ದರ್ಶನ್ ಜೈಲು ಸೇರಿದ ಬಳಿಕ ಮೊದಲ ಬಾರಿ ಮೌನ ಮುರಿದ ಪತ್ನಿ ವಿಜಯಲಕ್ಷ್ಮಿ
ನಟ ದರ್ಶನ್ ಅಭಿಮಾನಿಗಳು ಕುಗ್ಗಿ ಹೋಗಿದ್ದಾರೆ. ನೆಚ್ಚಿನ ನಟ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವುದು ಬೇಸರ ತಂದಿದೆ. ಇದೀಗ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಈ ವೇಳೆ ಪುತ್ರ ವಿನೀಶ್ ಕೂಡ ಜೊತೆಗಿದ್ದ. ಬಳಿಕ ವಿನೋದ್ ಪ್ರಭಾಕರ್ ಕೂಡ ದರ್ಶನ್ ಭೇಟಿ ಮಾಡಿದ್ದರು.

ನಮ್ಮ ಎಲ್ಲಾ ಸೆಲೆಬ್ರಿಟಿಗಳಿಗೆ ಕರೆ
"ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ "ಸೆಲೆಬ್ರಿಟಿಗಳನ್ನು" ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ"
"ಇದೊಂದು ಪರೀಕ್ಷೆಯ ಸಮಯ. ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ"
"ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ" ಎಂದು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











