ಧನ್ವೀರ್ 'ವಾಮನ' ಚಿತ್ರ ಸೋಲಿಸೋಕೆ ನಿಂತವರು ಯಾರು? ದರ್ಶನ್ ಫ್ಯಾನ್ಸ್ ಅಭಯ
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ಮಿತಿ ಮೀರುತ್ತಿದೆ. ತಮ್ಮ ನೆಚ್ಚಿನ ನಟನನ್ನು ಬೆಂಬಲಿಸುವ ಭರದಿಂದ ಮತ್ತೊಬ್ಬ ನಟನನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುವ ವಿಚಿತ್ರ ಸಂಸ್ಕೃತಿ ಶುರುವಾಗಿದೆ. ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಇದು ಮತ್ತಷ್ಟು ತಾರಕಕ್ಕೇರುತ್ತದೆ.
ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್, ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್, ದರ್ಶನ್ ಹಾಗೂ ಯಶ್ ಫ್ಯಾನ್ಸ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಅದು ಕೆಲವೊಮ್ಮೆ ಕೆಟ್ಟ ಸ್ವರೂಪ ಪಡೆದುಕೊಂಡಿರುವ ಉದಾಹರಣೆ ಕೂಡ ಇದೆ. ಮತ್ತೊಬ್ಬ ನಟನ ಅಭಿಮಾನಿಯನ್ನು ಥಳಿಸಿ ಕ್ಷಮೆ ಕೇಳಿಸಿರುವುದು ಇದೆ. ಈ ಹಿಂದೆ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಜೊತೆ ಕೆಟ್ಟದಾಗಿ ವರ್ತಿಸಿದ್ದ ಘಟನೆಯೂ ನಡೆದಿತ್ತು.

ಇತ್ತೀಚೆಗೆ ಟ್ರೋಲ್ ಮಾಡುವುದು ಮಾತ್ರವಲ್ಲ, ಬಿಡುಗಡೆಯಾದ ಸಿನಿಮಾಗಳ ಬಗ್ಗೆ ನೆಗೆಟಿವ್ ಟಾಕ್ ಕ್ರಿಯೇಟ್ ಮಾಡುತ್ತಿದ್ದಾರೆ. ಈ ಮೂಲಕ ಮತ್ತಷ್ಟು ದ್ವೇಷ ಹುಟ್ಟುಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ. ಇತ್ತೀಚೆಗೆ 'ರಾಯಲ್' ಬಿಡುಗಡೆ ಆಗಿದ್ದಾಗ ಇದೇ ರೀತಿಯ ಚರ್ಚೆ ನಡೆದಿತ್ತು. ಸ್ವತಃ ಚಿತ್ರದ ನಿರ್ದೇಶಕ ದಿನಕರ್ ತೂಗುದೀಪ್ ಈ ಬಗ್ಗೆ ಮಾತನಾಡಿದ್ದರು. "ದರ್ಶನ್ ಮೇಲಿನ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ" ಎಂದು ದಿನಕರ್ ಹೇಳಿದ್ದರು.
ಇದೀಗ ಧನ್ವೀರ್ ಗೌಡ ನಟನೆಯ 'ವಾಮನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಇತ್ತೀಚೆಗೆ ದರ್ಶನ್ ಜೊತೆ ಧನ್ವೀರ್ ಹೆಚ್ಚು ಗುರ್ತಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ ದಿನದಿಂದಲೂ ಅವರೊಟ್ಟಿಗೆ ಇದ್ದಾರೆ. ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಧನ್ವೀರ್ ಕಾರ್ ಚಾಲಾಯಿಸಿಕೊಂಡು ಬೆಂಗಳೂರಿಗೆ ಕರೆ ತಂದಿದ್ದರು.
ದರ್ಶನ್ ಆಸ್ಪತ್ರೆಗೆ ಹೋದಾಗಲೂ ಧನ್ವೀರ್ ಕೈ ಹಿಡಿದು ಜೊತೆಗೆ ನಿಂತಿದ್ದರು. ಇದೇ ಕಾರಣಕ್ಕೆ ಧನ್ವೀರ್ ನಟನೆಯ 'ವಾಮನ' ಚಿತ್ರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಆ ಚಿತ್ರದ ಬೆಂಬಲಕ್ಕೆ ನಿಲ್ಲಬೇಕು ಎಂದು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಹೀಗೆ ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಸಿನಿಮಾ ಟಾರ್ಗೆಟ್ ಮಾಡುವ ಕೆಟ್ಟ ಸಂಸ್ಕೃತಿ ತೆಲುಗು, ತಮಿಳು ಚಿತ್ರರಂಗದಲ್ಲಿದೆ. ಇದು ಕನ್ನಡಕ್ಕೂ ನಿಧಾನವಾಗಿ ಬರ್ತಿದೆ.

ತಮ್ಮ ಸಿನಿಮಾಗಳನ್ನು ಟಾರ್ಗೆಟ್ ಮಾಡಿ ಪೈರಸಿ ಮಾಡಿಬಿಟ್ಟರು ಎಂದು ಈ ಹಿಂದೆ ನಿರ್ಮಾಪಕರೇ ಅಳಲು ತೋಡಿಕೊಂಡಿದ್ದ ಘಟನೆಗಳು ನಡೆದಿತ್ತು. 'ವಾಮನ' ಚಿತ್ರಕ್ಕೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹಳ ಹಿಂದೆಯೇ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿ ಬಿಡುಗಡೆ ಆಗುತ್ತಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆಆರ್ ಪೇಟೆ ತಾರಾಗಣದಲ್ಲಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ಹಾಗೂ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ 'ವಾಮನ' ಚಿತ್ರದ ಹಾಡುಗಳಿಗಿದೆ. ಮಹೇಂದ್ರ ಸಿಂಗ್ ಛಾಯಾಗ್ರಹಣ ಚಿತ್ರಕ್ಕಿದ್ದು ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಹಣ ಹೂಡಿದ್ದಾರೆ. 'ಬಜಾರ್' ಚಿತ್ರದ ಮೂಲಕ ಧನ್ವೀರ್ ಗೌಡ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಬೈ ಟು ಲವ್' ಹಾಗೂ 'ಕೈವಾ' ಚಿತ್ರಗಳಲ್ಲಿ ಹೀರೊ ಆಗಿ ನಟಿಸಿದ್ದರು. ಇದೀಗ 'ವಾಮನ'ನಾಗಿ ಅಬ್ಬರಿಸೋಕೆ ಬರ್ತಿದ್ದಾರೆ.


Click it and Unblock the Notifications











