Darshan: ಬೆಳಗ್ಗೆ ಕಾವೇರಿ ಹೋರಾಟ ಪ್ರತಿಭಟನೆ: ಸಂಜೆ ಚಾಲೆಂಜಿಂಗ್ ಸ್ಟಾರ್ ಹೊರಟಿದ್ದೆಲ್ಲಿಗೆ?
ಕಾವೇರಿ ಹೋರಾಟ ಸಂಬಂಧ ತಮ್ಮ ಖಡಕ್ ಮಾತುಗಳಿಂದ ಇತ್ತೀಚೆಗೆ ನಟ ದರ್ಶನ್ ಸುದ್ದಿ ಆಗಿದ್ದರು. ಇನ್ನು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರೆಕೊಟ್ಟಿದ್ದ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಸಾಥ್ ಕೊಟ್ಟಿತ್ತು. ಚಿತ್ರರಂಗದ ಕಲಾವಿದರು ನಡೆಸಿದ ಕಾವೇರಿ ಪ್ರತಿಭಟನೆಯಲ್ಲಿ ನಟ ದರ್ಶನ್ ಸಹ ಭಾಗಿ ಆಗಿದ್ದರು.
ಫಿಲ್ಮ್ ಚೇಂಬರ್ ಕಚೇರಿ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದ ಬಳಿ ವೇದಿಕೆ ಸಿದ್ಧವಾಗಿತ್ತು. ಯಶ್, ಸುದೀಪ್ ಬಿಟ್ಟು ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲಾ ಈ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು. ವೇದಿಕೆಯಲ್ಲಿ ಕೆಲವೊತ್ತು ಇದ್ದ ಚಾಲೆಂಜಿಂಗ್ ಸ್ಟಾರ್ "ದೊಡ್ಡವರು ಶಿವಣ್ಣ ಇದ್ದಾರೆ. ಅವರು ಮಾತನಾಡುತ್ತಾರೆ. ನಾನು ಮಾತನಾಡಿದ್ದು ಆಗಿದೆ" ಎಂದರು. ಶಿವಣ್ಣ- ದರ್ಶನ್ ಆಗಮನದಿಂದ ಹೋರಾಟಕ್ಕೆ ಆನೆ ಬಲ ಬಂದಂತಾಗಿತ್ತು.

ಬೆಳಗ್ಗೆ ಕಾವೇರಿ ಹೋರಾಟದ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದ ದರ್ಶನ್, ಸಂಜೆ ವಿಮಾನ ಏರಿದ್ದರು. ವಿಮಾನದಲ್ಲಿ 'ಕಾಟೇರ' ಚಿತ್ರದ ನಾಯಕಿ ಆರಾಧನಾ ಹಾಗೂ ತಾಯಿ ಹಿರಿಯ ನಟಿ ಮಾಲಾಶ್ರೀ ಜೊತೆ ದರ್ಶನ್ ಕ್ಲಿಕ್ಕಿಸಿಕೊಂಡ ಫೋಟೊ ವೈರಲ್ ಆಗ್ತಿದೆ. 'ಕಾಟೇರ' ಸಿನಿಮಾ ಸಾಂಗ್ ಶೂಟಿಂಗ್‌ಗಾಗಿ ಚಿತ್ರತಂಡ ಪ್ರಯಾಣ ಬೆಳೆಸಿರುವುದು ಗೊತ್ತಾಗ್ತಿದೆ. ದರ್ಶನ್ ಕೈಗೆ ಪಟ್ಟಿ ಸುತ್ತಿಕೊಂಡಿದ್ದು ಏನಾಯ್ತು? ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಕಾವೇರಿ ಪ್ರತಿಭಟನೆ ವೇದಿಕೆಗೆ ಬಂದಾಗ ಶಿವಣ್ಣ ಕೂಡ ದರ್ಶನ್ ಕೈ ಪಟ್ಟಿ ಬಗ್ಗೆ ವಿಚಾರಿಸಿದ್ದರು.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಹಾಡುಗಳು ಹೊರತು ಪಡಿಸಿ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಪೀರಿಯಡ್ ಆಕ್ಷನ್ ಎಂಟರ್‌ಟೈನರ್ 'ಕಾಟೇರ' ಅಭಿಮಾನಿಗಳು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿವೀಲ್ ಆಗಿ ಗಮನ ಸೆಳೆದಿದೆ. ಮುಂದಿನ ವರ್ಷಾರಂಭದಲ್ಲಿ 'ಕಾಟೇರ' ತೆರೆಮೇಲೆ ಅಬ್ಬರಿಸುವ ಸುಳಿವು ಸಿಗುತ್ತಿದೆ.
ದಸರಾ ಸಂಭ್ರಮದಲ್ಲಿ 'ಕಾಟೇರ' ಸಿನಿಮಾ ತೆರೆಗೆ ತರಲು ಪ್ರಯತ್ನಿಸುತ್ತಿರುವುದಾಗಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದರು. ಆದರೆ ಶೂಟಿಂಗ್ ತಡವಾಗುತ್ತಿದ್ದು ಅದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈ ವರ್ಷಾಂತ್ಯಕ್ಕೂ ಸಿನಿಮಾ ತೆರೆಗೆ ಬರುವ ಅನುಮಾನ ಇದ್ದು ಮುಂದಿವ ವರ್ಷವೇ ತೆರೆಮೇಲೆ 'ಕಾಟೇರ'ನ ಆರ್ಭಟ ಶುರುವಾಗಲಿದೆ. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಾಲಾಶ್ರೀ ಮಗಳ ಜೊತೆಗೆ ಶೂಟಿಂಗ್ ಸೆಟ್‌ಗೆ ಹೋಗುತ್ತಾರೆ. ಇದೀಗ 'ಕಾಟೇರ' ಸಾಂಗ್ ಶೂಟಿಂಗ್‌ಗೆ ಕೂಡ ಚಿತ್ರತಂಡದ ಜೊತೆ ಹೊರಟ್ಟಿದ್ದಾರೆ.

'ಕಾಟೇರ' ಚಿತ್ರಕ್ಕೆ ವಿ, ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ದರ್ಶನ್ ಹಾಗೂ ಹರಿ ಕಾಂಬಿನೇಷನ್ ಆಲ್ಬಮ್‌ಗಳೆಲ್ಲಾ ಹಿಟ್ ಆಗಿವೆ. ಹಾಗಾಗಿ 'ಕಾಟೇರ' ಸಾಂಗ್ಸ್ ಬಗ್ಗೆ ಕೂಡ ಭಾರೀ ನಿರೀಕ್ಷೆಯಿದೆ. ಇನ್ನುಳಿದಂತೆ ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ನಿರ್ದೇಶಕ ಜಡೇಶ್ ಕುಮಾರ್ ಜೊತೆ ಸೇರಿ ತರುಣ್ ಸುಧೀರ್ ಕತೆ ಚಿತ್ರಕತೆ ಸಿದ್ಧಪಡಿಸಿದ್ದಾರೆ. ದರ್ಶನ್ ಲುಂಗಿ ಉಟ್ಟು ಹಳ್ಳಿಹೈದನಾಗಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಶ್ರುತಿ, ಕುಮಾರ್ ಗೋವಿಂದ್, ವಿನೋದ್ ಆಳ್ವ, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ 'ಕಾಟೇರ' ಚಿತ್ರದಲ್ಲಿದೆ. 70ರ ದಶಕದ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ಅದಕ್ಕಾಗಿ 50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸುತ್ತಿದೆ. ಹಳೇ ಕಾಲದ ಕಟ್ಟಡಗಳು ಸೇರಿದಂತೆ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನು ಕನಕಪುರ ರಸ್ತೆ ಬಳಿ ಒಂದು ದೊಡ್ಡ ಹಳ್ಳಿ ಸೆಟ್ ಹಾಕಿ ಮುಖ್ಯ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ಒಟ್ನಲ್ಲಿ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ.


Click it and Unblock the Notifications











