"ನಾವು ಪ್ರಕೃತಿ ನಿಯಮವಾಗಿ ಹೆಂಗ್ ಹುಟ್ಟ್‌ಬೇಕೊ ಹಂಗೆ ಹುಟ್ಟಿರೋದು ಸ್ವಾಮಿ": ಉಮಾಪತಿಗೆ ದರ್ಶನ್ ತಿರುಗೇಟು
ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯ ಚುನಾವಣೆ ಪ್ರಚಾರ ಮತ್ತಷ್ಟು ಕಾವು ಪಡೆದುಕೊಂಡಿದೆ. ಅಭ್ಯರ್ಥಿಗಳ ಆರೋಪ ಪ್ರತ್ಯಾರೋಪ, ಏಟು ಎದಿರೇಟು ಜೋರಾಗುತ್ತಿದೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ನಟ ದರ್ಶನ್ ಪ್ರಚಾರ ನಡೆಸಿದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಚಾರದ ವೇಳೆ ಉಮಾಪತಿ ಶ್ರೀನಿವಾಸ್ ಗೌಡ ಪರೋಕ್ಷವಾಗಿ ದರ್ಶನ್ ಅವರ ಬಗ್ಗೆ ನೀಡಿದ್ದ ಹೇಳಿಕೆಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ನಾನು ದರ್ಶನ್ ಅವರನ್ನು ಕರ್ಕೊಂಡು ಬಂದೆ. ಸ್ಟಾರ್ ಮಾಡ್ದೆ ಎಂದು ಹೇಳುವ ಅಧಿಕಾರ ಇರುವುದ 'ಮೆಜೆಸ್ಟಿಕ್' ಸಿನಿಮಾ ನಿರ್ಮಾಪಕರಾದ ಎಂ. ಜಿ ರಾಮಾಮೂರ್ತಿ ಅವರಿಗೆ ಮಾತ್ರ ಇರುವುದು ಎಂದು ದರ್ಶನ್ ಹೇಳಿದ್ದಾರೆ. ಉಮಾಪತಿಯವರ ಪ್ರತಿ ಮಾತಿಗೂ ದರ್ಶನ್ ತಿರುಗೇಟು ನೀಡಿದ್ದಾರೆ. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

"ಸ್ಟಾರ್‌ಗಳು ಏನು ಮೇಲಿಂದ ಉದುರುತ್ತಾರಾ? ನಿರ್ಮಾಪಕರು ಇದ್ದರೇನೇ ಸಿನಿಮಾ, ಸ್ಟಾರ್‌ಗಳು 500 ರೂಪಾಯಿ ದಾನ ಮಾಡಿದರೂ ಅದು ನಿರ್ಮಾಪಕರ ದುಡ್ಡು ಎಂದು ಹೇಳಿದ್ದಾರೆ. ಈ ಕ್ಷೇತ್ರದ ನಿರ್ಮಾಪಕರು ಅವರು. ಕಲಾವಿದರು ಯಾರೇ ಆಗಿರಲಿ ಅವರ ಬಗ್ಗೆ ಮಾತನಾಡುವ ಮುಂಚೆ ಕಲಾವಿದರು ನಾವೆಲ್ಲಾ ಒಂದೇ. ನಮ್ಮ ತಾಯಿ ಕುಂತಿ ಅಲ್ಲ ಪೂಜೆ ಮಾಡಿದ ತಕ್ಷಣ ಬರೋಕೆ. ಪ್ರಕೃತಿ ನಿಯಮವಾಗಿ ಹೆಂಗ್ ಹುಟ್ಟ್‌ಬೇಕೊ ಹಂಗೆ ಹುಟ್ಟಿರೋದು"
ಮತ್ತೊಂದು ನಿರ್ಮಾಪಕರು ಇದ್ದೇನೆ ಸ್ಟಾರ್‌ಗಳು ಅಂತೆ. ಅದು ತಪ್ಪು ಸ್ವಾಮಿ. ಹೌದು ನಿರ್ಮಾಪಕರು ಇದ್ದರೆ ಒಂದು ಸಿನಿಮಾ ಆಗುತ್ತೆ. ಆದರೆ ಸೆಲೆಬ್ರೆಟಿಗಳು, ಅಭಿಮಾನಿಗಳು, ಸಿನಿಪ್ರೇಮಿಗಳು ಇದ್ದರೆ ಮಾತ್ರ ಒಬ್ಬ ಕಲಾವಿದ ಸ್ಟಾರ್ ಆಗೋಕೆ ಸಾಧ್ಯ. ಒಬ್ಬ ಸ್ಟಾರ್ 500 ರೂಪಾಯಿ ದಾನ ಮಾಡಿದರೂ ನಿರ್ಮಾಪಕರ ದುಡ್ಡು ಎನ್ನುವುದು ತಪ್ಪು. ಏನು ಧರ್ಮಕ್ಕೆ ಕೊಡ್ತಾರಾ ನಮಗೆ. ಬೆಳಗ್ಗೆಯಿಂದ ಸಂಜೆವರೆಗೂ ಕತ್ತೆ ರೀತಿ ದುಡಿಯುತ್ತೇವೆ. ನಮ್ಮ ಕಷ್ಟ ನಮ್ಮ ಅಕ್ಕ ಪಕ್ಕ ಇರುವವರಿಗೆ ಗೊತ್ತಾಗುತ್ತೆ. ಆದರೂ ಪುನಃ ಬೆಳಗ್ಗೆ ಬಂದು ಕೆಲಸ ಮಾಡ್ತೀವಿ.
"ಮನೆಯಲ್ಲಿ ಕೂರಿಸಿ ನಮಗೆ ಹಣ ಕೊಡಲ್ಲ. ಕೆಲಸ ಮಾಡಿದರೆ ಕೂಲಿ ಕೊಡ್ತಾರೆ. ಕೂಲಿ ಕೇಳಿದ್ರೆ ತಪ್ಪಾ, ಸಿನಿಮಾ ದುಡ್ಡು ಮಾಡಿದ್ರೆ ನಮಗೆ ತಂದು ಕೊಡ್ತೀರಾ ಸ್ವಾಮಿ?" ಎಂದು ದರ್ಶನ್ ಕೇಳಿದ್ದಾರೆ. ದಯಮಾಡಿ ಒಬ್ಬ ಹೀರೊ ಬಗ್ಗೆ ಮಾತನಾಡುವ ಮುಂಚೆ ಯೋಚನೆ ಮಾಡಿ. ಅವರಿಗೆ ಒಂದು ಕಿವಿಮಾತು. ನಾನು ದರ್ಶನ್‌ನ ಕರ್ಕೊಂಡು ಬಂದೆ. ದರ್ಶನ್‌ನ ಸ್ಟಾರ್ ಮಾಡ್ದೆ ಎಂದು ಹೇಳುವ ಅಧಿಕಾರ, ಅರ್ಹತೆ, ಯೋಗ್ಯತೆ ಇರುವುದು ಮೆಜೆಸ್ಟಿಕ್ ಸಿನಿಮಾ ನಿರ್ಮಾಪಕ ಎಂ. ಜಿ ರಾಮಮೂರ್ತಿ ಅವರಿಗೆ ಮಾತ್ರ ಇರೋದು. ಇನ್ಯಾರಿಗೂ ನಾನು ಆ ಯೋಗ್ಯತೆ ಕೊಟ್ಟಿಲ್ಲ.

"ನಾನೇನು ನಿಮ್ಮ ಮನೆ ಬಾಗಿಲ ಬಳಿ ಬಂದು ದಯವಿಟ್ಟು ಸಿನಿಮಾ ಮಾಡಿ ಎಂದು ಕೇಳಿಲ್ಲ. ನೀವು ಸ್ಟಾರ್ ಮನೆಗೆ ಸಿನಿಮಾ ಮಾಡೋಣ ಅಂತ ಬಂದಿದ್ದು" ಎಂದು ಉಮಾಪತಿಗೆ ಟಾಂಗ್ ಕೊಟ್ಟಿದ್ಧಾರೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ರಾಬರ್ಟ್' ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ತರುಣ್ ಸುಧೀರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 2 ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿತ್ತು. 25 ಕೋಟಿ ಫೇಕ್ ಲೋನ್ ಕಿರಿಕ್‌ನಲ್ಲಿ ದರ್ಶನ್ ಹಾಗೂ ಉಮಾಪತಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಇಬ್ಬರು ದೂರಾಗಿದ್ದರು.
ದರ್ಶನ್ ಎರಡನೇ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸತೀಶ್ ರೆಡ್ಡಿ ಪರ ಪ್ರಚಾರ ನಡೆಸಿದ್ದಾರೆ. ತಮ್ಮ ಆಪ್ತ ಅಭ್ಯರ್ಥಿಗೆ ಉಮಾಪತಿ ಎದುರಾಳಿ ಆಗಿರುವುದರಿಂದ ದರ್ಶನ್ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಕಳೆದ ವಾರ ಬೇಗೂರು ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದ ದರ್ಶನ್ ಇದೀಗ ದೇವರಚಿಕ್ಕನಹಳ್ಳಿ ಸುತ್ತಾಮುತ್ತಾ ರ್ಯಾಲಿ ನಡೆಸಿ ಮತಬೇಟೆ ನಡೆಸಿದರು.


Click it and Unblock the Notifications











