'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಬಿಗ್ ಸರ್‌ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್
ನಟ ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿರುವ 'ಉಪಾಧ್ಯಕ್ಷ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಸ್ಯಾಂಡಲ್‌ವುಡ್ ಸ್ಟಾರ್ ನಟರೆಲ್ಲಾ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಗಣರಾಜ್ಯೋತ್ಸವ ಸಂಭ್ರಮದಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಸಿನಿಮಾ ಹಿನ್ನೆಲೆಯಲ್ಲೇ 'ಉಪಾಧ್ಯಕ್ಷ' ಸಿನಿಮಾ ಕೂಡ ಮೂಡಿ ಬಂದಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಚಿಕ್ಕಣ್ಣ ಸಾಕಷ್ಟು ತಯಾರಿ ನಡೆಸಿ ಹೀರೋ ಆಗಿದ್ದಾರೆ. ಮಲೈಕಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. 'ಉಪಾಧ್ಯಕ್ಷ'ನ ಕಥೆ ಕೂಡ ಗೆಜ್ಜೆಪುರದಲ್ಲೇ ನಡೆಯಲಿದೆ.

'ಅಧ್ಯಕ್ಷ' ಚಿತ್ರದಲ್ಲಿ ಶಿವರುದ್ರೆಗೌಡನ ಮಗಳು ಐಶ್ವರ್ಯಳನ್ನು ಚಂದ್ರಶೇಖರ್ ಗೌಡ ಮದುವೆ ಆಗಿದ್ದ ಕತೆಯಿತ್ತು. ಈಗ ಶಿವರುದ್ರೆಗೌಡನ ಮತ್ತೊಬ್ಬ ಮಗಳನ್ನು 'ಉಪಾಧ್ಯಕ್ಷ' ನಾರಾಯಣ ಗೌಡ ಪಟಾಯಿಸುವ ಕಥೆ ಈ ಚಿತ್ರದಲ್ಲಿದೆ. ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಧನಂಜಯ್ ಸೇರಿದಂತೆ ಹಲವರು 'ಉಪಾಧ್ಯಕ್ಷ' ಚಿತ್ರಕ್ಕೆ ಶುಭ ಕೋರಿದ್ದಾರೆ. ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
ನಟ ಚಿಕ್ಕಣ್ಣ ಬಹಳ ದಿನಗಳಿಂದ ದರ್ಶನ್ ಆಪ್ತ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ದರ್ಶನ್ ತಮ್ಮ ಆಪ್ತರ ಸಿನಿಮಾಗಳನ್ನು ಬೆಂಬಲಿಸುತ್ತಾ ಬರ್ತಿದ್ದಾರೆ. ಇದೀಗ ಚಿಕ್ಕಣ್ಣನ 'ಉಪಾಧ್ಯಕ್ಷ' ಚಿತ್ರದ ಬೆನ್ನಿಗೆ ನಿಂತಿದ್ದಾರೆ. "ತಮಗಿಂತ ಸೀನಿಯರ್ ಚಿಕ್ಕಣ್ಣ, 250 ಸಿನಿಮಾ ಮಾಡಿದ್ದಾರೆ. ಚಿಕ್ಕಣ್ಣ ಬಹಳ ಕಷ್ಟಪಟ್ಟು ಈ ಸ್ಥಾನಕ್ಕೇರಿದ್ದಾರೆ. ಹಾಗಾಗಿ ಎಲ್ಲರೂ 'ಉಪಾಧ್ಯಕ್ಷ' ಸಿನಿಮಾ ನೋಡಿ ಬೆಂಬಲಿಸಿ ಎಂದಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ನಡೆದ ಸಂಕ್ರಾಂತಿ ಹಬ್ಬ ಆಚರಣೆಯಲ್ಲಿ ನಟ ಚಿಕ್ಕಣ್ಣ ಸಹ ಭಾಗಿ ಆಗಿದ್ದರು. ಅದೇ ಸಮಯದಲ್ಲಿ ಈ ವಿಡಿಯೋ ಮಾಡಿರುವುದು ಗೊತ್ತಾಗುತ್ತಿದೆ. ಇನ್ನು 'ಉಪಾಧ್ಯಕ್ಷ' ತಂಡಕ್ಕೆ ಹಾಗೂ ಚಿಕ್ಕಣ್ಣನಿಗೆ ದರ್ಶನ್ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ.
'ಉಪಾಧ್ಯಕ್ಷ' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸ್ವತಃ ದರ್ಶನ್ 60 ಅಡಿ ಎತ್ತರದ ಚಿಕ್ಕಣ್ಣನ ಕಟೌಟ್ ಮಾಡಿಸಿದ್ದಾರೆ. ಆದರೆ ಈ ವಿಚಾರವನ್ನು ಸೀಕ್ರೆಟ್ ಆಗಿಯೇ ಇಟ್ಟಿದ್ದರು. ವಿಷಯ ಗೊತ್ತಾಗಿ ನಟ ಚಿಕ್ಕಣ್ಣ ಇದೀಗ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದರ್ಶನ್ ಆಣತಿಯಂತೆ ಆನಂದ್ ಆರ್ಟ್ಸ್ ತಂಡದವರು ಕಟೌಟ್ ಸಿದ್ಧಪಡಿಸುತ್ತಿದ್ದಾರೆ. 'ಉಪಾಧ್ಯಕ್ಷ' ಚಿತ್ರ ಪ್ರದರ್ಶನಗೊಳ್ಳುವ ಮುಖ್ಯ ಚಿತ್ರಮಂದಿರದ ಮುಂದೆ ಈ ಕಟೌಟ್ ಎದ್ದು ನಿಲ್ಲಲಿದೆ.
ಶೇಖರ್ ಚಂದ್ರ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ 'ಉಪಾಧ್ಯಕ್ಷ' ಚಿತ್ರಕ್ಕಿದೆ. ಇನ್ನು 'ಅಧ್ಯಕ್ಷ'ನಾಗಿ ಶರಣ್ ಕೂಡ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಮುಗ ರವಿಶಂಕರ್, ಸಾಧುಕೋಕಿಲ, ಕೀರ್ತಿರಾಜ್ ಸೇರಿದಂತೆ ದೊಡ್ಡ ತಾರಾಗಣ 'ಉಪಾಧ್ಯಕ್ಷ' ಚಿತ್ರದಲ್ಲಿದೆ. ಚಿ. ತು ಸಂಘದ ಉಪಾಧ್ಯಕ್ಷರಾಗಿ ಚಿಕ್ಕಣ್ಣ ಹೇಗೆ ಪ್ರೇಕ್ಷಕರನ್ನು ರಂಜಿಸುತ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.
2014ರಲ್ಲಿ ನಂದಕಿಶೋರ್ ನಿರ್ದೇಶನದಲ್ಲಿ 'ಅಧ್ಯಕ್ಷ' ಸಿನಿಮಾ ಬಂದು ಸಕ್ಸಸ್ ಕಂಡಿತ್ತು. ಶರಣ್ ಜೊತೆ ಆ ಚಿತ್ರದಲ್ಲಿ ಚಿಕ್ಕಣ್ಣ ಪ್ರೇಕ್ಷರನ್ನು ನಗೆಗಡಲಿನಲ್ಲಿ ತೇಲಿಸಿದ್ದರು. ಇದೀಗ ಇಡೀ ಸಿನಿಮಾ ಹೀರೊ ಆಗಿ ಚಿಕ್ಕಣ್ಣ ಕಥೆಯನ್ನು ಹೊತ್ತು ಸಾಗಲಿದ್ದಾರೆ. ಡ್ಯಾನ್ಸ್ ಕಲಿತು ಹಾಡುಗಳಿಗೆ ಬಿಂದಾಸ್ ಆಗಿ ಕುಣಿದಿದ್ದಾರೆ.


Click it and Unblock the Notifications











