ಅಭಿ- ಅವಿವಾ ನಿಶ್ಚಿತಾರ್ಥ ಸಮಾರಂಭದಲ್ಲಿ ದರ್ಶನ್- ಯಶ್ ಆತ್ಮೀಯ ಅಪ್ಪುಗೆ: ವೀಡಿಯೋ ಫುಲ್ ವೈರಲ್
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮದುವೆ ನಿಶ್ಚಿತಾರ್ಥ ಸಮಾರಂಭ ನಿನ್ನೆ(ಡಿಸೆಂಬರ್ 11) ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಚಿತ್ರರಂಗದ ಗಣ್ಯರು ಹಾಗೂ ಅಂಬಿ ಕುಟುಂಬದ ಆಪ್ತರು ಈ ಸಮಾರಂಭದಲ್ಲಿ ಭಾಗಿ ಆಗಿ ಜೋಡಿಗೆ ಶುಭ ಹಾರೈಸಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಉಂಗುರ ಬದಲಿಸಿಕೊಂಡಿದ್ದಾರೆ. ಅಭಿ ಹಾಗೂ ಅವಿವಾ ಹಲವು ವರ್ಷಗಳಿಂದ ಸ್ನೇಹಿತರಾಗಿ ಇದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಅದನ್ನು ಮತ್ತೊಂದು ಹಂತಕ್ಕೆ ಕೊಂಡಯ್ಯಲು ತೀರ್ಮಾನಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್- ರಾಧಿಕಾ ಪಂಡಿತ್ ದಂಪತಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಈ ಶುಭ ಸಮಾರಂಭಕ್ಕೆ ಹಾಜರಾಗಿದ್ದರು.
ಬಹಳ ಹಿಂದೆಯೇ ಅಭಿಷೇಕ್ ಅಂಬರೀಶ್ ಮದುವೆ ನಿಶ್ಚಿತಾರ್ಥದ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ ಇದೆಲ್ಲಾ ಸುಳ್ಳು. ಬರೀ ಗಾಳಿಸುದ್ದಿ ಎಂದು ಅಭಿ ಹಾಗೂ ತಾಯಿ ಸುಮಲತಾ ಅಂಬರೀಶ್ ಹೇಳಿದ್ದರು. ಆದರೆ ಈಗ ಆ ಸುದ್ದಿ ನಿಜವಾಗಿದ್ದು, ಶೀಘ್ರದಲ್ಲೇ ಅಭಿ- ಅವಿವಾ ಜೋಡಿ ಹಸೆಮಣೆ ಏರುವ ತಯಾರಿಯಲ್ಲಿದೆ.

ದರ್ಶನ್-ಯಶ್ ಪ್ರೀತಿಯ ಅಪ್ಪುಗೆ
ಸ್ಯಾಂಡಲ್‌ವುಡ್‌ನಲ್ಲಿ ಜೋಡೆತ್ತುಗಳೆಂದು ಕರೆಸಿಕೊಳ್ಳುವ ನಟ ದರ್ಶನ್ ಹಾಗೂ ಯಶ್ ಬಹಳ ದಿನಗಳ ನಂತರ ಮತ್ತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭೇಟಿ ಆಗಿದ್ದಾರೆ. ಒಬ್ಬರನ್ನೊಬ್ಬರು ನೋಡಿದ ಕೂಡಲೇ ಅಪ್ಪಿಕೊಂಡು ಕೈಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಧಿಕಾ ಪಂಡಿತ್ ಅವರನ್ನು ನೋಡಿ "ಮಕ್ಕಳು ಹೇಗಿದ್ದಾರಮ್ಮ ಎಂದು ದರ್ಶನ್ ಕೇಳಿದ್ದಾರೆ" ಅದಕ್ಕೆ "ಚೆನ್ನಾಗಿದ್ದಾರೆ" ಎಂದು ರಾಧಿಕಾ ಉತ್ತರಿಸಿದ್ದಾರೆ.

ಜೋಡೆತ್ತು ನೋಡಿ ಫ್ಯಾನ್ಸ್ ಖುಷ್
ಇನ್ನು ಹೀಗೆ ದರ್ಶನ್ ಹಾಗೂ ಯಶ್ ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರ ಅಭಿಮಾನಿಗಳಿಗೂ ಖುಷಿ ತಂದಿದೆ. ಯಾವಾಗಲೂ ಹೀಗೆ ಇರಿ. ಒಟ್ಟಿಗೆ ಸಿನಿಮಾ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ಮನವಿ ಮಾಡುತ್ತಿದ್ದಾರೆ. ಈ ಹಿಂದೆ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್ ಹಾಗೂ ಯಶ್ ಇಬ್ಬರು ಭೇಟಿಯಾಗಿದ್ದರು.

ತಮ್ಮನ್ನು ಜೋಡೆತ್ತು ಎಂದಿದ್ದ ದರ್ಶನ್
ಸಿನಿಮಾಗಳಲ್ಲಿ ದರ್ಶನ್ ಹಾಗೂ ಯಶ್ ಒಬ್ಬರಿಗೊಬ್ಬರು ಟಾಂಗ್ ಕೊಡುವಂತಹ ಡೈಲಾಗ್‌ಗಳನ್ನು ಹೇಳಿದ್ದನ್ನು ನೋಡಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಕೆಲ ವರ್ಷಗಳ ಹಿಂದೆ ಕೇಳಿಬಂದಿತ್ತು. ಆದರೆ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಇಬ್ಬರು ಒಟ್ಟಿಗೆ ಪ್ರಚಾರಕ್ಕೆ ಇಳಿದಿದ್ದರು. ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ದರ್ಶನ್ ತಮ್ಮಿಬ್ಬರನ್ನು ಜೋಡೆತ್ತು ಎಂದು ಕರೆದಿದ್ದರು. ಚುನಾವಣೆ ಪ್ರಚಾರದ ವೇಳೆ 'ಜೋಡೆತ್ತು' ಪದ ಬಹಳ ದೊಡ್ಡದಾಗಿ ಸದ್ದು ಮಾಡಿತ್ತು. 2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವಲ್ಲಿ ಇಬ್ಬರು ತುಂಬಾನೇ ಪ್ರಮುಖ ಪಾತ್ರವಹಿಸಿದ್ದರು.

'ಜೋಡೆತ್ತು' ಟೈಟಲ್ ರಿಜಿಸ್ಟರ್
ಇದ್ದಕ್ಕಿಂದಂತೆ 'ಜೋಡೆತ್ತು' ಪದ ವೈರಲ್ ಆಗಿದ್ದು ನೋಡಿ ಯಾರೋ ಈ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದರು. ದರ್ಶನ್- ಯಶ್ ಇಬ್ಬರು ಒಟ್ಟಿಗೆ ನಟಿಸಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದರು. ಇದೇ ಪ್ರಶ್ನೆಯನ್ನು ಇಬ್ಬರ ಮುಂದೆ ಇಟ್ಟಾಗ ನಟಿಸೋಕೆ ಸಮಸ್ಯೆ ಇಲ್ಲ. ಒಳ್ಳೆ ಕಥೆ ಸಿಗಬೇಕು. ಸಿಕ್ಕಿದಾಗ ನೋಡೋಣ ಎಂದಿದ್ದರು. ದರ್ಶನ್ ಕೂಡ "ನಮ್ಮ ಹೀರೊ ಜೊತೆ ನಟಿಸೋಕೆ ನಮಗೇನು?" ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











