ಅರ್ಜುನ್ ಜನ್ಯ ಮೇಲೆ ಮುನಿಸಿಕೊಂಡ ದರ್ಶನ್ ಅಭಿಮಾನಿಗಳು
ನಟ ದರ್ಶನ್ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೇಲೆ ಮುನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು 'ಒಡೆಯ' ಸಿನಿಮಾದ ಹಾಡುಗಳು.
'ಒಡೆಯ' ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿದೆ. ಆದರೆ, ನಾಲ್ಕೂ ಹಾಡುಗಳೂ ನಿರೀಕ್ಷೆಯ ಮಟ್ಟಕ್ಕೆ ಇಲ್ಲ. ಪರಿಣಾಮ ಯೂ ಟ್ಯೂಬ್ ನಲ್ಲಿ ಹಾಡುಗಳು ಮೇಲೆ ಏಳಲು ಒದ್ದಾಡುತ್ತಿವೆ. ಇದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಯಾವುದೇ ಸಿನಿಮಾಗೆ ಆಗಲಿ ಹಾಡುಗಳು ಬಹಳ ಮುಖ್ಯ. ಅದರಲ್ಲಿಯೂ ಕಮರ್ಷಿಯಲ್ ಸಿನಿಮಾಗಳಲ್ಲಿ ಹಾಡು ಗೆದ್ದರೆ, ಸಿನಿಮಾ ಅರ್ಧ ಗೆದ್ದ ಹಾಗೆ ಎನ್ನುವ ಮಾತಿದೆ. ಆದರೆ, 'ಒಡೆಯ' ಮಾತ್ರ ಪ್ರಾರಂಭದಲ್ಲಿಯೇ ಎಡವಿದೆ. ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆ ಕಡಿಮೆ ಮಾಡಿದೆ. ಸಿನಿಮಾ ಹೇಗಿರುತ್ತದೆಯೋ ಎನ್ನುವ ಅನುಮಾನ ಮೂಡಿಸಿದೆ.

ಅರ್ಜುನ್ ಜನ್ಯ ಮೇಲೆ ಬೇಸರ
'ಒಡೆಯ' ಹಾಡುಗಳಿಗೆ ಯೂ ಟ್ಯೂಬ್ ನಲ್ಲಿ ಬಂದ ಕಾಮೆಂಟ್ಸ್ ಗಳನ್ನು ಒಮ್ಮೆ ಗಮನಿಸಿ. ಅದರಲ್ಲಿ ಬಹುತೇಕರು ತಮ್ಮ ಅಸಮಾದಾನ ಹೊರ ಹಾಕಿದ್ದಾರೆ. ಹಾಡುಗಳು ಚೆನ್ನಾಗಿಲ್ಲ. ಅರ್ಜುನ್ ಜನ್ಯ ಒಳ್ಳೆಯ ಹಾಡುಗಳನ್ನು ನೀಡಿಲ್ಲ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. 'ಒಡೆಯ' ಹಾಡುಗಳು ದರ್ಶನ್ ಬೆಲೆಯನ್ನು ಕಡಿಮೆ ಮಾಡಿದೆ ಎನ್ನುವುದು ಅಭಿಮಾನಿಗಳು ಅಭಿಪ್ರಾಯವಾಗಿದೆ.

ನಾಲ್ಕು ಹಾಡುಗಳು ಹಿಟ್ ಆಗಿಲ್ಲ
'ಒಡೆಯ' ಸಿನಿಮಾದ ನಾಲ್ಕು ಹಾಡುಗಳು ಹೊರ ಬಂದಿವೆ. ನಾಲ್ಕೂ ಹಾಡುಗಳು ದೊಡ್ಡ ಹಿಟ್ ಆಗಿಲ್ಲ. ಹಾಡುಗಳಿಗೆ ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿಲ್ಲ. ಮೊದಲು ಬಂದ ಟೈಟಲ್ ಹಾಡು 2 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಉಳಿದ ಎರಡು ಹಾಡುಗಳು 1 ಮಿಲಿಯನ್ ದಾಟಿದೆ. ನಾಲ್ಕನೇ ಹಾಡು ಬರೀ 4 ಲಕ್ಷ ಓಡಿದೆ. ದರ್ಶನ್ ಗೆ ಇರುವ ಕ್ರೇಜ್ ಗೆ, ಈ ಹಾಡುಗಳಿಗೆ ಬಂದ ಹಿಟ್ಸ್ ಕಡಿಮೆಯೇ.

ಇದು ಯಾರ ತಪ್ಪು?
'ಒಡೆಯ' ಸಿನಿಮಾದ ಹಾಡುಗಳು ಚೆನ್ನಾಗಿಲ್ಲ. ಆದರೆ, ಹಾಗೆಂದ ಕೂಡಲೇ ಅದು ಅರ್ಜುನ್ ಜನ್ಯ ಒಬ್ಬರದ್ದೆ ತಪ್ಪು ಎಂದು ಹೇಳಲು ಆಗುವುದಿಲ್ಲ. ಹಾಡುಗಳು ಮೇಲೆ ಸಿನಿಮಾದ ನಿರ್ದೇಶಕ ಕೂಡ ಅಷ್ಟೇ ಪರಿಣಾಮ ಬೀರುತ್ತಾರೆ. ಹಾಡುಗಳ ಆಯ್ಕೆ ಅವರ ಮೇಲೆ ನಿರ್ಧಾರ ಆಗುತ್ತದೆ. ಅಲ್ಲದೆ ಚಿತ್ರತಂಡ ಸಮಯ, ಸಹಕಾರ ಎಲ್ಲವೂ ಅನ್ವಯ ಆಗುತ್ತದೆ.

ಚಕ್ರವರ್ತಿ, ತಾರಕ್ ಹಾಡುಗಳು ಸೂಪರ್
ಈ ಹಿಂದೆ ದರ್ಶನ್ ಗೆ ಅನೇಕ ಒಳ್ಳೆ ಒಳ್ಳೆಯ ಹಾಡುಗಳನ್ನು ಅರ್ಜುನ್ ಜನ್ಯ ನೀಡಿದ್ದಾರೆ. 'ಚಕ್ರವರ್ತಿ' ಹಾಗೂ 'ತಾರಕ್'ನಲ್ಲಿ ಒಳ್ಳೆಯ ಹಾಡುಗಳು ಇವೆ. 'ಒಂದು ಮಳೆ ಬಿಲ್ಲು..', 'ಮತ್ತೆ ಮಳೆಯಾಗಿದೆ..' ಹಾಡುಗಳು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿವೆ. ತಾರಕ್' ನಲ್ಲಿಯೂ ಹೊಸ ಶೈಲಿಯ ಹಾಡುಗಳನ್ನು ಅರ್ಜುನ್ ನೀಡಿದ್ದರು.

'ರಾಬರ್ಟ್'ನಲ್ಲಿ ಇರುತ್ತದೆ ಅರ್ಜುನ್ ಹಾಡುಗಳು
ದರ್ಶನ್ ಮುಂದಿನ ಸಿನಿಮಾ 'ರಾಬರ್ಟ್'ನಲ್ಲಿ ಅರ್ಜುನ್ ಜನ್ಯ ಹಾಡುಗಳೆ ಇರುತ್ತದೆ. ಹರಿಕೃಷ್ಣ ಹಿನ್ನಲೆ ಸಂಗೀತ ಹಾಗೂ ಅರ್ಜುನ್ ಜನ್ಯ ಹಾಡುಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅರ್ಜುನ್ ಜನ್ಯ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಶನ್ ಚೆನ್ನಾಗಿದ್ದು, ಹಾಡುಗಳ ಮೇಲೆ ಕುತೂಹಲ ಇದೆ.


Click it and Unblock the Notifications











