ಸಾಯುವ ಕೊನೆ ಕ್ಷಣದಲ್ಲೂ 'ದರ್ಶನ್ ನಮ್ಮ ಬಾಸ್' ಎಂದಿದ್ದ ರೇಣುಕಾಸ್ವಾಮಿ; ಛೇ, ಈ ಸಾವು ನ್ಯಾಯವೇ?
ನಿಜಕ್ಕೂ ಇದು ಬಹಳ ಘೋರ. ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನದಿಂದ ರೇಣುಕಾಸ್ವಾಮಿ ಜೀವ ಕಳೆದುಕೊಳ್ಳುವಂತಾಗಿದೆ. ಇನ್ನು ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದ್ದು ಗಂಭೀರ ಆರೋಪಗಳಿವೆ. ಕ್ಷುಲ್ಲಕ ಕಾರಣಕ್ಕೆ ಒಂದು ಜೀವವೇ ಹೋಗಿಬಿಟ್ಟಿದೆ. ಒಬ್ಬ ಗರ್ಭಿಣಿ ಮಹಿಳೆಯ ಬಾಳು ಕತ್ತಲಾಗಿದೆ. ರೇಣುಕಾ ಸ್ವಾಮಿ ಹಲ್ಲೆ ನಡೆದಾಗ ನಾನು ಅಲ್ಲಿರಲಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
ಖುದ್ದು ದರ್ಶನ್ ಆಣತಿಯಂತೆ ಆಪ್ತರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ್ದಾರೆ. ಇದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ನಡೆದಾಗ ನಟ ದರ್ಶನ್ ಸಹ ಸ್ಥಳದಲ್ಲೇ ಇದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ 13 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ.

ದೂರದ ಚಿತ್ರದುರ್ಗದಲ್ಲಿ ಮೆಡಿಕಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾ ಸ್ವಾಮಿ ಅನ್ಯಾಯವಾಗಿ ಜೀವ ಬಿಟ್ಟಿದ್ದಾರೆ. ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಾರಣಕ್ಕೆ ಆತನನ್ನು ಕರೆತಂದು ಥಳಿಸಿದ್ದು ಕೊನೆಗೆ ಆತನ ಪ್ರಾಣಪಕ್ಷಿ ಹಾರಿಹೋಗಿದೆ. ಬಳಿಕ ಶವವನ್ನು ಸುಮನಹಳ್ಳಿ ಠಾಣಾ ವ್ಯಾಪ್ತಿಯ ಬ್ರಿಡ್ಜ್ ಬಳಿ ಎಸೆಯಲಾಗಿತ್ತು. ಭಾನುವಾರ ಬೆಳಗ್ಗೆ ಶವವನ್ನು ನಾಯಿಗಳು ಎಳೆದಾಡುತ್ತಿದ್ದವು. ಬಳಿಕ ಪೊಲೀಸರು ತಣಿಖೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದರು.
ಮೊದಲಿಗೆ ಶವ ಯಾರದ್ದು ಏನು? ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದರು. ಕೊಲೆಗೆ ಕಾರಣ ಏನು? ಕೊಲೆ ಮಾಡಿದ್ದು ಯಾರು? ಎನ್ನುವ ಬಗ್ಗೆ ತನಿಖೆ ಶುರುವಾಯಿತು. ಪೊಲೀಸರು ಆರೋಪಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಶಾಕಿಂಗ್ ಸಂಗತಿಗಳು ಹೊರಬಂದವು. ಬಳಿಕ ಪ್ರಕರಣದ ಸಂಬಂಧ ಮೈಸೂರಿನ ಹೋಟೆಲ್‌ನಲ್ಲಿದ್ದ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಕರೆತಂದಿದ್ದಾರೆ.

ವಿಚಾರಣೆ ವೇಳೆ ಘಟನೆ ಬಗ್ಗೆ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿದ್ದು, ವಿನಯ್ ಅವರ ಮಾವನ ಶೆಡ್‌ನಲ್ಲಿ ಕೂಡಿ ಹಾಕಿದ್ದು ಥಳಿಸಿದ್ದು ಎಲ್ಲವನ್ನು ಹೇಳಿದ್ದಾರೆ. ಇನ್ನು ರೇಣುಕಾಸ್ವಾಮಿಯನ್ನು ಥಳಿಸುವ ವೇಳೆ ಆತ ಹೇಳಿದ್ದೇನು? ಎನ್ನುವುದನ್ನು ಆರೋಪಿಗಳು ತಿಳಿಸಿದ್ದಾರೆ. ಕೊನೆ ಕ್ಷಣದಲ್ಲೂ ದರ್ಶನ್ ನಮ್ಮ ಬಾಸ್ ಎಂದು ಎಂದು ರೇಣುಕಾಸ್ವಾಮಿ ಹೇಳುತ್ತಿದ್ದ ಎಂದಿದ್ದಾರೆ.
ಕೊಲೆಗೂ ಮುನ್ನ ಕೂಡ "ದರ್ಶನ್ ನಮ್ಮ ಬಾಸ್.. ನಮ್ಮ ಬಾಸ್ ಸಂಸಾರ ಹಾಳು ಮಾಡಿದವಳು ಪವಿತ್ರಾ.. ಅದಕ್ಕೆ ಮೆಸೇಜ್ ಮಾಡಿದ್ದೆ ಎಂದು ರೇಣುಕಾಸ್ವಾಮಿ ಹೇಳುತ್ತಿದ್ದ" ಎಂದು ದರ್ಶನ್ ಆಪ್ತರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಜಕ್ಕೂ ಇದನ್ನು ಕೇಳಿ ಕೆಲವರಿಗೆ ಆಘಾತವಾಗಿದೆ. ತಮ್ಮ ನೆಚ್ಚಿನ ನಟನ ಬಗ್ಗೆ ಇಷ್ಟೆಲ್ಲಾ ಅಭಿಮಾನ ಇಟ್ಟುಕೊಂಡಿದ್ದೇ ರೇಣುಕಾಸ್ವಾಮಿಗೆ ಕಂಟಕವಾಗಿಬಿಟ್ಟಿದೆ.
ಆರೋಪ ಸಾಬೀತಾದರೆ ನಟ ದರ್ಶನ್‌ಗೂ ಕಠಿಣ ಶಿಕ್ಷೆ ಆಗುವ ಸಾಧ್ಯತೆಯಿದೆ. ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎನ್ನುತ್ತಿದ್ದ ದರ್ಶನ್ ಒಂದರ್ಥದಲ್ಲಿ ರೇಣುಕಾಸ್ವಾಮಿ ಸಾವಿಗೆ ಕಾರಣವಾಗಿರುವುದು ವಿಪರ್ಯಾಸ. ಇದೆಲ್ಲದರ ನಡುವೆಯೂ ಕೆಲ ಅಭಿಮಾನಿಗಳು ದರ್ಶನ್ ಪರ ನಿಂತಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಮುಂದೆ ಜಮಾಯಿಸಿ ಜೈಕಾರ ಕೂಗುತ್ತಿರುವುದು ವಿರ್ಪಯಾಸ. ಮುಂದೆ ಈ ಪ್ರಕರಣ ಯಾವ ಯಾವ ಸ್ವರೂಪ ಪಡೆಯುತ್ತೆ ಎಂದು ಕಾದು ನೋಡಬೇಕಿದೆ.


Click it and Unblock the Notifications











