ಅಪ್ಪುಗೆ ಬಾಸ್ ಎಂದ ಕ್ರಿಸ್ ಗೇಲ್; ಆರ್‌ಸಿಬಿ, ಹೊಂಬಾಳೆ ವಿರುದ್ಧ ತಿರುಗಿಬಿದ್ದ ದರ್ಶನ್ ಫ್ಯಾನ್ಸ್!
ಇಂದು ( ಏಪ್ರಿಲ್ 9 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಆರ್‌ಸಿಬಿ ಇನ್‌ಸೈಡರ್ ಸಂದರ್ಶನವನ್ನು ಪೋಸ್ಟ್ ಮಾಡಿದೆ. ಈ ಸಂದರ್ಶನದಲ್ಲಿ ಕನ್ನಡ ಚಲನಚಿತ್ರರಂಗದ ನಾಯಕ ನಟ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಡ್ಯಾನಿಷ್ ಸೇಠ್ ಕ್ರಿಸ್ ಗೇಲ್ ಅವರ ಜತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕ್ರಿಕೆಟ್, ಬೆಂಗಳೂರು, ಕರ್ನಾಟಕ ಹಾಗೂ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇನ್ನು ಈ ಸಂದರ್ಶನದಲ್ಲಿ ಹೈಲೈಟ್ ಎನಿಸಿಕೊಂಡಿದ್ದು ಹಾಗೂ ಇಡೀ ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದು ಕ್ರಿಸ್ ಗೇಲ್ ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಬಗ್ಗೆ ಆಡಿದ ಮಾತುಗಳು. ಹೌದು, ಕ್ರಿಸ್ ಗೇಲ್ ಪುನೀತ್ ರಾಜ್‌ಕುಮಾರ್ ಅವರನ್ನು ಹಾಡಿ ಹೊಗಳಿ ಬಾಸ್ ಎಂದು ಕರೆದಿದ್ದಾರೆ.

ತಮ್ಮ ಇಷ್ಟದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಕ್ರಿಸ್ ಗೇಲ್ ಅವರಿಗೆ ಮಿಸ್ಟರ್ ನ್ಯಾಗ್ಸ್ "ಕ್ರಿಸ್ ಗೇಲ್ ಅವರೇ ನೀವು ಕಲಬುರ್ಗಿಯಲ್ಲಿ ಯಾವುದಾದರೂ ಮ್ಯೂಸಿಕ್ ಪ್ಲೇ ಮಾಡ್ತೀರಾ?" ಎಂದು ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಕ್ರಿಸ್ ಗೇಲ್ "ಅಲ್ಲಿ ಕೇವಲ ಇಬ್ಬರು ಬಾಸ್ ಇದ್ದಾರೆ. ಯೂನಿವರ್ಸ್ ಬಾಸ್ ಹಾಗೂ ಅಪ್ಪು ಬಾಸ್.. ಅಪ್ಪು ಬಾಸ್ ರಿಯಲ್ ಬಾಸ್, ಅಷ್ಟೇ" ಎಂದರು. ಮುಂದುವರಿದು ನಮಗಾಗಿ ಯಾವುದಾದರೂ ಹಾಡು ಹಾಡ್ತೀರ ಎಂದಾಗ ಕ್ರಿಸ್ ಗೇಲ್ ಪುನೀತ್ ರಾಜ್‌ಕುಮಾರ್ ನಟನೆಯ ದೊಡ್ಮನೆ ಹುಡ್ಗ ಚಿತ್ರದ ತ್ರಾಸ್ ಆಕ್ಕೇತಿ ಹಾಡನ್ನು ಹಾಡಿದರು.
ಮುಂದುವರಿದು ಮಾತನಾಡಿದ ಕ್ರಿಸ್ ಗೇಲ್ ಅಪ್ಪು ಮಿಸ್ ಯೂ ಮ್ಯಾನ್ ಎಂದು ಹೇಳಿ ಪುನೀತ್ ರಾಜ್‌ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಹೀಗೆ ಕ್ರಿಸ್ ಗೇಲ್ ಇರೋದು ಇಬ್ಬರೇ ಬಾಸ್, ಒಬ್ಬರು ಯೂನಿವರ್ಸ್ ಬಾಸ್, ಇನ್ನೊಬ್ಬರು ಅಪ್ಪು ಬಾಸ್ ಎಂದು ನೀಡಿರುವ ಹೇಳಿಕೆ ದರ್ಶನ್ ಅಭಿಮಾನಿಗಳ ಬೇಸರ ಹಾಗೂ ಕೋಪಕ್ಕೆ ಕಾರಣವಾಗಿದೆ. ಹೌದು, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಡಿ ಬಾಸ್, ಬಾಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಹೀಗಾಗಿ ಕ್ರಿಸ್ ಗೇಲ್ ತಮ್ಮ ನಟನ ಬದಲಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಬಾಸ್ ಎಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ಟ್ರೋಲ್ ಮಾಡಿದ್ದಾರೆ. ಕ್ರಿಸ್ ಗೇಲ್ ಅವರನ್ನು ನಿಂದಿಸಿರುವ ಕೆಲ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಸಹ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಕನ್ನಡ ಚಲನಚಿತ್ರ ರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ವಿರುದ್ಧವೂ ಸಹ ಟ್ರೋಲ್ ಮಾಡಿದೆ.

ಹೌದು, ಪ್ರಚಾರಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೊಂಬಾಳೆ ಫಿಲ್ಮ್ಸ್ ಕೈಜೋಡಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗಾಗಿ ಈ ಸಂದರ್ಶನದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಹ ಕೈಹಾಕಿದ್ದು, ಬೇಕಂತಲೇ ಇಂತಹ ಹೇಳಿಕೆಯನ್ನು ಕ್ರಿಸ್ ಗೇಲ್ ಅವರ ಬಳಿ ಹೇಳಿಸಿದೆ ಎಂದು ಆರೋಪಿಸಿದ್ದಾರೆ. ಇನ್ನು ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಭಾರತ ದೇಶಕ್ಕೆ ಒಬ್ಬರೇ ಬಾಸ್ ಅದು ಡಿ ಬಾಸ್ ಎಂದು ದರ್ಶನ್ ಅಭಿಮಾನಿಗಳು ಟ್ವಟರ್‌ನಲ್ಲಿ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕ್ರಿಸ್ ಗೇಲ್ ನೀಡಿದ ಈ ಹೇಳಿಕೆ ಸದ್ಯ ಚಂದನವನದಲ್ಲಿ ಫ್ಯಾನ್ ವಾರ್ ಸೃಷ್ಟಿಸಿದೆ.


Click it and Unblock the Notifications











