"ದರ್ಶನ್ ಅವ್ರ ಪರ್ಸನಲ್ ಲೈಫ್ ಬಗ್ಗೆ ಏನೇ ಸ್ಟೋರಿಗಳು ಬಂದಿರ್ಲಿ, ಏನೇ ಇರ್ಲಿ, ಐ ಡೋಂಟ್ ಕೇರ್": ಮೇಘನಾ ಗಾಂವ್ಕರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕೆಲ ವಿಚಾರಗಳಿಂದಲೂ ಪದೇ ಪದೇ ಸುದ್ದಿ ಆಗಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನನ್ನು ಎಂದು ಬಿಟ್ಟುಕೊಟ್ಟಿಲ್ಲ. ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಬರೀ ಅವರ ಚಿತ್ರಗಳು ಮಾತ್ರವಲ್ಲ, ಅವರ ವ್ಯಕ್ತಿತ್ವಕ್ಕೆ ಅಭಿಮಾನಿಗಳಾದವರು ಇದ್ದಾರೆ.
ನಟ ದರ್ಶನ್ ವ್ಯಕ್ತಿತ್ವದ ಬಗ್ಗೆ ನಟಿ ಮೇಘನಾ ಗಾಂವ್ಕರ್ ಮಸ್ತ್ ಸಿನಿಮಾ ಯೂಟ್ಯೂಬ್ ಚಾನಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ಧಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ. "ದರ್ಶನ್ ಅಂದ್ರೆ ಹಂಬಲ್. ದರ್ಶನ್ ಅವರು ಒಬ್ಬ ಸ್ಟಾರ್ ಆಗಿ ಏನು ಅಂತ ಹೇಳುವುದಕ್ಕೆ ಹೋಗುವುದಿಲ್ಲ. ವೈಯಕ್ತಿಕವಾಗಿ ಅವರನ್ನು ಎಷ್ಟೇ ಸಲ ಭೇಟಿ ಮಾಡಿದರೂ ಅವರು, ನಮಸ್ಕಾರ ಅಮ್ಮ, ಹೇಗಿದ್ದೀರಾ ಅಮ್ಮ ಅಂತ ಅಷ್ಟು ಚೆನ್ನಾಗಿ ಮಾತನಾಡುತ್ತಾರೆ. ಎಷ್ಟು ಗೌರವ ಕೊಟ್ಟು ಮಾತನಾಡುತ್ತಾರೆ. ಅವರ ಬಗ್ಗೆ ಏನೇ ಸ್ಟೋರಿಗಳು ಬಂದಿರಲಿ, ಏನೇ ಇರಲಿ, ಐ ಡೋಂಟ್ ಕೇರ್."

"ನಮ್ಮ ಜೊತೆ ದರ್ಶನ್ ಅವರು ಹೇಗಿರ್ತಾರೆ, ನಮ್ ಫೇಸ್ ವ್ಯಾಲ್ಯೂ ಹೇಗಿದೆ, ಬೇರೆಯವರು 10 ತರ ಹೇಳ್ತಾರೆ, ನಮ್ಮ ಮುಂದೆ ಅವರು ಹೇಗಿದ್ದಾರೆ, ಹಿಂದೆ ಹೋಗಿ ಏನು ಮಾತಾಡ್ತಾರೆ, ಅದೆಲ್ಲಾ ಮ್ಯಾಟರ್ ಆಗಲ್ಲ, ನಾವು ಮುಂದೆ ಬಂದಾಗ ಎಷ್ಟು ಚೆನ್ನಾಗಿ ಮಾತನಾಡ್ತಾರೆ ಅನ್ನೋದು ಮುಖ್ಯ. ಹೇಗೆ ಮಾತಾಡ್ತಾರೆ, ಎಷ್ಟು ಗೌರವ ಕೊಟ್ಟು ಮಾತನಾಡ್ತಾರೆ ಅದು ಮುಖ್ಯ. ನನ್ನ ಪ್ರಕಾರ ಅವರು ಎಲ್ಲರಿಗೂ ಬಹಳ ಗೌರವ ಕೊಡುತ್ತಾರೆ" ಎಂದು ಮೇಘನಾ ಹೇಳಿದ್ದಾರೆ.
ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್- 2' ಚಿತ್ರದಲ್ಲಿ ಪೊಲೀಸ್ ಆಫೀಸರ್ ದೀಪಿಕಾ ಕಾಮತ್ ಪಾತ್ರದಲ್ಲಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆಕಾಶ್ ಶ್ರೀವತ್ಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ರಾಧಿಕಾ ಚೇತನ್, ವಿನಾಯಕ್ ಜೋಶಿ, ನಾಸರ್ ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಂಗೀತಾ ಶೃಂಗೇರಿ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ.

ಇದೇ ಸಂದರ್ಶನದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೂಡ ನಟಿ ಮೇಘನಾ ಗಾಂವ್ಕರ್ ಮಾತನಾಡಿದ್ದಾರೆ. "ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾ ಬಹಳ ಇಷ್ಟ. ಯಶ್ ಅವರ ಕಾನ್ಪಿಡೆನ್ಸ್ ಅಂದರೆ ಬಹಳ ಇಷ್ಟ. ಬರೀ ಕಾನ್ಪಿಡೆನ್ಸ್ ಅಂದರೆ ಚಿಕ್ಕದಾಗುತ್ತದೆ. ಆಗುತ್ತೆ? ಮಾಡೇ ಮಾಡ್ತೀನಿ ಎನ್ನುವ ಕಾನ್ಪಿಡೆನ್ಸ್ ಇದೆಯಲ್ಲ, ಅದು ಇಷ್ಟ. ಅದು ಓವರ್ ಕಾನ್ಪಿಡೆನ್ಸ್ ಅನ್ನೋದಕ್ಕೆ ಆಗಲ್ಲ, ಅದು ನಂಬಿಕೆ. KGF ಪ್ಯಾನ್ ಇಂಡಿಯಾ ಸಿನಿಮಾ ಆಗಿ ವರ್ಕ್ ಆಗೇ ಆಗುತ್ತೆ ಅನ್ನೋ ನಂಬಿಕೆ ಅವರಲ್ಲಿ ಇತ್ತು. ನಾನು ಕೂಡ ಒಂದು ದಿನ ದೊಡ್ಡ ಸ್ಟಾರ್ ಆಗ್ತೀನಿ ಎನ್ನುತ್ತಿದ್ದೆ. ಯಾರು ನಂಬುತ್ತಿರಲಿಲ್ಲ. ಯಶ್ ಅವರಲ್ಲೂ ಅದೇ ಗುಣ ಇದೆ" ಎಂದಿದ್ದಾರೆ.
ಕಿಚ್ಚ ಸುದೀಪ್ ಬಗ್ಗೆ ಮಾತನಾಡಿ "ಅವರು ಬಹಳ ಹ್ಯಾಂಡ್‌ಸಮ್, ಅವರ ವಾಯ್ಸ್ ಬಹಳ ಇಷ್ಟ. ಅವರು ಮಾತನಾಡಿದರೆ ಸಾಕು, ಎಲ್ಲೇ ಇದ್ದರೂ ಅವ್ರೇ ಎಂದು ಗೊತ್ತಾಗುತ್ತೆ. ಸುದೀಪ್ ಅವರ ಹುಚ್ಚ ಸಿನಿಮಾ ಬಹಳ ಇಷ್ಟ" ಎಂದು ಹೇಳಿದ್ದಾರೆ. 'ನಮ್ ಏರಿಯಾಲ್ ಒಂದು ದಿನ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಮೇಘನಾ 'ಚಾರ್‌ಮಿನಾರ್', 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ', 'ಕಾಳಿದಾಸ ಕನ್ನಡ ಮೇಷ್ಟ್ರು' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.


Click it and Unblock the Notifications











