ಒಂದೇ ದಿನ ದರ್ಶನ್ ನಟನೆಯ 2 ಚಿತ್ರಗಳು ರೀ-ರಿಲೀಸ್; ಗೊಂದಲದಲ್ಲಿ ಫ್ಯಾನ್ಸ್
ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣಾಧೀನ ಕೈದಿಯಲ್ಲಿ ಸೆರೆವಾಸ ಅನುಭವಿಸುವಂತಾಗಿದೆ. ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ವಕೀಲರ ಮೂಲಕ ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಇತ್ತ ಅವರ ಹಿಟ್ ಸಿನಿಮಾಗಳು ಒಂದರ ಹಿಂದೆ ಒಂದು ರೀ-ರಿಲೀಸ್ ಆಗುತ್ತಿದೆ.
ಕನ್ನಡದಲ್ಲಿ ದೊಡ್ಡ ಚಿತ್ರಗಳು ತೆರೆಗೆ ಬರದೇ ಹಳೇ ಚಿತ್ರಗಳನ್ನೇ ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ದರ್ಶನ್ ಜೈಲು ಸೇರಿದ ಮೇಲೆ 'ಶಾಸ್ತ್ರೀ' ಹಾಗೂ 'ಕರಿಯ' ಚಿತ್ರಗಳು ಹೊಸ ರೂಪದಲ್ಲಿ ಮತ್ತೆ ತೆರೆಗೆ ಬಂದಿತ್ತು. ಕಳೆದ ವಾರವಷ್ಟೆ 'ಪೊರ್ಕಿ' ಸಿನಿಮಾ ರೀ-ರಿಲೀಸ್ ಆಗಿತ್ತು. ಇದೀಗ ಮತ್ತೆರಡು ಚಿತ್ರಗಳನ್ನು ಒಂದೇ ದಿನ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.

16 ವರ್ಷಗಳ ಹಿಂದೆ ದರ್ಶನ್ ನಟಿಸಿದ 'ನವಗ್ರಹ' ಚಿತ್ರ ಸಿನಿರಸಿಕರ ಮನಗೆದ್ದಿತ್ತು. ಕನ್ನಡದ ಖ್ಯಾತ ಖಳನಟರ ಮಕ್ಕಳೆಲ್ಲಾ ಒಟ್ಟಾಗಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ದಿನಕರ್ ತೂಗುದೀಪ್ ನಿರ್ದೇಶನದ ಚಿತ್ರವನ್ನು ತಾಯಿ ಮೀನಾ ತೂಗುದೀಪ್ ನಿರ್ಮಾಣ ಮಾಡಿದ್ದರು. ಮೈಸೂರು ಅಂಬಾರಿ ಕದಿಯುವ ಕಥಾಹಂದರ ಇದ್ದ ಸಿನಿಮಾ ವಿಭಿನ್ನ ಪ್ರಯತ್ನ ಎನಿಸಿಕೊಂಡಿತ್ತು. ಜಗ್ಗು ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು. ಈ ಚಿತ್ರವನ್ನು ರೀ-ರಿಲೀಸ್ ಮಾಡುವಂತೆ ಪದೇ ಪದೆ ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಅದಕ್ಕೆ ಸಮಯ ಬಂದಿದೆ.
ನವೆಂಬರ್ 8ಕ್ಕೆ 'ನವಗ್ರಹ' ಸಿನಿಮಾ ಮರುಬಿಡುಗಡೆ ಮಾಡುವುದಾಗಿ ದಿನಕರ್ ತೂಗುದೀಪ್ ಘೋಷಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಂದಹಾಗೆ ಸರಿ 16 ವರ್ಷಗಳ ಹಿಂದೆ ನವೆಂಬರ್ 7ಕ್ಕೆ 'ನವಗ್ರಹ' ತೆರೆಗೆ ಬಂದಿತ್ತು. ಅಕ್ಟೋಬರ್ 28ಕ್ಕೆ ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ನಡೆಯಲಿದೆ. ಅಂದು ಸಿಹಿಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕಿರಲಿಲ್ಲ. ದರ್ಶನ್ ಪರ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಇದೀಗ ಹೈಕೋರ್ಟ್‌ನಲ್ಲಿ ದರ್ಶನ್ ಆರೋಗ್ಯ ಸಮಸ್ಯೆಯ ಕಾರಣ ಮುಂದಿಟ್ಟು ಜಾಮೀನು ಕೊಡಿಸಲು ಮುಂದಾಗಿದ್ದಾರೆ. ಅಕ್ಟೋಬರ್ 22ರಂದು ಮೊದಲ ಬಾರಿಗೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಸದ್ಯ ಕೋರ್ಟ್ ದರ್ಶನ್ ಆರೋಗ್ಯಸ್ಥಿತಿಯ ವರದಿಯನ್ನು ಕೇಳಿದೆ.
ಇತ್ತೀಚೆಗೆ ಬಳ್ಳಾರಿ ಜೈಲಿನಿಂದ ದರ್ಶನ್ ಅವರನ್ನು ಅಲ್ಲಿನ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿತ್ತು. ಅಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು. ಅಕ್ಟೋಬರ್ 28ಕ್ಕೆ ನಟ ದರ್ಶನ್‌ಗೆ ಜಾಮೀನು ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಕೊಡಿಸಲು ವಕೀಲರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ದರ್ಶನ್ ಹೊರಗೆ ಬರುವ ವೇಳೆಗೆ 'ನವಗ್ರಹ' ಸಿನಿಮಾ ಬಿಡುಗಡೆ ಆಗುತ್ತಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ನವೆಂಬರ್ 8ಕ್ಕೆ ದರ್ಶನ್ ನಟನೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ವನ್ನು ಕೂಡ ರೀ-ರಿಲೀಸ್ ಮಾಡುವ ತಯಾರಿ ನಡೆದಿದೆ. ದರ್ಶ್ನ ಕರಿಯರ್‌ನಲ್ಲಿ ಈ ಸಿನಿಮಾ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ನಾಗಣ್ಣ ನಿರ್ದೇಶನದ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದ್ದರು. ಐತಿಹಾಸಿಕ ಕಥಾಹಂದರ ಚಿತ್ರದಲ್ಲಿ ರಾಯಣ್ಣನಾಗಿ ದರ್ಶನ್ ಅಬ್ಬರಿಸಿದ್ದರು.
ಒಂದೇ ದಿನ ದರ್ಶನ್ ನಟನೆಯ 2 ಚಿತ್ರಗಳು ರೀ-ರಿಲೀಸ್ ಆಗುತ್ತಿರುವುದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಎರಡೂ ಕೂಡ ದರ್ಶನ್ ನಟನೆಯ ಹಿಟ್ ಸಿನಿಮಾಗಳು. ಒಂದೇ ದಿನ ಎರಡನ್ನೂ ನೋಡುವುದು ಹೇಗೆ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಾಜ್ಯೋತ್ಸವದ ಸಂಭ್ರಮದಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ರೀ-ರಿಲೀಸ್ ಸಿದ್ಧತೆ ನಡೀತಿದೆ. ಅಭಿಮಾನಿಗಳು ಎರಡೂ ಚಿತ್ರವನ್ನು ದೊಡ್ಡದಾಗಿ ಸ್ವಾಗತಿಸಲು ಕಾಯುತ್ತಿದ್ದಾರೆ.


Click it and Unblock the Notifications











