾಡಿದ್ದಾರೆ.


ಇಬ್ಬರಿಗೆ ಧನ್ಯವಾದ ತಿಳಿಸಿದ ದರ್ಶನ್
ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾದದ್ದರ ಕುರಿತು ಇಂದು ಟ್ವೀಟ್ ಮಾಡಿರುವ ದರ್ಶನ್ ಸ್ಮಾರಕದಲ್ಲಿ ಇರಿಸಲಾಗಿರುವ ವಿಷ್ಣುವರ್ಧನ್ ಅವರ ಪುತ್ಥಳಿಯ ಫೋಟೊವನ್ನು ಹಂಚಿಕೊಂಡು "ಸಾಹಸಸಿಂಹ ಡಾ|| ವಿಷ್ಣು ದಾದಾರವರ ಸ್ಮಾರಕ ಕೊನೆಗೂ ನಮ್ಮ ಮೈಸೂರಿನಲ್ಲಿ ಲೋಕಾರ್ಪಣೆ ನೆರವೇರಿದೆ, ಕನ್ನಡ ನಾಡಿಗೆ ವಿಷ್ಣು ಸರ್ ರವರ ಕೊಡುಗೆ ಅಪಾರವಾದದ್ದು. ಇದಕ್ಕೆ ಮುಖ್ಯಕಾರಣಕರ್ತರಾಗಿರುವ ದಾದಾ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಅನಂತ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸ್ಮಾರಕ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾದ ಅಭಿಮಾನಿಗಳು ಹಾಗೂ ವಿಷ್ಣು ಕುಟುಂಬಕ್ಕೆ ದರ್ಶನ್ ಕೃತಜ್ಞತೆ ತಿಳಿಸಿದ್ದಾರೆ.

ಸಂತೋಷ್ ಆನಂದ್ ರಾಮ್ ಟ್ವೀಟ್
ಚಂದನವನದ ಯಶಸ್ವಿ ನಿರ್ದೇಶಕ, ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ತಮ್ಮ ಮೊದಲ ಚಿತ್ರ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿಯಲ್ಲಿ ನಾಯಕನನ್ನು ಪಕ್ಕಾ ವಿಷ್ಣುವರ್ಧನ್ ಅಭಿಮಾನಿ ಎಂದು ತೋರಿಸಿ ಇಂಡಸ್ಟ್ರಿ ಹಿಟ್ ಬಾರಿಸಿ ಎಂಟ್ರಿ ಕೊಟ್ಟಿದ್ದರು. ಹೀಗೆ ವಿಷ್ಣುವರ್ಧನ್ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿರುವ ಸಂತೋಷ್ ಆನಂದ್‌ರಾಮ್ "ವಿಷ್ಣು ದಾದಾ ಅಮರ-ಅಜರಾಮರ ಕನ್ನಡ ಸಂಸ್ಕೃತಿಯನ್ನು ಎಲ್ಲೆಡೆ ಸಾರಿದ ಮಹನೀಯನಿಗೆ ಸಾಂಸ್ಕೃತಿಕ ನಗರಿಯಲ್ಲಿ ಸ್ಮಾರಕವಾಗಿದ್ದು ತುಂಬ ಖುಷಿಯ ಸಂಗತಿ" ಎಂದು ಬರೆದುಕೊಂಡಿದ್ದಾರೆ.

ಸ್ಮಾರಕ ಆಗಿದ್ದರ ಬಗ್ಗೆ ಶಿವಣ್ಣ ಪೋಸ್ಟ್
ವಿಷ್ಣುವರ್ಧನ್ ಸ್ಮಾರಕದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ ವಿಷ್ಣುವರ್ಧನ್ ಜತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ: "13 ವರ್ಷಗಳ ಸುಧೀರ್ಘ ಕಾಯುವಿಕೆಯ ನಂತರ ಮೈಸೂರಿನಲ್ಲಿ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ.! ಸ್ಮಾರಕ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಕುಟುಂಬಕ್ಕೆ ,ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು., ವಿಷ್ಣುವರ್ಧನ್ ಹಾಗೂ ನಮ್ಮ ಕುಟುಂಬದ ಬಾಂಧವ್ಯ ಮತ್ತು ಒಡನಾಟ ಬಹಳಷ್ಟಿವೆ. ವಿಷ್ಣುವರ್ಧನ್ ನಮ್ಮ ತಂದೆ ಡಾ.ರಾಜ್ ಅವರನ್ನು ಬಹಳಷ್ಟು ಪ್ರೀತಿ ಗೌರವ ಅಭಿಮಾನದಿಂದ ಕಾಣುತ್ತಿದ್ದರು. ಅಪ್ಪಾಜಿ ಹಾಗೂ ನಮ್ಮ ಕುಟುಂಬ ಕೂಡ ವಿಷ್ಣು ಅವರನ್ನು ತುಂಬು ಪ್ರೀತಿಯಿಂದ ಕಂಡಿದ್ದೇವೆ.! ವಿಷ್ಣುವರ್ಧನ್ ಅವರ ಅಭಿಮಾನಿಗಳ ಕೋರಿಕೆ ಕೊನೆಗೂ ಸ್ಮಾರಕ ರೂಪದಲ್ಲಿ ಈಡೇರುತ್ತಿರುವ ವಿಷಯ ನನಗೆ ಹಾಗೂ ನಮ್ಮ ಚಿತ್ರರಂಗಕ್ಕೆ ಬಹಳ ಹೆಮ್ಮೆಯ ವಿಷಯ - ನಿಮ್ಮ ಶಿವಣ್ಣ"


Click it and Unblock the Notifications











