ಗಣೇಶನ ಕೈಯಲ್ಲೂ 'ಕ್ರಾಂತಿ' ಪೋಸ್ಟರ್: ಹಬ್ಬಕ್ಕೆ ಬೇಕೇ ಬೇಕು 'ಕ್ರಾಂತಿ'ಗೀತೆ!
ಅಭಿಮಾನಿಗಳಿಂದ 'ಕ್ರಾಂತಿ' ಸಿನಿಮಾ ಪ್ರಮೋಷನ್ ಮುಂದುವರೆದಿದೆ. ಸಿನಿಮಾ ರಿಲೀಸ್ ಸಮಯ ಹತ್ತಿರವಾಗ್ತಿದ್ದಂತೆ ಪ್ರಮೋಷನ್ ಸ್ಪೀಡ್ ಹೆಚ್ಚಿಸಿದ್ದು, ಗಣೇಶ ಹಬ್ಬದ ಸಂಭ್ರಮದಲ್ಲಿ ಮತ್ತಷ್ಟು ದೊಡ್ಡಮಟ್ಟದಲ್ಲಿ ಚಿತ್ರವನ್ನು ಪ್ರೇಕ್ಷಕರ ಬಳಿ ತಗೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಗಣೇಶ ಹಬ್ಬಕ್ಕೆ 'ಕ್ರಾಂತಿ' ಚಿತ್ರದ ಸಾಂಗ್ ರಿಲೀಸ್ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ವಿ. ಹರಿಕೃಷ್ಣ ನಿರ್ದೇಶದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಮತ್ತೊಂದ್ಕಡೆ ಅಭಿಮಾನಿಗಳು ಭರ್ಜರಿ ಪ್ರಮೋಷನ್ ಮಾಡ್ತಿದ್ದಾರೆ. ವಿಶೇಷ ಅಂದರೆ ವಿಘ್ನ ನಿವಾರಕ ಗಣೇಶನ ಕೈಗೂ 'ಕ್ರಾಂತಿ' ಸಿನಿಮಾ ಪೋಸ್ಟರ್ ಕೊಟ್ಟಿದ್ದಾರೆ. ಗಣೇಶನ ಜೊತೆಗೆ ನಟ ದರ್ಶನ್ ಮೂರ್ತಿ ತಯಾರಿಸಿದ್ದು, ಅದರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ದರ್ಶನ್ ಅಭಿಮಾನಿಗಳು ಗಣೇಶ ಹಬ್ಬದ ಸಂಭ್ರಮದಲ್ಲಿ ಬೀದಿ ಬೀದಿಗಳಲ್ಲೂ ಸಿನಿಮಾ ಪ್ರಮೋಷನ್ ಮಾಡುವ ಸುಳಿವು ಕೊಟ್ಟಿದ್ದಾರೆ.
ಅಕ್ಷರ 'ಕ್ರಾಂತಿ'ಯ ಕುರಿತಾಗಿ ಈ ಸಿನಿಮಾ ಮೂಡಿ ಬರ್ತಿದೆ. ಅಭಿಮಾನಿಗಳು ಕೇಳುವ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ವಿಷಯವನ್ನು ಚಿತ್ರದಲ್ಲಿ ಚರ್ಚಿಸುವ ಪ್ರಯತ್ನ ನಡೆದಿದೆ. ಇನ್ನು ಆಗಸ್ಟ್ 31ರಂದು ದೇಶ್ಯಾದ್ಯಂತ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲು ಸಿದ್ಧತೆ ಶುರುವಾಗಿದೆ. ಈಗಾಗಲೇ ಅಂಗಡಿಗಳಲ್ಲಿ ಗಣೇಶ ಮೂರ್ತಿಗಳು ಮಾರಾಟ ಆರಂಭವಾಗಿದೆ. ಗಣೇಶನ ಜೊತೆಗಿರುವ ಪುನೀತ್ ರಾಜ್‌ಕುಮಾರ್ ಮೂರ್ತಿಗಳಿಗೆ ಸಖತ್ ಡಿಮ್ಯಾಂಡ್ ಇದೆ. ಇದೀಗ 'ಕ್ರಾಂತಿ' ಗಣೇಶ ಕೂಡ ಸದ್ದು ಮಾಡ್ತಿದೆ.

ಗಣೇಶ ಹಬ್ಬಕ್ಕೆ ಅಭಿಮಾನಿಗಳ 'ಕ್ರಾಂತಿ'
ಚಿತ್ರತಂಡಕ್ಕೂ ಮೊದಲೇ ಅಭಿಮಾನಿಗಳು 'ಕ್ರಾಂತಿ' ಸಿನಿಮಾ ಪ್ರಮೋಷನ್ ಮಾಡ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪೋಸ್ಟರ್ ಹಿಡಿದು ರ್ಯಾಲಿಗಳನ್ನು ನಡೆಸುತ್ತಿದೆ. ಹಬ್ಬ, ಜಾತ್ರೆ, ಎಲ್ಲೆಂದರಲ್ಲಿ 'ಕ್ರಾಂತಿ' ಪೋಸ್ಟರ್ ರಾರಾಜಿಸುವಂತೆ ಮಾಡಿದ್ದಾರೆ. ಇದೀಗ ಗಣೇಶನ ಕೈಗೂ ಸಿನಿಮಾ ಪೋಸ್ಟರ್ ಕೊಟ್ಟಿದ್ದಾರೆ. ಗಣೇಶನ ಪಕ್ಕದಲ್ಲಿ 'ಕ್ರಾಂತಿ'ಯ ನಾಯಕ ದರ್ಶನ್ ಲುಕ್ ಮೂರ್ತಿ ಮಾಡಿದ್ದಾರೆ. ಆ ಫೋಟೊ ಈಗ ಸಖತ್ ವೈರಲ್ ಆಗಿದೆ. ಇಂತಹ ಮೂರ್ತಿಗಳನ್ನು ಮತ್ತಷ್ಟು ತಯಾರಿಸಿ ಪೂಜಿಸಲು ಮನಸ್ಸು ಮಾಡಿದ್ದು, ಹಬ್ಬದ ಸಂಭ್ರಮದಲ್ಲಿ ಮತ್ತಷ್ಟು ಜೋರಾಗಿ ಪ್ರಮೋಷನ್ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಹಬ್ಬಕ್ಕೆ ಬೇಕೇ ಬೇಕು 'ಕ್ರಾಂತಿ'ಗೀತೆ
ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರದ ಸಾಂಗ್ ರಿಲೀಸ್ ಮಾಡಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ನಿರ್ಮಾಪಕರು ಹಾಗೂ ನಿರ್ದೇಶಕರಲ್ಲಿ ಮನವಿ ಮಾಡುತ್ತಿದ್ದಾರೆ. ಗಣೇಶನ ಪೆಂಡಾಲ್‌ನಲ್ಲಿ ಕುಣಿಯಲು 'ಕ್ರಾಂತಿ' ಚಿತ್ರದ ಜಬರ್ದಸ್ತ್ ಸಾಂಗ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರುತ್ತಿರುವುದರಿಂದ ಚಿತ್ರತಂಡ ಅಭಿಮಾನಿಗಳ ಕೋರಿಕೆಯಂತೆ ಸಾಂಗ್ ರಿಲೀಸ್ ಮಾಡುವ ಸಾಧ್ಯತೆಯಿದೆ.

ರಾಜ್ಯೋತ್ಸವಕ್ಕೆ ದರ್ಶನ್ 'ಕ್ರಾಂತಿ'
ಸರ್ಕಾರಿ ಕನ್ನಡ ಶಾಲೆಗಳ ಕುರಿತಾಗಿ 'ಕ್ರಾಂತಿ' ಚಿತ್ರದಲ್ಲಿ ಚರ್ಚಿಸಲಾಗಿದೆ. ಹಾಗಾಗಿ ಈ ಸಿನಿಮಾ ರಾಜ್ಯೋತ್ಸವ ಸಂಭ್ರಮದಲ್ಲಿ ರಿಲೀಸ್ ಆಗಬೇಕು ಎನ್ನುವುದು ಚಿತ್ರತಂಡದ ಲೆಕ್ಕಚಾರ. ಅದೇ ಕಾರಣಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಚುರುಕುಗೊಳಿಸಿದ್ದು, ಶತಾಯಗತಾಯ ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಸುಳಿವು ಸಿಕ್ತಿದೆ.

ಹಬ್ಬಕ್ಕೆ 'ಕ್ರಾಂತಿ' ರಿಲೀಸ್ ಡೇಟ್
'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ಘಟಾನುಗಟಿ ಕಲಾವಿದರು ನಟಿಸಿದ್ದಾರೆ. ಗಣೇಶ ಹಬ್ಬಕ್ಕೆ ಸಾಂಗ್ ರಿಲೀಸ್ ಆಗದೇ ಇದ್ದರೂ ಹೊಸ ಪೋಸ್ಟರ್ ಸಮೇತ ರಿಲೀಸ್ ಡೇಟ್ ಘೋಷಣೆಯಾಗಲಿದೆ. ಆ ಮೂಲಕ ಅಭಿಮಾನಿಗಳಿಗೆ ಹಬ್ಬದ ಸಂಭ್ರಮದಲ್ಲಿ ಸಿಹಿಸುದ್ದಿ ಸಿಗಲಿದೆ.


Click it and Unblock the Notifications











