'ಅಪ್ಪು' ಸಿನಿಮಾ ಸಿಗಲಿಲ್ಲ ಅಂತ ಪ್ರಸನ್ನ ಥಿಯೇಟರ್‌ನಲ್ಲಿ 'ಕರಿಯ' ಹಾಕಿದ್ರಾ? ಏನಂತಾರೆ ಮಾಲೀಕರು?
ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಅನ್ನೋದು ಹೊಸದೇನು ಅಲ್ಲ. ಆದರೆ, ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಇದು ತಾರಕ್ಕೇರಿದೆ. ಪುನೀತ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ಇಬ್ಬರ ಸಿನಿಮಾಗಳು ರಿಲೀಸ್ ಆದಾಗಲೆಲ್ಲ ಇಂತಹ ಸಮಸ್ಯೆ ಎದುರಾಗುತ್ತಲೇ ಇರುತ್ತೆ. ಈಗ 'ಅಪ್ಪು' ಸಿನಿಮಾ ಎದುರು 'ಕರಿಯ' ಹಾಕಿದ್ದರೆ ದರ್ಶನ್ ಅಭಿಮಾನಿಗಳೇ ಬೇಸರ ಹೊರ ಹಾಕಿದ್ದಾರೆ.
ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಅಪ್ಪು' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅದರಲ್ಲೂ ಬೆಂಗಳೂರಿನ ವಿಜಯನಗರ ಏರಿಯಾದಲ್ಲಿ ವೀರೇಶ್ ಚಿತ್ರಮಂದಿರಲ್ಲಿ 'ಅಪ್ಪು' ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ಈ ಚಿತ್ರಮಂದಿರದ ಸಮೀಪದಲ್ಲಿರುವ ಪ್ರಸನ್ನದಲ್ಲಿ ದಿಢೀರನೇ 'ಕರಿಯ' ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳೇ ಬೇಸರ ಹೊರಹಾಕಿದ್ದಾರೆ.

ನಿನ್ನೆಯಿಂದಲೇ (ಮಾರ್ಚ್ 13) 'ಅಪ್ಪು' ಸಿನಿಮಾ ಎದುರು 'ಕರಿಯ' ಹಾಕಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಲಾಗುತ್ತಿತ್ತು. ಹೀಗಾಗಿ ದರ್ಶನ್ ಅಭಿಮಾನಿಗಳು ಪ್ರಸನ್ನ ಚಿತ್ರಮಂದಿರದ ಮಾಲೀಕರ ಮುಂದೆ ಅಸಮಧಾನ ಹೊರಹಾಕಿದ್ದರು. ಈ ವೇಳೆ ಪೊಲೀಸರು ಚಿತ್ರಮಂದಿರದ ಮಾಲೀಕರು ಹಾಗೂ ಅಭಿಮಾನಿಗಳ ಮಧ್ಯೆ ಸಂಧಾನ ಮಾಡಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಈ ವೇಳೆ ದರ್ಶನ್ ಫ್ಯಾನ್ಸ್ ಹಾಗೂ ಪ್ರಸನ್ನ ಥಿಯೇಟರ್ ಮಾಲೀಕರ ಮಧ್ಯೆ ವಾದ-ಪ್ರತಿವಾದಗಳು ನಡೆದವು.
ಪ್ರಸನ್ನ ಥಿಯೇಟರ್ ಹತ್ತಿ ಅಹಿತಕರ ಘಟನೆಗಳು ನಡೆಯಬಾರದಯ ಅಂತ ದರ್ಶನ್ ಅಭಿಮಾನಿಗಳನ್ನು ಥಿಯೇಟರ್ ಮಾಲೀಕ ವಿನಯ್ ಬಳಿ ಪೊಲೀಸರೇ ಕರೆದುಕೊಂಡು ಬಂದಿದ್ದರು. ಮೊದಲೇ ಫ್ಯಾನ್ಸ್ ವಾರ್ ನಡೆಯುತ್ತಿದೆ. 'ಅಪ್ಪು' ಸಿನಿಮಾ ರಿಲೀಸ್ ಆದಾಗಲೇ 'ಕರಿಯ' ಯಾಕೆ ರಿಲೀಸ್ ಮಾಡಿದ್ರಿ ಅನ್ನೋದು ದರ್ಶನ್ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಫ್ಯಾನ್ಸ್ ವಾರ್ ನಡೆಯುತ್ತಿರುವ ಈ ಸಮಯದಲ್ಲಿ ಬೇಡವಾಗಿತ್ತು ಅನ್ನೋದು ದರ್ಶನ್ ಫ್ಯಾನ್ಸ್ ವಾದ.
ಆದರೆ, ಪ್ರಸನ್ನ ಥಿಯೇಟರ್ ಮಾಲೀಕ ವಿನಯ್ ಪೊಲೀಸರು ಹಾಗೂ ಅಭಿಮಾನಿಗಳ ಜೊತೆ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. "ನಾವು ರಾಜಕುಮಾರ್ ಟ್ರೈ ಮಾಡಿದ್ವಿ. ಅದು ಕ್ಲ್ಯಾಶ್ ಆಗುತ್ತೆ. ಹೀಗಾಗಿ ಯಾರೂ ಆ ಸಿನಿಮಾವನ್ನು ಕೊಡುವುದಿಲ್ಲ. ಅವೆಲ್ಲವೂ ಒಂದೇ ಬ್ಯಾನರ್‌ಗಳೇ. ನಾವು ಸಿನಿಮಾವನ್ನು ಟೆಕ್ನಿಕಲ್ ಆಗಿ ಕೇಳುವುದು, ಮಾಡುವುದು ಆಗುವುದಿಲ್ಲ. ಸಿನಿಮಾ ಇಲ್ಲದೆ ಇರುವುದರಿಂದ ಕನ್ನಡ ಸಿನಿಮಾವನ್ನೇ ಹಾಕಬೇಕು ಅಂತ ರಿಲೀಸ್ ಮಾಡಿದ್ದೇವೆ" ಎಂದು ಅಭಿಮಾನಿಗಳಿಗೆ ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದ್ದಾರೆ.

ಇತ್ತ ಪೊಲೀಸರು ಕೂಡ ಅಭಿಮಾನಿಗಳ ವಾದವನ್ನು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದರು. ಅದಕ್ಕೆ ಪ್ರಸನ್ನ ಥಿಯೇಟರ್‌ನ ಮಾಲೀಕರು ಸಿನಿಮಾ ಇಲ್ಲ. ಸಿಬ್ಬಂದಿಗಳಿಗೆ ಸಂಬಳ ಕೊಡಬೇಕು. ಆ ಕಾರಣಕ್ಕೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ನಟನ ಸಿನಿಮಾವನ್ನು ಹಾಕಿದ್ದೇನೆ ಎಂದಿದ್ದಾರೆ.
"ಈ ವಾರ ಹಾಗೂ ಮುಂದಿನ ವಾರ ಸಿನಿಮಾಗಳಿಲ್ಲ. ಆ ದಿನವೇ ನಾನು ನಿರ್ಮಾಪಕರಿಗೆ ಮಾತು ಕೊಟ್ಟಿದ್ದೆ. ಹಾಗಾಗಿ ಹಾಕಿದ್ದೀನಿ. ಇದು ರಿ-ರಿಲೀಸ್ ಅಲ್ಲ. ತುಂಬಾ ಸಲ ಹಾಕಿದ್ದೇವೆ. ದರ್ಶನ್ ಅವರು ಕೂಡ ಚಿತ್ರರಂಗದ ಒಂದು ಭಾಗ. ಪುನೀತ್ ಸರ್ ಕೂಡ ಇಂಡಸ್ಟ್ರಿಯವರೇ. ನನಗೆ ಯಾವುದೂ ಸಿನಿಮಾ ಇರಲಿಲ್ಲ. ಕನ್ನಡ ಸಿನಿಮಾವನ್ನೇ ಹಾಕೋಣ ಅಂತಾನೇ ಈ ಸಿನಿಮಾ ಹಾಕಿದ್ದೇನೆ." ಎಂದು ಹೇಳಿದ್ದಾರೆ.
ಇನ್ನು 'ಅಪ್ಪು' ಸಿನಿಮಾ ಪ್ರಸನ್ನ ಚಿತ್ರಮಂದಿರದಲ್ಲೂ ಹಾಕುತ್ತೇವೆ ಅಂತ ಮೊದಲೇ ಕೇಳಿದ್ದು, ವೀರೇಶ್ ಚಿತ್ರಮಂದಿರದವರೂ ಆ ಸಿನಿಮಾ ಹಾಕಿದ್ದರಿಂದ ಕೈ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. "ನಾವು ಮೊದಲು ಅಪ್ಪು ಸಿನಿಮಾ ಕೇಳಿದ್ವಿ. ಅವರು ವೀರೇಶ್ ಅವರು ಹಾಕಿದ್ದಾರೆ. ಅವರೂ ನಮ್ಮವರೇನೆ ತಪ್ಪೇನಿಲ್ಲ. ಈ ವಾರ ಯಾವುದೇ ಸಿನಿಮಾ ಇಲ್ಲ. ಅದಕ್ಕೆ ನಾನು ಕನ್ನಡ ಸಿನಿಮಾ ಹಾಕಬೇಕು ಅಂತ ಹಾಕಿದ್ದೇನೆ. ಯಾವುದೇ ಸಿನಿಮಾ ಇಲ್ಲದೆ ಇರುವುದರಿಂದ ಸಿನಿಮಾ ಬೇಕು ಅಂತ ಡಿಸ್ಟ್ರಿಬ್ಯೂಟರ್ ಅನ್ನು ಕೇಳಿದ್ವಿ. ಅವರು ಕೊಟ್ಟರು. ಸಿನಿಮಾ ಹಾಕಿದ್ದೇವೆ. ಇದರಲ್ಲಿ ತಪ್ಪೇನಿದೆ?" ಎಂದು ಪ್ರಸನ್ನ ಚಿತ್ರಮಂದಿರದ ಮಾಲೀಕ ಪ್ರಶ್ನೆ ಮಾಡಿದ್ದಾರೆ.
ಒಂದು ತಿಂಗಳಿಗೆ ಥಿಯೇಟರ್ ಖರ್ಚು 4 ಲಕ್ಷ ರೂ. ಬೇಕು. ಇನ್ನೂ ಸಿಬ್ಬಂದಿಗಳಿಗೆ ಸಂಬಳ ಆಗಿಲ್ಲ. ಈ ಕಾರಣಕ್ಕೆ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಸಿನಿಮಾವನ್ನು ಹಾಕಲಾಗಿದೆ ಎನ್ನು ಥಿಯೇಟರ್ ಮಾಲೀಕರ ವಾದ. ಆದರೆ, ಇದೇ ಸಮಯಕ್ಕೆ 'ಕರಿಯ' ಹಾಕಬಾರದಿತ್ತು. ಇದು ಫ್ಯಾನ್ಸ್ ವಾರ್‌ಗೆ ಎಡೆ ಮಾಡಿಕೊಡುತ್ತೆ ಅನ್ನೋದು ದರ್ಶನ್ ಫ್ಯಾನ್ಸ್ ವಾದ.
"ಅಪ್ಪು ಸಿನಿಮಾಗೂ ಕರಿಯಾಗೂ ಹೋಲಿಕೆ ಮಾಡುವ ಹಾಗಿಲ್ಲ. ಕರಿಯ ಸಿನಿಮಾ ಈಗಾಗಲೇ ಬಂದು ಹೋಗಿದೆ. ನಮ್ಮ ಥಿಯೇಟರ್‌ಗೆ ಕನ್ನಡ ಸಿನಿಮಾ ಬೇಕು ಅಂತ ಹಾಕಿರೋದು. ಅಪ್ಪು ರಿ ರಿಲೀಸ್ ಫಸ್ಟ್ ಟೈಮ್ ರಿಲೀಸ್ ಆಗ್ತಿರೋದು. ಅದಕ್ಕೆ ಅಲ್ಲಿ ಕ್ರೇಜ್ ಬೇರೆ ತರ ಇದೆ. ಮೊದಲು ಇಲ್ಲಿ ರಿಲೀಸ್ ಆದಾಗ ಕ್ರೇಜ್ ಚೆನ್ನಾಗಿಯೇ ಇತ್ತು. 'ಕರಿಯ' ಸಿನಿಮಾ ಮೊದಲ ಹಾಕಿದಾಗ ಸಮಸ್ಯೆ ಆಯ್ತು. ಒಂದೇ ವಾರಕ್ಕೆ ಸಿನಿಮಾ ತೆಗೆದೆ. ಅದಕ್ಕೆ ಈಗ ಹಾಕಿದ್ದೇವೆ" ಎಂದು ಪ್ರಸನ್ನ ಚಿತ್ರದ ಮಾಲೀಕರಾದ ವಿನಯ್ ಹೇಳಿದ್ದಾರೆ.
ಪ್ರಸನ್ನ ಚಿತ್ರಮಂದಿರ ಹಾಗೂ ವೀರೇಶ್ ಚಿತ್ರಮಂದಿರ ಎರಡೂ ಕೂಡ ಅಕ್ಕಪಕ್ಕದಲ್ಲಿಯೇ ಇವೆ. ಒಂದೇ ಸಿನಿಮಾವನ್ನು ಇಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. ಹಾಗಂತ ರಿಲೀಸ್ ಆಗಿಲ್ಲ ಅಂತಲ್ಲ. ಎರಡು ಥಿಯೇಟರ್‌ಗಳು ಕೆಲವೇ ಮೀಟರ್‌ಗಳ ಅಂತರದಲ್ಲಿ ಇರುವುದರಿಂದ ಯಾರಿಗೂ ಕಲೆಕ್ಷನ್ ಚೆನ್ನಾಗಿ ಆಗುವುದಿಲ್ಲ. ಹೀಗಾಗಿ ನಿರ್ಮಾಪಕರೇ ವೀರೇಶ್ ಥಿಯೇಟರ್‌ಗೆ ಸಿನಿಮಾ ಕೊಟ್ಟರೆ. ಪ್ರಸನ್ನಗೆ ಕೊಡುತ್ತಿರಲಿಲ್ಲ. ಪ್ರಸನ್ನ ಥಿಯೇಟರ್‌ನಲ್ಲಿ ರಿಲೀಸ್ ಮಾಡಿದರೆ, ವೀರೇಶ್‌ನಲ್ಲಿ ಮಾಡುತ್ತಿರಲಿಲ್ಲ.
ಈಗ ಆಗಿದ್ದು ಕೂಡ ಅದೇನೆ. ವೀರೇಶ್ ಚಿತ್ರಮಂದಿರದಲ್ಲಿ 'ಅಪ್ಪು' ಸಿನಿಮಾ ರಿಲೀಸ್ ಮಾಡಲಾಗಿದೆ. ಹೀಗಾಗಿ ಪ್ರಸನ್ನ ಈ ಬಾರಿ ಪುನೀತ್ ಸಿನಿಮಾವನ್ನು ಮಿಸ್ ಮಾಡಿಕೊಂಡಿತ್ತು. ಅದೇ ಕಳೆದ ವರ್ಷ 'ಜಾಕಿ' ಸಿನಿಮಾವನ್ನು ಪ್ರಸನ್ನ ಚಿತ್ರಮಂದಿರದಲ್ಲಿ ರಿ ರಿಲೀಸ್ ಮಾಡಲಾಗಿತ್ತು. ಆಗ ವೀರೇಶ್ ಥಿಯೇಟರ್‌ನಲ್ಲಿ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಈ ಎರಡು ಚಿತ್ರಮಂದಿರಗಳ ನಡುವೆ ಪೈಪೋಟಿ ಅಂತೂ ಇದ್ದೇ ಇದೆ.
ಈಗ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಲೇ ಇರುತ್ತಾರೆ. ಈಗ 'ಅಪ್ಪು' ಎದುರು 'ಕರಿಯ' ಸಿನಿಮಾವನ್ನು ಬೇಕಂತಲೇ ರಿಲೀಸ್ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೆಸರಿಗೆ ಕಳಂಕ ಬರುತ್ತೆ. ಈ ವಾರ ಬಿಟ್ಟು ಮುಂದಿನ ವಾರ ರಿಲೀಸ್ ಮಾಡಬಹುದಿತ್ತು ಅಂತ ಬೇಸರ ಹೊರ ಹಾಕಿದ್ದಾರೆ. ಆದರೆ, ಪ್ರಸನ್ನ ಚಿತ್ರಮಂದಿರದ ಮಾಲೀಕರು ತಮ್ಮದೇ ಕಾರಣಗಳನ್ನು ನೀಡುತ್ತಿದ್ದಾರೆ. ಕೊನೆಗೂ ನಿನ್ನೆಯಿಂದ ಇಬ್ಬರ ಅಭಿಮಾನಿಗಳು ಮತ್ತೆ ಪರಸ್ಪರ ವಾದ ವಿವಾದಕ್ಕೆ ಇಳಿದಿದ್ದಾರೆ.
ಸದ್ಯ 'ಅಪ್ಪು' ಇದೇ ಮೊದಲ ಬಾರಿಗೆ ರಿ ರಿಲೀಸ್ ಆಗುತ್ತಿರುವುದರಿಂದ ಒತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪುನೀತ್ 50ನೇ ಹುಟ್ಟುಹಬ್ಬ ಈ ಸಂಭ್ರಮದಲ್ಲಿ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ಕೂಡ ಆಸಕ್ತಿ ತೋರುತ್ತಿದ್ದಾರೆ.


Click it and Unblock the Notifications











