ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ
Recommended Video

ಇಂಡಸ್ಟ್ರಿಯಲ್ಲಿ ಒಂದು ಟಾಕ್ ಇದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಅದೇ ಸ್ವಭಾವವನ್ನ ಹೊಂದಿರುವ ನಟ ದರ್ಶನ್. ಅಂಬರೀಶ್ ಸೀನಿಯರ್ ಆದ್ರೆ, ದರ್ಶನ್ ಜೂನಿಯರ್. ಅದಕ್ಕೆ 'ಬುಲ್ ಬುಲ್' ಸಿನಿಮಾದಲ್ಲಿ ಮೂಡಿಬಂದಿದ್ದ 'ಸೀನಿಯರ್......ಜೂನಿಯರ್...' ಎಂಬ ಹಾಡು ಸಾಕ್ಷಿ.
ಇಂಡಸ್ಟ್ರಿಯಲ್ಲಿರುವ ಕೆಲವರು ಹೇಳುವ ಪ್ರಕಾರ, ಅಂಬರೀಶ್ ಅವರನ್ನ ದರ್ಶನ್ ತಂದೆಯಂತೆ ಕಾಣುತ್ತಿದ್ದರು. ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರು ಎನ್ನುತ್ತಾರೆ. ಇದನ್ನ ಸ್ವತಃ ದರ್ಶನ್ ಕೂಡ ಹಲವು ಹೇಳಿಕೊಂಡಿದ್ದಾರೆ. 'ಅಂಬಿ ಅಪ್ಪಾಜಿ ನಮಗೆ ತಂದೆಯಂತೆ' ಎಂದು ಉನ್ನತ ಸ್ಥಾನ ನೀಡಿದ್ದರು ದರ್ಶನ್.
ಅಂಬಿ ಮತ್ತು ದರ್ಶನ್ ಅವರ ಸಂಬಂಧ ಎಂತಹದ್ದು ಎಂದು ಮೊನ್ನೆ ಅಂತ್ಯಕ್ರಿಯೆಯಲ್ಲೂ ಸಾಬೀತಾಯಿತು. ಅಂಬಿ ಅಂತ್ಯಸಂಸ್ಕಾರದ ವಿಧಿವಿಧಾನ ಕಾರ್ಯಗಳಲ್ಲಿ ಅಂಬಿಪುತ್ರ ಅಭಿಷೇಕ್ ಜೊತೆಯಲ್ಲಿ ಅಣ್ಣನಂತೆ ನಿಂತಿದ್ದರು. ಇದೀಗ, ಅಂಬಿಯ ಆಪ್ತ ಶ್ರೀನಿವಾಸ್ ಅವರು ದರ್ಶನ್ ಮತ್ತು ಅಂಬಿಯ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

ದರ್ಶನ್ ಹೆಚ್ಚು ಮನೆಗೆ ಬರ್ತಿದ್ರು
'ಅಂಬರೀಶ್ ಅವರನ್ನ ನೋಡಲು ಹೆಚ್ಚು ಬಾರಿ ಮನೆಗೆ ಬರುತ್ತಿದ್ದವರಲ್ಲಿ ದರ್ಶನ್ ಪ್ರಮುಖರು. ಅವರನ್ನ ಬಿಟ್ಟರೇ ರಾಕ್ ಲೈನ್ ವೆಂಕಟೇಶ್. ಮೋಹನ್ ಬಾಬು ಬೆಂಗಳೂರಿಗೆ ಬಂದಾಗೆಲ್ಲಾ ಮನೆಗೆ ಬರ್ತಿದ್ದರು. ರಜನಿಕಾಂತ್, ಚಿರಂಜೀವಿ ಎಲ್ಲರು ಬರುತ್ತಿದ್ದರು. ದರ್ಶನ್ ಅವರಂತೂ ಟೈಂ ಸಿಕ್ಕಾಗೆಲ್ಲಾ ಬಂದು ಹೋಗುತ್ತಿದ್ದರು' ಎಂದು ಸೀನಣ್ಣ ಹೇಳಿಕೊಂಡಿದ್ದಾರೆ.

ದರ್ಶನ್ ಇನ್ನೊಬ್ಬ ಮಗ
ದರ್ಶನ್ ಅವರ ಮನೆಗೆ ಬಂದು ಹೆಚ್ಚು ಕಾಲ ಕಳೆಯುತ್ತಿದ್ದರು. ನಾನು ಕಂಡಂತೆ ಅಂಬಿಗೆ ದರ್ಶನ್ ಇನ್ನೊಬ್ಬ ಮಗ ಇದ್ದಂತೆ. ಕೆಟ್ಟ ಕೆಲಸ ಮಾಡಬೇಡ, ಕೆಟ್ಟವರ ಜೊತೆ ಸೇರಬೇಡ, ಹುಷಾರಾಗಿ ಇರು ಎಂದು ದರ್ಶನ್ ಗೆ ಅಂಬರೀಶ್ ಯಾವಾಗಲೂ ಹೇಳುತ್ತಿದ್ದರಂತೆ.

ಫೋನ್ ಮಾಡಿ ವಿಚಾರಿಸುತ್ತಿದ್ದರು
ದರ್ಶನ್ ಅವರು ಶೂಟಿಂಗ್ ಅಂತ ಹೊರಗಡೆ ಹೋದಾಗ, ಮನೆಗೆ ಬರೋಕೆ ಆಗದೇ ಇದ್ದಾಗ, ಫೋನ್ ಮಾಡಿ ವಿಚಾರಿಸುತ್ತಿದ್ದರು. ಅವರು ಫೋನ್ ನಾನೇ ರಿಸೀವ್ ಮಾಡ್ತಿದ್ದೆ. ಅವರ ಹೇಳುತ್ತಿದ್ದ ಮೊದಲ ಮಾತೇ 'ಹೇಗಿದ್ದೀಯಾ ಅಣ್ಣ' ಅಂತ. ಅದಕ್ಕೆ ಅಣ್ಣ ''ಏನೋ ಚೆನ್ನಾಗಿ ಇದ್ದೀನಿ, ನೀನು ಹೇಗಿದ್ದೀಯಾ, ಎಲ್ಲಿದ್ದೀಯಾ ಅಂತ'' ಅಂತ ಮಾತು ಶುರು ಮಾಡುತ್ತಿದ್ದರು.

ಅಂಬರೀಶ್ ಮಾತಿಗೆ ದರ್ಶನ್ ಇಲ್ಲ ಎನ್ನಲ್ಲ
ಅಂಬರೀಶ್ ಹೇಳುತ್ತಿದ್ದ ಯಾವುದೇ ಮಾತಿಗೆ ದರ್ಶನ್ ಇಲ್ಲ ಎನ್ನುತ್ತಿರಲಿಲ್ಲ. ಅದು ಸಿನಿಮಾ ವಿಚಾರ ಆಗಿರಬಹುದು ಅಥವಾ ಖಾಸಗಿ ವಿಚಾರವೇ ಆಗಿರಬಹುದು. ದರ್ಶನ್ ಗೂ ಅಂಬಿ ಸುಪ್ರೀಂ ಆಗಿದ್ದರು. ಆದ್ರೀಗ, ಅಂಬಿಯ ಕಳೆದುಕೊಂಡು ದರ್ಶನ್ ಕೂಡ ಒಬ್ಬಂಟಿಯಾಗಿದ್ದಾರೆ.

ಅಭಿಷೇಕ್ ಬೆನ್ನಿಗೆ ದರ್ಶನ್
ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಶೂಟಿಂಗ್ ನಡೆಯುತ್ತಿದೆ. ಮಗನ ಸಿನಿಮಾ ನೋಡಬೇಕು ಎಂಬ ಆಸೆಯನ್ನ ಅಂಬಿ ಇಟ್ಟುಕೊಂಡಿದ್ದರು. ಅಮರ್ ಚಿತ್ರದ ಕೆಲವು ದೃಶ್ಯಗಳನ್ನ ಕೂಡ ನೋಡಿದ್ದರು. ಆದ್ರೆ, ಅಮರ್ ಬರೋದಕ್ಕು ಮುಂಚೆಯೇ ಅಮರನಾಥ್ ಇಲ್ಲವಾದರು. ಈಗ ಅಭಿಷೇಕ್ ಹಿಂದೆ ದರ್ಶನ್ ನಿಲ್ಲಲಿದ್ದಾರೆ ಎನ್ನಲಾಗಿದೆ. ಇಡೀ ಇಂಡಸ್ಟ್ರಿಯೇ ಅಂಬಿಪುತ್ರ ಬೆಂಬಲಕ್ಕೆ ನಿಂತಿದೆ. ಆದ್ರೆ, ದರ್ಶನ್ ಒಬ್ಬ ಅಣ್ಣನಾಗಿ ಸಪೋರ್ಟ್ ಮಾಡ್ತಾರೆ ಎಂಬ ಮಾತುಗಳು ಆಪ್ತ ವಲಯದಲ್ಲಿದೆ.


Click it and Unblock the Notifications











