Kaatera: ಅಭಿಮಾನಿಗಳು ಕಾಯುತ್ತಿರುವ ಆ ಸಮಯ ಬಂದೇಬಿಡ್ತು: 'ಕಾಟೇರನಿ'ಗೆ ದಾರಿಬಿಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 'ಕಾಟೇರ' ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ದಸರಾಗೆ ಸಿನಿಮಾ ರಿಲೀಸ್ ಎನ್ನುವ ಚರ್ಚೆ ಕೂಡ ನಡೀತಿದೆ.
ಪೋಸ್ಟರ್‌ಗಳನ್ನು ಬಿಟ್ಟರೆ ಚಿತ್ರದ ಯಾವುದೇ ಸ್ಯಾಂಪಲ್ ಇನ್ನು ರಿವೀಲ್ ಆಗಿಲ್ಲ. ಮುಖ್ಯವಾಗಿ 'ಕಾಟೇರ' ಟೀಸರ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಸೆಟ್ಟೇರಿತ್ತು. ಈ ವರ್ಷ ವರಲಕ್ಷ್ಮಿ ಹಬ್ಬಕ್ಕೆ ಟೀಸರ್ ಬರುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ ನಾಯಕ- ನಾಯಕಿ ಸೈಕಲ್ ಏರಿ ಕುಳಿದ ಹೊಸ ಪೋಸ್ಟರ್ ಮಾತ್ರ ಬಂದಿತ್ತು. ಇದೀಗ ಟೀಸರ್ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಗಣೇಶ ಹಬ್ಬಕ್ಕೆ 'ಕಾಟೇರ' ಟೀಸರ್ ಬರೋದು ಪಕ್ಕಾ ಎನ್ನಲಾಗ್ತಿದೆ. ಬಲ್ಲ ಮೂಲಗಳ ಪ್ರಕಾರ ತರುಣ್ ಸುಧೀರ್ ಅಂಡ್ ಟೀಮ್ ಟೀಸರ್ ಕಟ್ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ಕೊನೆಪಕ್ಷ ಫಸ್ಟ್ ಗ್ಲಿಂಪ್ಸ್ ಆದರೂ ರಿವೀಲ್ ಆಗುವ ಸುಳಿವು ಸಿಗುತ್ತಿದೆ. ಜಬರ್ದಸ್ತ್ ಡೈಲಾಗ್ ಜೊತೆಗೆ 'ಕಾಟೇರ' ದರ್ಶನ್ ಆರ್ಭಟದ ಸಣ್ಣ ಝಲಕ್ ಮಿಕ್ಸ್ ಮಾಡಿ ಸ್ಪೆಷಲ್ ಟೀಸರ್ ರೆಡಿಯಾಗುತ್ತಿದ್ದು ವಿ. ಹರಿಕೃಷ್ಣ ಬಿಜಿಎಂ ಅದಕ್ಕೆ ಮತ್ತಷ್ಟು ಬಲ ತುಂಬಲಿದೆ.
ಈ ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಯಾದಾಗ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ನಡೆದ ಸಂಘರ್ಷಗಳೇ ಈ ಕಥೆಯ ಕೇಂದ್ರಬಿಂದು. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ 'ಕಾಟೇರ' ಚಿತ್ರಕ್ಕಿದೆ. ಚಿತ್ರದಲ್ಲಿ 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮವಹಿಸುತ್ತಿದೆ. D56 ಟೈಟಲ್‌ನಲ್ಲಿ ಸಿನಿಮಾ ಶುರುವಾಗಿತ್ತು. ಬಳಿಕ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಪೆಷಲ್ ಮೋಷನ್ ಪೋಸ್ಟರ್ ಮೂಲಕ ಟೈಟಲ್ ರಿವೀಲ್ ಮಾಡಲಾಗಿತ್ತು. ಲುಂಗಿ ಉಟ್ಟು, ಕತ್ತಿ ಹಿಡಿದ 'ಕಾಟೇರ'ನ ದರ್ಶನವಾಗಿತ್ತು.
ಥೀಮ್ ಪೋಸ್ಟರ್‌ನಿಂದಲೇ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿತ್ತು. 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ 'ಕಾಟೇರ'ನ ಆರ್ಭಟವನ್ನು ಕಟ್ಟಿಕೊಡುತ್ತಿದೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಳಿಕ ದರ್ಶನ್ ಮತ್ತೆ ಐತಿಹಾಸಿಕ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಕಟ್ಟಿಕೊಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. ಸೆಟ್‌ನಿಂದ ಯಾವುದೇ ಫೋಟೊ, ವಿಡಿಯೋ ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ತರುಣ್ ಚಿತ್ರ ಸೆರೆಹಿಡಿಯುತ್ತಿದ್ದಾರೆ.
ದಸರಾ ಸಂಭ್ರಮದಲ್ಲಿ 'ಕಾಟೇರ' ಚಿತ್ರ ರಿಲೀಸ್ ಮಾಡುವುದಾಗಿ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ. ಆದರೆ ಅದು ಕಷ್ಟ. ಯಾಕಂದರೆ ಚಿತ್ರದ ಮುಖ್ಯ ಶೆಡ್ಯೂಲ್ ಇನ್ನು ಬಾಕಿಯಿದೆ. ಜೊತೆಗೆ ಹಾಡುಗಳ ಚಿತ್ರೀಕರಣ ನಡೆಯಬೇಕಿದೆ. ಶೂಟಿಂಗ್ ಬಳಿಕ ಇನ್ನು ಪ್ರೀ ಪ್ರೊಡಕ್ಷನ್, ಪ್ರಮೋಷನ್‌ಗೆ ಬಹಳ ಸಮಯ ಬೇಕಿದೆ. ಹಾಗಾಗಿ ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ದರ್ಶನ್ ಈ ವರ್ಷ 'ಕಾಟೇರ'ನಾಗಿ ತೆರೆಮೇಲೆ ದರ್ಶನ ಕೊಡದಿದ್ದರೂ 'ಗರಡಿ' ಚಿತ್ರದ ಅತಿಥಿ ಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.


Click it and Unblock the Notifications











