ಹಿರಿಯ ನಟ ಮನ್‌ದೀಪ್ ರಾಯ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ದರ್ಶನ್

ನಿನ್ನೆ ( ಜನವರಿ 29 ) ಕನ್ನಡ ಚಲನಚಿತ್ರದ ಹಿರಿಯ ಹಾಸ್ಯ ಕಲಾವಿದ ಮನ್‌ದೀಪ್ ರಾಯ್ ಹೃದಯಾಘಾತದಿಂದ ಮೃತಪಟ್ಟರು. ಬೆಂಗಳೂರಿನ ಭೈರಸಂದ್ರದಲ್ಲಿನ ತಮ್ಮ ನಿವಾಸದಲ್ಲಿ ತಡರಾತ್ರಿ ಸುಮಾರು 1.45ಕ್ಕೆ ಮನ್‌ದೀಪ್ ರಾಯ್ ಅಸುನೀಗಿದರು. ಇನ್ನು ಇವರ ಅಂತಿಮ ದರ್ಶನ ಪಡೆಯಲು ಚಂದನವನದ ಯಾವ ನಟ ನಟಿಯರೂ ಸಹ ತೆರಳಲಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾರೊಬ್ಬರೂ ಸಹ ಶ್ರದ್ಧಾಂಜಲಿ ಸಲ್ಲಿಸಿ ಫೋಟೊ ಹಾಕಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಹಿರಿಯ ನಟನ ಮೃತ ಸುದ್ದಿ ತಿಳಿದ ಬೆನ್ನಲ್ಲೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ನಟ ದರ್ಶನ್ "ಬಹುತೇಕ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಹಿರಿಯ ನಟ ಮಂದೀಪ್ ರಾಯ್ ರವರು ವಿಧಿವಶರಾಗಿರುವ ಸುದ್ಧಿ ಕನ್ನಡ ಚಿತ್ರರಂಗಕ್ಕೆ ಒಂದು ನೋವಿನ ಸಂಗತಿಯಾಗಿದೆ. ದೇವರು ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕ್ರಾಂತಿ ಚಿತ್ರ ಬಿಡುಗಡೆಯ ದಿನ ಪೋಸ್ಟ್ ಹಂಚಿಕೊಂಡಿದ್ದ ದರ್ಶನ್ ಬಳಿಕ ಚಿತ್ರದ ಕುರಿತಾಗಿ ಯಾವುದೇ ಪೋಸ್ಟ್ ಹಂಚಿಕೊಳ್ಳದೇ ಇದ್ದರೂ ನಟನಿಗೆ ಗೌರವ ಸಲ್ಲಿಸುವ ಸಲುವಾಗಿ ಪೋಸ್ಟ್ ಮಾಡಿರುವುದನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಇನ್ನು ಮೂಲತಃ ಮುಂಬೈನವರಾಗಿದ್ದ ನಟ ಮನ್‌ದೀಪ್ ರಾಯ್ ಶಂಕರ್ ನಾಗ್ ಹಾಗೂ ಅನಂತ್ ನಾಗ್ ನಟನೆಯ ಮಿಂಚಿನ ಒಟ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ 500ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ರಸಿಕರ ಮನಸಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ರೀತಿಯ ಹಿರಿಯ ನಟರ ಚಿತ್ರಗಳಿಂದ ಹಿಡಿದು ಈಗಿನ ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್, ಸುದೀಪ್ ಹಾಗೂ ದರ್ಶನ್ ಚಿತ್ರಗಳಲ್ಲೂ ನಟಿಸಿದ್ದ ಮನ್‌ದೀಪ್ ರಾಯ್ ಅವರನ್ನು ಇನ್ನುಮುಂದೆ ಅವರು ನಟಿಸಿದ್ದ ಚಿತ್ರಗಳಲ್ಲಿ ಮಾತ್ರ ಕಾಣಬಹುದಾಗಿದೆ.


Click it and Unblock the Notifications











