"ಅಪ್ಪಾ ಎದ್ದೋಳಪ್ಪ, ದರ್ಶನ್ ಅಣ್ಣ ಬಂದ್ರು ಎದ್ದೋಳಪ್ಪಾ, ಮಾತಾಡ್ಸಿಪ್ಪಾ"; ಮುಗಿಲು ಮುಟ್ಟಿದ ಆಕ್ರಂದನ
ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಚಿತ್ರರಂಗ ಹಾಗೂ ಆಪ್ತರಿಗೆ ಭಾರೀ ಆಘಾತ ತಂದಿದೆ. ನಟ ದರ್ಶನ್ ಸೇರಿದಂತೆ ಚಿತ್ರರಂಗದಲ್ಲಿ ಹಲವರೊಟ್ಟಿಗೆ ಸೌಂದರ್ಯ ಜಗದೀಶ್ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ನಿನ್ನೆ(ಏಪ್ರಿಲ್ 14) ಅವರು ನಿಧನರಾಗಿದ್ದು ಇಂದು ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮದೇ ನಿವಾಸದಲ್ಲಿ ಸೌಂದರ್ಯ ಜಗದೀಶ್ ನೇಣಿಗೆ ಶರಣಾಗಿದ್ದರು. ಬಳಿಕ ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ನಟರಾದ ದರ್ಶನ್, ಧನ್ವೀರ್, ಉಪೇಂದ್ರ, ಶ್ರೀಮುರಳಿ, ಗಣೇಶ್, ಜಗ್ಗೇಶ್, ಪ್ರೇಮ್ ಸೇರಿದಂತೆ ಹಲವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ನಟ ದರ್ಶನ್ ಭೇಟಿ ವೇಳೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್ ದುಃಖ ಕಟ್ಟೆ ಒಡೆದಿತ್ತು. "ಅಪ್ಪಾ ಎದ್ದೋಳಪ್ಪ, ದರ್ಶನ್ ಅಣ್ಣ ಬಂದ್ರು ಎದ್ದೋಳಪ್ಪಾ, ಮಾತಾಡ್ಸಿಪ್ಪಾ ಎಂದು ಸ್ನೇಹಿತ್ ಗೋಗರೆದರು. ನೋಡ್ರಿ ನಿಮ್ಮ ದರ್ಶನ್ ಬ್ರದರ್ ಬಂದಿದ್ದಾರೆ. ಫೇವರಿಟ್ ಬ್ರದರ್, ಒಂದು ವಾರ ಮಾತಾಡಿಲ್ಲ ಅಂದ್ರೆ ಆಗಲ್ಲ ಎನ್ನುತ್ತಿದ್ರಲ್ಲ ನೋಡ್ರಿ, ದಿನಾ ಅವರೊಟ್ಟಿಗೆ ಫೋನ್ ಮಾಡಿ ಮಾತನಾಡುತ್ತಿದ್ರಲ್ಲ ನೋಡಿ" ಎಂದು ಪತ್ನಿ ರೇಖಾ ಕಣ್ಣೀರಾಗಿದ್ದರು.
ಅಂತಿಮ ದರ್ಶನದ ಬಳಿಕ ಸೌಂದರ್ಯ ಜಗದೀಶ್ ಕುಟುಂಬ ಸದಸ್ಯರಿಗೆ ನಟ ದರ್ಶನ್ ಸಾಂತ್ವನ ಹೇಳಿದರು. ಇತ್ತೀಚೆಗೆ ಎಡಗೈಗೆ ಸರ್ಜರಿ ಮಾಡಿಸಿಕೊಂಡಿದ್ದ ದರ್ಶನ್ ಕೈ ನೋವಿನ ನಡುವೆಯೂ ಪರಮಾಪ್ತರಾಗಿದ್ದ ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದರು. 'ಡೆವಿಲ್' ಸಿನಿಮಾ ಚಿತ್ರೀಕರಣದ ವೇಳೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಸದ್ಯ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ನಟ ಉಪೇಂದ್ರ ಕುಟುಂಬಕ್ಕೂ ಸೌಂದರ್ಯ ಜಗದೀಶ್ ಬಹಳ ಆಪ್ತರಾಗಿದ್ದರು. ಪ್ರಿಯಾಂಕ ಉಪೇಂದ್ರ ಬಿಕ್ಕಿ ಬಿಕ್ಕಿ ಅತ್ತರು. ಇಂದು(ಏಪ್ರಿಲ್ 15) ಬೆಳಗ್ಗೆ 9 ಗಂಟೆವರೆಗೆ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ 12 ಗಂಟೆ ವೇಳೆಗೆ ಅಂತ್ಯಕ್ರಿಯೆ ವಿಧಿವಿಧಾನ ಆರಂಭಗೊಳ್ಳಲಿದೆ. ಇನ್ನು ಸೌಂದರ್ಯ ಜಗದೀಶ್ ಆತ್ಮಹತ್ಯೆ ಸಂಬಂಧ ಪತ್ನಿ ರೇಖಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ಸಾವಿನ ಬಗ್ಗೆ ಯಾವುದೇ ಶಂಕೆ ಇಲ್ಲ. ಆತ್ಮಹತ್ಯೆ ಎಂದು ದೂರು ದಾಖಲಾಗಿದೆ. ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಣಕಾಸಿನ ಸಮಸ್ಯೆ ಹಾಗೂ ಖಿನ್ನತೆಯಿಂದ ಸೌಂದರ್ಯ ಜಗದೀಶ್ ಬಳಲುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು 15 ದಿನಗಳ ಹಿಂದೆ ಅತ್ತೆ ನಿಧನರಾಗಿದ್ದರು. ಅದು ಕೂಡ ಅವರು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಇದೇ ಕಾರಣಕ್ಕೆ ಕುಟುಂಬದವರು ಜಗದೀಶ್ ಅವರ ಕೌನ್ಸಲಿಂಗ್ ಮಾಡಿಸಿದ್ದರು. ಖಿನ್ನತೆಗೆ ಔಷಧಿ ಸೇವಿಸುತ್ತಿದ್ದರು. ಕೆಲ ದಿನಗಳಿಂದ ಅವರು ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದರು. ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











