ದೇವರ ಮೇಲೆ ಭಾರ ಹಾಕಿ ಕುಂತ ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಒಂದು ವರ್ಷ ಸೆರೆವಾಸ ಅನುಭವಿಸಿದಂತೆ ಆಗಿದೆ. ಸದ್ಯಕ್ಕೆ ಜಾಮೀನು ಸಿಕ್ಕಿ ದರ್ಶನ್ ಹೊರ ಬರುವ ಯಾವುದೇ ಸುಳಿವು ಸಿಕ್ತಿಲ್ಲ. ಇದೇ ವಿಚಾರ ಅವರ ಆಪ್ತರು ಹಾಗೂ ಅಭಿಮಾನಿಗಳ ಕಂಗೆಡಿಸಿದೆ.
2024 ಜೂನ್ 11ರಂದು ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಬಳಿಕ ವಿಚಾರಣಾಧೀನ ಕೈದಿಗಳಾಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಹೆಚ್ಚು ಕಮ್ಮಿ 5 ತಿಂಗಳ ಬಳಿಕ ಜಾಮೀನು ಪಡೆದು ಆರೋಪಿಗಳೆಲ್ಲಾ ಜೈಲಿನಿಂದ ಬಿಡುಗಡೆ ಆಗಿದ್ದರು. ಆದರೆ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿತ್ತು. ಆಗಸ್ಟ್ 14ರಂದು ಮತ್ತೆ ದರ್ಶನ್ ಸೇರಿ ಎಲ್ಲಾ ಆರೋಪಿಗಳು ಜೈಲು ಸೇರುವಂತಾಗಿತ್ತು.

ಮೊದಲಿಗೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸಿದ್ದರು. ಸಾಕಷ್ಟು ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಬೇಡಿಕೊಂಡಿದ್ದರು. ಚಾಮುಂಡಿ ಬೆಟ್ಟ, ನಗರದ ಬನಶಂಕರಿ ದೇವಸ್ಥಾನ, ಬಂಡೆ ಮಹಾಕಾಳಿ ದೇವಸ್ಥಾನ, ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರು. ದರ್ಶನ್ ಜಾಮೀನು ಪಡೆದು ಹೊರಬಂದಿದ್ದರು ದೇವರ ಕೃಪೆ ಎಂದೇ ಭಾವಿಸಿದ್ದರು.
ದರ್ಶನ್ ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಿದ್ದಂತೆ ಪತ್ನಿ, ಮಗನ ಜೊತೆ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಕಾಮಾಕ್ಯ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ದರು. ಪ್ರಕರಣದಲ್ಲಿ ದರ್ಶನ್‌ಗೆ ಸಂಕಷ್ಟ ಇನ್ನು ತಪ್ಪಿಲ್ಲ. ವಿಜಯಲಕ್ಷ್ಮಿ ದೇವರಲ್ಲಿ ಪ್ರಾರ್ಥಿಸುತ್ತಲೇ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸದ್ಯ ಆಕೆ ಮಾಡಿರುವ ಪೋಸ್ಟ್ ವೈರಲ್ ಆಗ್ತಿದೆ. "ಹೆಚ್ಚಿನ ಸಮಯ ನಾನು ದೇವರಲ್ಲಿ ಏನನ್ನೂ ಕೇಳುವುದಿಲ್ಲ, ನಾನು ಅವನ ಮುಂದೆ ಮೌನವಾಗಿ ಕುಳಿತುಕೊಳ್ಳುತ್ತೇನೆ... "ದೇವರು ನನ್ನ ಮಾತುಗಳಿಗಿಂತ ನನ್ನ ಹೃದಯವನ್ನು ಚೆನ್ನಾಗಿ ತಿಳಿದಿದ್ದಾನೆ." ಎನ್ನುವ ಕೋಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಪೋಸ್ಟ್ ಅನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದು 20 ತಿಂಗಳುಗಳು ಕಳೆದಿದೆ. ದರ್ಶನ್ ಸೇರಿ ಆರೋಪಿಗಳು 370 ದಿನ ಜೈಲಿನಲ್ಲಿ ಕಳೆದಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಡೆವಿಲ್' ಸಿನಿಮಾ ತೆರೆಕಂಡಿತ್ತು. ವಿಜಯಲಕ್ಷ್ಮಿ ದರ್ಶನ್ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದರು. ಸಿನಿಮಾ ಪ್ರಚಾರಕ್ಕೂ ಕೈ ಜೋಡಿಸಿದ್ದರು.
ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಾಕ್ಷಿಗಳ ವಿಚಾರಣೆ ಮಾಡಲಾಗುತ್ತಿದೆ. ಪ್ರಕರಣದ 11ನೇ ಆರೋಪಿ ನಾಗರಾಜುಗೆ 57ನೇ ಸಿಸಿಹೆಚ್ ಕೋರ್ಟ್ ಜಾಮೀನು ನೀಡಿದೆ. ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಜಗದೀಶ್ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಪ್ರಕರಣದ ವಿಚಾರಣೆ ಆರಂಭವಾಗಿದ್ದು ರೇಣುಕಾಸ್ವಾಮಿ ತಂದೆ, ತಾಯಿ ಹೇಳಿಕೆಯನ್ನು ಕೋರ್ಟ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ.
ವಿಜಯಲಕ್ಷ್ಮಿ ದರ್ಶನ್ ಆಗೊಮ್ಮೆ ಈಗೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿರುವ ದರ್ಶನ್ ನೆಚ್ಚಿನ ಕುದುರೆ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಗಳು ದರ್ಶನ್ ಅವರನ್ನು ಬಹಳ ಮಿಸ್ ಮಾಡಿಕೊಂಡು ಕಾಮೆಂಟ್ ಮಾಡಿದ್ದರು.
ಬೆನ್ನು ನೋವಿನ ಸಮಸ್ಯೆಯಿಂದ ಕೂಡ ದರ್ಶನ್ ಸಂಕಷ್ಟ ಎದುರಿಸುತ್ತಿದ್ದಾರೆ. ಆಗಾಗ್ಗೆ ವಿಜಯಲಕ್ಷ್ಮಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಪತಿ ದರ್ಶನ್ ಭೇಟಿ ಮಾಡಿ ಬರುತ್ತಿದ್ದಾರೆ. ನಟ ಧನ್ವೀರ್ ಗೌಡ ಕೂಡ ದರ್ಶನ್ ಭೇಟಿಗೆ ತೆರಳುತ್ತಾರೆ. ಇತ್ತೀಚೆಗೆ ಆರ್‌ಸಿಬಿ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ದರ್ಶನ್ ಪುತ್ರ ವಿನೀಶ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದು ವೈರಲ್ ಆಗಿತ್ತು.


Click it and Unblock the Notifications











