Kalasipalya Re-Release: ಚಿತ್ರಮಂದಿರದಲ್ಲಿ 'ಕಲಾಸಿಪಾಳ್ಯ' ಕ್ರೇಜ್ ಚಿಂದಿ..ಮತ್ತೆ ತೆರೆಮೇಲೆ ಕೆಂಚನನ್ನು ನೋಡಿ ಫ್ಯಾನ್ಸ್ ಖುಷ್
ದರ್ಶನ್ ನಟನೆಯ ಸೂಪರ್ ಹಿಟ್ 'ಕಲಾಸಿಪಾಳ್ಯ' ಮರುಬಿಡುಗಡೆ ಆಗಿ ಸದ್ದು ಮಾಡ್ತಿದೆ. 21 ವರ್ಷಗಳ ಬಳಿಕ ಸಿನಿಮಾ ಮತ್ತೆ ತೆರೆಗೆ ಬಂದು ಅಭಿಮಾನಿಗಳನ್ನು ರಂಜಿಸುತ್ತಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಚಿತ್ರಮಂದಿರದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ದೊಡ್ಡ ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ 'ಕಲಾಸಿಪಾಳ್ಯ'ದ ಕೆಂಚನನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಶೋ ಶುರುವಾಗುತ್ತಿದ್ದಂತೆ ಸ್ಕ್ರೀನ್ ಮುಂದೆ ಹೋಗಿ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದಾರೆ. ಇಡೀ ಚಿತ್ರಮಂದಿರ ಕ್ರಿಕೆಟ್ ಸ್ಟೇಡಿಯಂ ರೀತಿ ಬದಲಾಗಿತ್ತು. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ದರ್ಶನ್ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದು ಅವರ ಸಿನಿಮಾ ಮರುಬಿಡುಗಡೆ ಆಗಿರುವುದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಹೆಚ್ಚಿನ ಪ್ರಚಾರ ಇಲ್ಲದೇ ಬಂದ ಚಿತ್ರಕ್ಕೆ ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿದೆ. ಜೆಪಿ ನಗರದ ಸಿದ್ಧೇಶ್ವರ, ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರಗಳಲ್ಲಿ ಕೂಡ ಸಂಭ್ರಮಾಚರಣೆ ನಡೆದಿದೆ. ರಾಜ್ಯದ್ಯಂತ ಕೆಲ ಚಿತ್ರಮಂದಿರಗಳಲ್ಲಿ ಈ ವೀಕೆಂಡ್ ಸಿನಿಮಾ ಪ್ರದರ್ಶನವಾಗುತ್ತಿದೆ. ದರ್ಶನ್ ಅಭಿಮಾನಿಗಳಿಗಂತೂ ಹಬ್ಬವೇ ಸರಿ ಎನ್ನುವಂತಾಗಿದೆ. ಈ ಹಿಂದೆ ಕೂಡ ದರ್ಶನ್ ನಟನೆಯ ಹಿಟ್ ಸಿನಿಮಾಗಳು ಮರುಬಿಡುಗಡೆ ಆಗಿ ಸದ್ದು ಮಾಡಿದ್ದವು. ಅದರಲ್ಲೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಯಾವುದೇ ದರ್ಶನ್ ಸಿನಿಮಾ ಬಿಡುಗಡೆ ಆದ್ರು ಸೆಲೆಬ್ರೇಷನ್ ಜೋರಾಗಿ ಇರುತ್ತದೆ. 'ಕಲಾಸಿಪಾಳ್ಯ' ಮರು ಬಿಡುಗಡೆಗೂ ಅದೇ ರೆಸ್ಪಾನ್ಸ್ ಸಿಕ್ಕಿದೆ.
2004ರಲ್ಲಿ ಓಂ ಪ್ರಕಾಶ್ ರಾವ್ 'ಕಲಾಸಿಪಾಳ್ಯ' ಸಿನಿಮಾ ಕಟ್ಟಿಕೊಟ್ಟಿದ್ದರು. ದರ್ಶನ್ ಜೋಡಿಯಾಗಿ ರಕ್ಷಿತಾ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನ್ ಮೊದಲ ಸಿನಿಮಾ ಇದಾಗಿತ್ತು. ನಾಲ್ಕೈದು ಪರಭಾಷಾ ಸಿನಿಮಾಗಳನ್ನು ಮಿಕ್ಸ್ ಮಾಡಿ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರ ತೆರೆಗೆ ತರಲಾಗಿತ್ತು. 'ಕಲಾಸಿಪಾಳ್ಯ'ದ ಲೋಕಲ್ ಹುಡುಗ ಕೆಂಚನ ಪಾತ್ರದಲ್ಲಿ ದರ್ಶನ್ ಅಭಿಮಾನಿಗಳ ಮನ ಗೆದ್ದಿದ್ದರು. ಕೋಟಿ ರಾಮು ಸಿನಿಮಾ ನಿರ್ಮಾಣ ಮಾಡಿ ಸಕ್ಸಸ್ ಕಂಡರು.
ರಾಮ್‌ನಾರಾಯಣ್ ಹಾಗೂ ಸಾಧು ಕೋಕಿಲ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದ ಎಲ್ಲಾ ಹಾಡುಗಳು ಇವತ್ತಿಗೂ ದರ್ಶನ್ ಅಭಿಮಾನಿಗಳ ಹಾಟ್ ಫೇವರಿಟ್ ಎನಿಸಿಕೊಂಡಿದೆ. ಪ್ರತಿ ಹಾಡು ತೆರೆಮೇಲೆ ಬಂದಾಗ ಅಭಿಮಾನಿಗಳು ಬಿಂದಾಸ್ ಆಗಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.


Click it and Unblock the Notifications