ದೀಪಾವಳಿ ಹಬ್ಬಕ್ಕೂ ಮತ್ತದೇ ಬೇಡಿಕೆ: ಈ ಬಾರಿ ಆದರೂ ಅಭಿಮಾನಿಗಳ ಆಸೆ ಈಡೇರಿಸುತ್ತಾ 'ಕ್ರಾಂತಿ' ಚಿತ್ರತಂಡ?
ಚಾಲೆಂಜಿಂಗ್ ಸ್ಟಾರ್ ದರ್ಶನ ನಟನೆಯ 'ಕ್ರಾಂತಿ' ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದು ಬಿಟ್ಟರೆ ಸಿನಿಮಾ ಬಗ್ಗೆ ಯಾವುದೇ ನ್ಯೂಸ್ ಚಿತ್ರತಂಡದಿಂದ ಬರ್ತಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೂ ಕೂಡ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾಯುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಒಂದು ಬೇಡಿಕೆ ಇಟ್ಟಿದ್ದಾರೆ.
ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಕ್ರಾಂತಿ' ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ರಚಿತಾರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಕ್ಷರ'ಕ್ರಾಂತಿ'ಯ ಕಥೆಯನ್ನು ಹೇಳಲಾಗುತ್ತಿದೆ. ಅಂದರೆ ಕನ್ನಡ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಚರ್ಚಿಸಲಾಗುತ್ತಿದೆ.
ಅಭಿಮಾನಿಗಳು ಸಿನಿಮಾ ರಿಲೀಸ್ ಅನೌನ್ಸ್ ಆಗುವುದಕ್ಕೂ ಮೊದಲೇ 'ಕ್ರಾಂತಿ' ಪ್ರಚಾರ ಶುರು ಮಾಡಿದ್ದಾರೆ. ಆದರೆ ಚಿತ್ರತಂಡ ಮಾತ್ರ ಯಾವುದೇ ಅಪ್‌ಡೇಟ್ ಕೊಡುತ್ತಿಲ್ಲ. ಕಂಪ್ಲೀಟ್ ಚಿತ್ರೀಕರಣ ಮುಗಿದು ಪ್ರಚಾರ ಮಾಡುವ ಸಮಯ ಬಂದಾಗ ಮಾತನಾಡುತ್ತೇವೆ ಎಂದು ನಿರ್ಮಾಪಕರು ಹೇಳುತ್ತಿದ್ದಾರೆ. ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಸ್ವತಃ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಹಾಗಾಗಿ 'ಕ್ರಾಂತಿ' ಆಲ್ಬಮ್ ಬಗ್ಗೆ ಭಾರೀ ಕುತೂಹಲ ಇದೆ. ಚಿತ್ರದ ಹಾಡೊಂದನ್ನು ದೀಪಾವಳಿ ಹಬ್ಬಕ್ಕೆ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ.

ಪೋಸ್ಟರ್‌ಗಳು, ದರ್ಶನ್ ಬರ್ತ್‌ಡೇ ಟೀಸರ್ ಬಿಟ್ಟರೆ ಚಿತ್ರದ ಯಾವುದೇ ಕಂಟೆಂಟ್ ಇನ್ನು ರಿವೀಲ್ ಆಗಿಲ್ಲ. ಕೊನೆ ಪಕ್ಷ ದೀಪಾವಳಿ ಹಬ್ಬಕ್ಕಾದರೂ ಒಂದು ಸಾಂಗ್ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ. ಅಕ್ಟೋಬರ್ 24ಕ್ಕೆ ಬೆಳಕಿನ ಹಬ್ಬ. ಆ ಸಂಭ್ರಮದಲ್ಲಿ ನಾವು ಕುಣಿದು ಸಂಭ್ರಮಿಸಲು ಸಾಂಗ್ ಬೇಕು ಎನ್ನುತ್ತಿದ್ದಾರೆ. ಈ ಹಿಂದೆ ಗಣೇಶ ಹಬ್ಬದ ವೇಳೆಯೂ ಇಂಥದ್ದೇ ಬೇಡಿಕೆ ಇಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ನವೆಂಬರ್ ಅಂತ್ಯಕ್ಕೆ 'ಕ್ರಾಂತಿ' ಸಿನಿಮಾ ತೆರೆಗಪ್ಪಳಿಸುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ಅದಕ್ಕೂ ಮುಂಚೆ ಸಾಂಗ್ ರಿಲೀಸ್ ಮಾಡಿ ಪ್ರಮೋಷನ್ ಶುರುಮಾಡಿ ಎನ್ನುತ್ತಿದ್ದಾರೆ. ಇದಕ್ಕೆ ಚಿತ್ರತಂಡ ಏನು ಹೇಳುತ್ತದೋ ಕಾದು ನೋಡಬೇಕು.

'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಎನ್‌ಆರ್‌ಐ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೋಲ್ಯಾಂ ಡ್‌ನಲ್ಲಿ 2 ಸಾಂಗ್ ಹಾಗೂ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿಯಲಾಗಿತ್ತು. ಇನ್ನು ಚಿತ್ರದಲ್ಲಿ 'ಡ್ಯಾನ್ಸ್ ವಿತ್ ಪದ್ಮಾವತಿ' ಎನ್ನುವ ಸ್ಪೆಷಲ್ ಸಾಂಗ್ ಕೂಡ ಇದೆ ಎಂದು ಹೇಳಲಾಗುತ್ತಿದ್ದು ಕೆಲವೇ ದಿನಗಳ ಹಿಂದೆ ಶೂಟಿಂಗ್ ನಡೆದಿದೆ ಎನ್ನಲಾಗ್ತಿದೆ. ಒಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಅಪ್‌ಡೇಟ್ ಹಾಗೂ ಸಾಂಗ್‌ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಪ್‌ಡೇಟ್ ಸಿಕ್ಕರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











