ಧರ್ಮಸ್ಥಳದಲ್ಲೂ ಕಾಟೇರ, ಚಿನ್ನಸ್ವಾಮಿಯಲ್ಲೂ ಕಾಟೇರ; ಕೊಹ್ಲಿಗೆ ವಿಶ್ ಮಾಡಿ ಲವ್ ಯು ಡಿಬಾಸ್ ಎಂದ ಫ್ಯಾನ್ಸ್
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಚಿತ್ತವೆಲ್ಲಾ ಅವರ ನಟನೆಯ ಮುಂದಿನ ಚಿತ್ರ ಕಾಟೇರದತ್ತ ಇದೆ. ಈ ವರ್ಷ ಬಿಡುಗಡೆಗೊಂಡ ಕ್ರಾಂತಿ ಸಿನಿಮಾ ದರ್ಶನ್ ಸ್ಟಾರ್‌ಗಿರಿಗೆ ತಕ್ಕಂತ ಯಶಸ್ಸು ಸಾಧಿಸುವಲ್ಲಿ ವಿಫಲವಾಗಿದ್ದು, ಕಾಟೇರ ದರ್ಶನ್ ಅವರಿಗೆ ಕಮ್ ಬ್ಯಾಕ್ ಸಿನಿಮಾವಾಗಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಇಬ್ಬರಲ್ಲಿಯೂ ಸಹ ಇದೆ.
ಇನ್ನು ಈ ಹಿಂದೆ ದರ್ಶನ್ ಅವರಿಗೆ ರಾಬರ್ಟ್ ಚಿತ್ರವನ್ನು ನಿರ್ದೇಶಿಸಿ ಬೃಹತ್ ಗೆಲುವು ಸಾಧಿಸಿದ್ದ ನಿರ್ದೇಶಕ ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಮೊದಲಿಗೆ ಟೈಟಲ್ ವಿಚಾರವಾಗಿ ಸಾಕಷ್ಟು ಸುದ್ದಿ ಮಾಡಿದ್ದ ಕಾಟೇರ ಬಳಿಕ ನಟಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಮಗಳು ರಾಧನಾ ರಾಮ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಇತ್ತೀಚೆಗಷ್ಟೆ ರಾಧನಾ ರಾಮ್ ಚಿತ್ರದಲ್ಲಿ ಪ್ರಭಾವತಿ ಎಂಬ ಹಳ್ಳಿ ಹುಡುಗಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಆಕೆಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸಲಾಯಿತು. ಹೀಗೆ ಒಂದೊಂದಾಗಿ ಅಪ್‌ಡೇಟ್ ನೀಡುತ್ತಾ ಬಂದಿರುವ ಕಾಟೇರ ಚಿತ್ರತಂಡ ನಿರೀಕ್ಷೆಯನ್ನು ಹೆಚ್ಚಿಸುತ್ತಾ ಬಂದಿದೆ.
ಇನ್ನು ಚಿತ್ರತಂಡ ಇಲ್ಲಿಯವರೆಗೂ ನೀಡಿರುವ ಎಲ್ಲಾ ಅಪ್‌ಡೇಟ್‌ಗಳಿಗಿಂತ ಹೆಚ್ಚು ಕ್ರೇಜ್ ಹುಟ್ಟುಹಾಕಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಸ್ಟ್ ಲುಕ್ ಪೋಸ್ಟರ್. ಹೌದು, ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಕಾಟೇರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿತ್ತು. ಈ ಪೋಸ್ಟರ್‌ನಲ್ಲಿ ದರ್ಶನ್ ಪಂಚೆ, ಶರ್ಟು ಧರಿಸಿ, ಕೈನಲ್ಲಿ ಮಚ್ಚು ಹಿಡಿದು, ಪಕ್ಕಾ ಹಳ್ಳಿ ಹೈದನ ಗೆಟಪ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದರು.
ಹಲವು ದಿನಗಳ ಬಳಿಕ ದರ್ಶನ್ ಅವರ ತುಂಬಾ ವಿಭಿನ್ನ ಎನಿಸುವ ಲುಕ್ ಕಂಡ ಅಭಿಮಾನಿಗಳು ತರುಣ್ ಸುಧೀರ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದರು. ಇನ್ನು ದರ್ಶನ್ ಹಾಗೂ ಮೀಡಿಯಾ ನಡುವೆ ಮನಸ್ತಾಪ ಇರುವ ಕಾರಣ ಮೀಡಿಯಾ ದರ್ಶನ್ ಅವರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಧಾರ ತೆಗೆದುಕೊಂಡಿರುವುದು ನಿಮಗೆಲ್ಲಾ ತಿಳಿದೇ ಇದೆ. ಹಾಗೆಂದ ಮಾತ್ರಕ್ಕೆ ದರ್ಶನ್ ಸಿನಿಮಾಗಳು ಪ್ರಚಾರ ಪಡೆದುಕೊಳ್ಳುತ್ತಿಲ್ಲ ಎಂದಲ್ಲ.
ಕ್ರಾಂತಿ ಚಿತ್ರ ಮೀಡಿಯಾ ಬೆಂಬಲ ಇಲ್ಲದೇ ಅಭಿಮಾನಗಳಿಂದಲೇ ಪ್ರಚಾರವನ್ನು ಪಡೆದುಕೊಂಡಿತ್ತು. ದರ್ಶನ್ ಫ್ಯಾನ್ಸ್ ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಮಾಡಿಸಿ ವಿವಿಧೆಡೆ ಪ್ರಚಾರ ಮಾಡಿದ್ದರು. ಅದೇ ರೀತಿ ಇದೀಗ ಕಾಟೇರ ಚಿತ್ರಕ್ಕೂ ಸಹ ದರ್ಶನ್ ಅಭಿಮಾನಿಗಳು ಪ್ರಚಾರ ಮಾಡುವ ಮೂಲಕ ಬೆಂಬಲ ನೀಡಲು ಮುಂದಾಗಿದ್ದಾರೆ. ಚಿತ್ರದ ಚಿತ್ರೀಕರಣ ಆರಂಭಗೊಳ್ಳುವ ಮುನ್ನವೇ ದರ್ಶನ್ ಅಭಿಮಾನಿಗಳು ಕಾಟೇರ ಜಪವನ್ನು ಶುರು ಮಾಡಿಕೊಂಡಿದ್ದಾರೆ.
ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಕಾಟೇರ ಚಿತ್ರದ ಪೋಸ್ಟರ್‌ಗಳನ್ನು ಹಿಡಿದಿರುವ ದರ್ಶನ್ ಅಭಿಮಾನಿಗಳ ಗುಂಪೊಂದು ಚಿತ್ರಕ್ಕೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಮಂಜುನಾಥನ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದಾರೆ. ಹೀಗೆ ಅಭಿಮಾನಿಗಳು ಕಾಟೇರ ಚಿತ್ರದ ಪೋಸ್ಟರ್ ಹಿಡಿದು ಧರ್ಮಸ್ಥಳದ ದೇವಸ್ಥಾನದ ಮುಂದೆ ನಿಂತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಷ್ಟೇ ಅಲ್ಲದೇ ನಿನ್ನೆ ( ಮಾರ್ಚ್ 26 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿಯೂ ಸಹ ಕಾಟೇರ ಕೂಗು ಕೇಳಿಬಂದಿದೆ. ವಿರಾಟ್ ಕೊಹ್ಲಿ ಹಾಗೂ ದರ್ಶನ್ ಅವರ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಶುಭವಾಗಲಿ ಎಂದು ಬರೆದುಕೊಂಡಿರುವ ಬೋರ್ಡ್ ಹಿಡಿದಿದ್ದಾರೆ. ಈ ಬೋರ್ಡ್‌ನಲ್ಲಿ ಲವ್ ಯೂ ಡಿ ಬಾಸ್ ಕಾಟೇರ ಯಶಸ್ಸು ಸಾಧಿಸಲಿ ಎಂದೂ ಸಹ ಬರೆದುಕೊಂಡಿದ್ದಾರೆ. ಈ ಫೋಟೊ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದು ಡಿ ಬಾಸ್ ಕ್ರೇಜ್ ಎಂದು ದರ್ಶನ್ ಅಭಿಮಾನಿಗಳು ಪೋಸ್ಟ್ ಹಂಚಿಕೊಂಡಿದ್ದಾರೆ.


Click it and Unblock the Notifications











