ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ಅಭಿಮಾನಿ ಚಿಕಿತ್ಸೆಗೆ ದಾಸ ದರ್ಶನ್ ನೆರವು
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಪ್ರಾಣಿ-ಪಕ್ಷಿ ಕಾಳಜಿ, ಸರಳತೆ ಹಾಗೂ ಸಹಾಯಗುಣದಿಂದಲೂ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ದರ್ಶನ್ ಹಲವು ವರ್ಷಗಳಿಂದ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಬಲಗೈಲಿ ಸಹಾ ಮಾಡಿದ್ದು ಎಡಗೈಗೂ ಗೊತ್ತಾಗದಂತೆ ನೋಡಿಕೊಳ್ಳುತ್ತಾರೆ.
ಸಾಕಷ್ಟು ಜನರ ಚಿಕಿತ್ಸೆ, ವಿದ್ಯಾಭ್ಯಾಸಕ್ಕೆ ದರ್ಶನ್ ಕೈಲಾದ ನೆರವು ನೀಡಿದ್ದಾರೆ. ಅಷ್ಟೇ ತಮ್ಮಿಂದ ಏನೆಲ್ಲಾ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತಾ ಬರುತ್ತಿದ್ದಾರೆ. ತಮ್ಮ ಕೈಯಲ್ಲಿ ಸಾಧ್ಯವಾಗದೇ ಇದ್ದಾಗ ತಮ್ಮ ಆಪ್ತರ ಮೂಲಕವೂ ನೆರವಾಗುವ ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ. 'ಕಾಟೇರ' ಸಕ್ಸಸ್ ಸಂಭ್ರಮದಲ್ಲಿರುವ ದರ್ಶನ್ 'ಡೆವಿಲ್' ಸಿನಿಮಾ ಕಡೆ ಮುಖ ಮಾಡಿದ್ದಾರೆ.

ಇತ್ತೀಚೆಗೆ ಬರ್ತ್‌ಡೇ ಪಾರ್ಟಿ, ಆಪ್ತರ ಮದುವೆ ಅಂತ ದರ್ಶನ್ ಹಲವು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ನಿನ್ನೆಯಷ್ಟೆ(ಮಾರ್ಚ್ 5) ಮದ್ದೂರಿನಲ್ಲಿ ನಡೆದ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ದರ್ಶನ್ ಭಾಗಿ ಆಗಿದ್ದರು. ಕಳೆದ ವರ್ಷ ಮದ್ದೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಉದಯ್ ಕೆ ಎಂ ಕದಲೂರು ಪರ ದರ್ಶನ್ ಚುನಾವಣೆ ಪ್ರಚಾರ ನಡೆಸಿ ಮತ ಚಲಾಯಿಸಿದ್ದರು.
ಇನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಅಭಿಮಾನಿ ಚಿಕಿತ್ಸೆಗೆ ದರ್ಶನ್ ಸಹಾಯ ಮಾಡಿದ್ದಾರೆ. ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ಜೀವ ಶೌರ್ಯ ಎನ್ನುವ ಅಭಿಮಾನಿಯ ಆಸ್ಪತ್ರೆ ವೆಚ್ಚವನ್ನು ದರ್ಶನ್ ನೋಡಿಕೊಂಡಿದ್ದರು. ಇದೀಗ ಜೀವ ಶೌರ್ಯಗೆ ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ನಟ ದರ್ಶನ್ ನೆರವಾಗುತ್ತಿದ್ದಾರೆ.
ಇತ್ತೀಚೆಗೆ ಜೀವ ಶೌರ್ಯ ಚಿಕಿತ್ಸೆಗೆ ನೆರವಾಗುವಂತೆ ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಇದೀಗ ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀವ ಶೌರ್ಯನನ್ನು ಭೇಟಿ ಮಾಡಿ ನಟ ದರ್ಶನ್ ಧೈರ್ಯ ತುಂಬಿದ್ದಾರೆ. ದರ್ಶನ್ ಸಹಾಯಗುಣವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸದ್ಯ ಮೂರ್ನಾಲ್ಕು ಸಿನಿಮಾಗಳಿಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಡೆವಿಲ್ ದಿ ಹೀರೋ' ಸಿನಿಮಾ ಈ ವರ್ಷವೇ ಬಿಡುಗಡೆ ಆಗುತ್ತದೆ ಎಂದು ದರ್ಶನ್ ಹೇಳಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಚಿತ್ರವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. 'ಕರಿಯ' ಬಳಿಕ ದರ್ಶನ್ ಹಾಗೂ ಪ್ರೇಮ್ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿರುವುದು ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸಿದೆ.
'ಕಾಟೇರ' ಸಕ್ಸಸ್ ಬಳಿಕ ತರುಣ್ ಸುಧೀರ್ ನಿರ್ದೇಶನದಲ್ಲಿ ಮತ್ತೆ ದರ್ಶನ್ ನಟಿಸುವುದು ಪಕ್ಕಾ ಆಗಿದೆ. ಈ ಬಾರಿ ಮತ್ತೆ ಐತಿಹಾಸಿಕ ಚಿತ್ರದಲ್ಲಿ ನಟಿಸಲು ದರ್ಶನ್ ಒಪ್ಪಿದ್ದಾರೆ. 'ಸಿಂಧೂರ ಲಕ್ಷ್ಮಣ'ನಾಗಿ ನಟಿಸಲು ಬಹಳ ವರ್ಷಗಳಿಂದ ದರ್ಶನ್ ಕಾಯುತ್ತಿದ್ದಾರೆ. ಸದ್ಯ ತರುಣ್ ಸುಧೀರ್ ಇದೀಗ ಆ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ಶೈಲಜಾ ನಾಗ್- ಬಿ. ಸುರೇಶ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.


Click it and Unblock the Notifications











