Darshan: ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ದರ್ಶನ್ ದಿಢೀರ್ ಯುಕೆ ಫ್ಲೈಟ್ ಏರಿದ್ದೇಕೆ?
ಈ ವರ್ಷದ ಆರಂಭದಲ್ಲೇ 'ಕ್ರಾಂತಿ' ರಾಯಣ್ಣ ಆಗಿ ಪ್ರೇಕ್ಷಕರನ್ನು ರಂಜಿಸಿದ್ದ ದರ್ಶನ್ ಈಗ 'ಕಾಟೇರ'ನ ಅವತಾರ ತಾಳಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ನಡೆದಿತ್ತು. ಇದರ ಬೆನ್ನಲ್ಲೇ ದರ್ಶನ್ ಕಾಲಿಗೆ ಪೆಟ್ಟಾಗಿತ್ತು. ಅದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಪಡೆದಿದ್ದರು.
'ರಾಬರ್ಟ್' ಸಿನಿಮಾ ಬಳಿಕ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ 'ಕಾಟೇರ' ಸಿನಿಮಾ ಮೂಡಿ ಬರ್ತಿದೆ. ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಒಂದೊಳ್ಳೆ ತಂಡ ಕಟ್ಟಿಕೊಂಡು ಈ ಪೀರಿಯಡ್ ಡ್ರಾಮಾ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ಜಾರಿಗೆ ಬಂದ ಸಮಯದಲ್ಲಿ ಹಳ್ಳಿಗಳಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ 'ಕಾಟೇರ' ಸಿನಿಮಾ ಮೂಡಿ ಬರುತ್ತಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.

ಇನ್ನು 'ಕಾಟೇರ' ಚಿತ್ರಕ್ಕೂ ಮುನ್ನ ದರ್ಶನ್ 'ಗರಡಿ' ಚಿತ್ರದ ವಿಶೇಷ ಪಾತ್ರದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಬಿ. ಸಿ ಪಾಟೀಲ್ ನಿರ್ಮಾಣದ ಈ ಚಿತ್ರದಲ್ಲಿ ಯಶಸ್ ಸೂರ್ಯ ಹೀರೊ ಆಗಿ ಮಿಂಚಿದ್ದಾರೆ.
ಸ್ನೇಹಿತರ ಜೊತೆ UKಗೆ ಹೊರಟ ದರ್ಶನ್
ನಟ ದರ್ಶನ್ ದಿಢೀರನೇ ವಿದೇಶಕ್ಕೆ ತೆರಳಿದ್ದಾರೆ. 'ಕಾಟೇರ' ಚಿತ್ರೀಕರಣದಿಂದ ಕೊಂಚ ಬಿಡುವು ಮಾಡಿಕೊಂಡು ದರ್ಶನ್ ಯುಕೆ ಫ್ಲೈಟ್ ಏರಿದ್ದಾರೆ. ದರ್ಶನ್ ಸ್ನೇಹಿತರಾದ ಸಚ್ಚಿದಾನಂದ ಸೇರಿದಂತೆ 4 ಜನ ವಿದೇಶಕ್ಕೆ ತೆರಳಿರುವ ಫೋಟೊಗಳು ವೈರಲ್ ಆಗುತ್ತಿವೆ. ಇನ್ನು ಯುಕೆಗೆ ಹೋಗಿಳಿದ ದರ್ಶನ್ ಅಲ್ಲೂ ಸ್ನೇಹಿತನ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಆ ಫೋಟೊ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. 10 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಇಲ್ಲದ ಕಾರಣ ವಿಶ್ರಾಂತಿ ಪಡೆಯಲು ದರ್ಶನ್ ವಿದೇಶಕ್ಕೆ ಹೋಗಿರುವುದಾಗಿ ಹೇಳಲಾಗುತ್ತಿದೆ.

ದರ್ಶನ್ ಕಾಲಿಗೆ ಪೆಟ್ಟಾಗಿದ್ದು ಹೇಗೆ?
ನಾಲ್ಕೈದು ದಿನಗಳ ಹಿಂದೆ ದರ್ಶನ್ ಕಾಲಿಗೆ ಪೆಟ್ಟಾಗಿತ್ತು. ಆಸ್ಪತ್ರೆಯೊಂದಕ್ಕೆ ಕುಂಟುತ್ತಲೇ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಈ ವೇಳೆ ಅಭಿಮಾನಿಗಳನ್ನು ನೋಡಿ ಸ್ಮೈಲ್ ಮಾಡಿ ಕಾರ್ ಏರಿ ಹೊರಟ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲಿ ಆಸ್ಪತ್ರೆ ಸಿಬ್ಬಂದಿ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಪೆಟ್ಟಾದ ಮರುದಿನವೇ ದರ್ಶನ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಆದರೆ ದರ್ಶನ್ ಕಾಲಿಗೆ ಪೆಟ್ಟು ಹೇಗಾಯ್ತು? ಗಾಯದ ತೀವ್ರತೆ ಎಷ್ಟಿದೆ? ವೈದ್ಯರು ಏನಂದ್ರು? ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಶೂಟಿಂಗ್ ವೇಳೆ ಪೆಟ್ಟಾಗಿಲ್ಲ
ನಟ ದರ್ಶನ್ ಕಾಲಿಗೆ ಗಾಯವಾಗಿರುವ ವಿಚಾರದ ಬಗ್ಗೆ 'ಕಾಟೇರ' ಚಿತ್ರದ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೀತು. ಶೂಟಿಂಗ್ ವೇಳೆ ಅವರ ಕಾಲಿಗೆ ಪೆಟ್ಟಾಗಲಿಲ್ಲ. ಇನ್ನು ಎಲ್ಲರ ಡೇಟ್ಸ್ ಇತ್ತು. ಶೂಟಿಂಗ್‌ಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಪೆಟ್ಟಾಗಿದ್ದರೂ ದರ್ಶನ್ ಅವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎಂದಿದ್ದಾರೆ.
ದಸರಾಗೆ 'ಕಾಟೇರ' ರಿಲೀಸ್
ಇತ್ತೀಚೆಗೆ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್ ದಸರಾ ವೇಳೆಗೆ 'ಕಾಟೇರ' ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದರು. ನಾವು ಕೂಡ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತರುಣ್ ಸುಧೀರ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಇದೆ. ದಸರಾಗೂ ಮುನ್ನ ವರಮಹಾಲಕ್ಷ್ಮಿ ಹಬ್ಬ, ಗಣೇಶ ಹಬ್ಬಕ್ಕೂ ಸ್ಪೆಷಲ್ ಪೋಸ್ಟರ್, ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ.


Click it and Unblock the Notifications











