ದರ್ಶನ್ ಫ್ಯಾನ್ಸ್ vs ತೆಲುಗು ನೆಟ್ಟಿಗರ ಮಧ್ಯೆ ಕಿರಿಕ್; ಅಷ್ಟಕ್ಕೂ ಏನಾಯ್ತು?
ಒಂದ್ಕಾಲದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಭಾರೀ ಕಿರಿಕ್ ನಡೀತಿತ್ತು. ಇದು ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು. ಆದರೆ ಈಗ ಇಂತಹ ಕಿರಿಕ್ ಸೋಶಿಯಲ್ ಮೀಡಿಯಾಗೆ ಶಿಫ್ಟ್ ಆಗಿದೆ. ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ.
ಇದ್ದಕ್ಕಿದಂತೆ ಟ್ವಿಟ್ಟರ್‌ನಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ತೆಲುಗು ನೆಟ್ಟಿಗರ ನಡುವೆ ತಿಕ್ಕಾಟ ಶುರುವಾಗಿದೆ. ನಟ ದರ್ಶನ್ ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ಈ ಮಧ್ಯೆ ತೆಲುಗು ನೆಟ್ಟಿಗರು ಕ್ಯಾತೆ ತೆಗೆದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋಗಿ ಬಂದ ವಿಚಾರ ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.

ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಬಿಟ್ಟುಕೊಡಲ್ಲ. ದರ್ಶನ್ ಬಗ್ಗೆ ಏನೇ ಆರೋಪಗಳಿದ್ದರೂ ಅವರ ಪರ ಮಾತನಾಡುತ್ತಾ ಬರ್ತಿದ್ದಾರೆ. ಇಂತಹ ಸಮಯದಲ್ಲಿ ನೆಚ್ಚಿನ ನಟನನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಡಲು ಪ್ರಾರಂಭಿಸಿದ್ದಾರೆ. ತೆಲುಗು ನಟರೆಲ್ಲಾ ನಮ್ಮ ಬಾಸ್ ಮುಂದೆ ಏನೇನು ಅಲ್ಲ ಎಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದು ಕೆಟ್ಟ ಸ್ವರೂಪ ಪಡೆದುಕೊಂಡಿದೆ.
ಬಹಳ ಕೆಟ್ಟದಾಗಿ ಮೀಮ್ಸ್ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಇದ್ದಕ್ಕಿದಂತೆ #DBoss ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗ್ತಿದೆ. ನೂರಾರು ಪೋಸ್ಟ್‌ಗಳು ಹರಿದಾಡುತ್ತಿದೆ. ನಮ್ಮ ನಟನೇ ಗ್ರೇಟ್ ಎಂದು ಬಿಂಬಿಸುವ ಭರದಲ್ಲಿ ಅವರ ವಿರುದ್ಧ ಇವ್ರು, ಇವರ ವಿರುದ್ಧ ಅವ್ರು ಟ್ವೀಟ್ ವಾರ್ ನಡೆಸುತ್ತಿದ್ದಾರೆ. ಇದು ಬಹಳ ಕೆಟ್ಟ ಸ್ವರೂಪ ಪಡೆಯುತ್ತಿದೆ.
ದರ್ಶನ್ ಅಭಿಮಾನಿ 'ಆಪತ್ಬಾಂಧವ' ಎಂಬ ಟ್ವಿಟ್ಟರ್ ಅಕೌಂಟ್‌ನಲ್ಲಿ ವೀಡಿಯೋ ಶೇರ್ ಆಗಿತ್ತು. ದರ್ಶನ್ ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ವಿಡಿಯೋ ಅದು. ಇದ್ದಕ್ಕಿದಂತೆ ಅದು ಸಖತ್ ವೈರಲ್ ಆಗಿತ್ತು. ಬಾಸ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರು. ತೆಲುಗು ನೆಟ್ಟಿಗರು ಇದನ್ನು ನೋಡಿ ಕುಹಕವಾಡಿದ್ದರು. ಇದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಈ ಟ್ರೋಲ್ ವಾರ್ ಶುರುವಾಗಿದೆ.
ಏಟಿಗೆ ಏಟು ಎನ್ನುವಂತೆ ಪರಸ್ಪರ ಟ್ವೀಟ್‌ಗಳಲ್ಲೇ ಕೆಣಕಿದ್ದಾರೆ. ಆ ಕಿಡಿ ಮತ್ತಷ್ಟು ಹೆಚ್ಚಾಗಿದೆ. ಇದೆಲ್ಲದರ ನಡುವೆ ಆ ವೀಡಿಯೋ 2 ಮಿಲಿಯನ್ ವೀವ್ಸ್ ಸಾಧಿಸಿ ವೈರಲ್ ಆಗುತ್ತಿದೆ. ಅಂದಹಾಗೆ ಯಾವುದೂ ಕೂಡ ಅತಿಯಾಗಬಾರದು. ಅಂಧಾಭಿಮಾನ ಕೂಡ ಸರಿಯಲ್ಲ. ಇದು ಮುಂದೆ ನಾನಾ ಅನರ್ಥಗಳಿಗೆ ಕಾರಣವಾಗಬಹುದು.
ಮತ್ತೊಂದು ಕಡೆ ನಟ ದರ್ಶನ್ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ದಸರಾ ವೇಳೆಗೆ ತೆರೆಗೆ ಬರಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಅದಕ್ಕಾಗಿ ಶೀಘ್ರದಲ್ಲೇ ತಂಡ ವಿದೇಶಕ್ಕೆ ಹೊರಡಲಿದೆ.
ಉದಯ್‌ಪುರದಲ್ಲಿ 'ಡೆವಿಲ್' ಚಿತ್ರದ ಒಂದು ಶೆಡ್ಯೂಲ್ ಮುಗಿಸಿತ್ತು ಚಿತ್ರತಂಡ. ಅದಕ್ಕೆ ಸಂಬಂಧಿಸಿ ಮೇಕಿಂಗ್ ವೀಡಿಯೋ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಬಹಳ ಅದ್ಧೂರಿಯಾಗಿ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಬಹಳ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ.


Click it and Unblock the Notifications