ಇದು ಅಭಿಮಾನವೋ ಹುಚ್ಚಾಟವೋ?; ಖೈದಿ ವೇಷದಲ್ಲಿ ಮಗುವಿನ ಫೋಟೊಶೂಟ್!
ಅಭಿಮಾನ ಕೇವಲ ಅಭಿಮಾನವಾಗಿರಬೇಕು, ಅದು ಅಂಧಾಭಿಮಾನ ಆಗಬಾರದು. ಹುಚ್ಚಾಟವಂತೂ ಆಗಲೇಬಾರದು. ನಟ ದರ್ಶನ್ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಖೈದಿ ನಂಬರ್ 6106 ನೀಡಲಾಗಿದೆ.
ಇತ್ತ ಅಭಿಮಾನಿಗಳು ದರ್ಶನ್‌ಗೆ ಸಿಕ್ಕಿರುವ 'ಖೈದಿ ನಂಬರ್ 6106' ಅನ್ನು ಟ್ರೆಂಡ್ ಮಾಡುವ ಹುಚ್ಚಾಟಕ್ಕೆ ಬಿದ್ದಿದ್ದಾರೆ. ಬೈಕ್, ಕಾರ್‌ಗಳ ಮೇಲೆ ಆ ನಂಬರ್ ಸ್ಟಿಕ್ಕರ್‌ಗಳನ್ನು ಹಾಕಿಸುತ್ತಿದ್ದಾರೆ. ಇದೇ ನಮಗೆ ಲಕ್ಕಿ ನಂಬರ್ ಎನ್ನುತ್ತಿದ್ದಾರೆ. ಅಭಿಮಾನಿಗಳ ಮೊಬೈಲ್ ಹಾಗೂ ವಾಹನಗಳ ಮೇಲೆ 6106 ಸ್ಟಿಕ್ಕರ್‌ಗಳು ರಾರಾಜಿಸುತ್ತಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಪದಗಳನ್ನಿಟ್ಟುಕೊಂಡು ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸುವವರು ಇದ್ದಾರೆ.

'ಡಿ ಗ್ಯಾಂಗ್', 'ಪಟ್ಟಣಗೆರೆ ಶೆಡ್', 'ಖೈದಿ ನಂಬರ್ 6106' ಎನ್ನುವ ಟೈಟಲ್‌ಗಳಿಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್‌ಗಳನ್ನು ರಿಜಿಸ್ಟರ್ ಮಾಡಿಸಲು ನಿರಾಕರಿಸಿದೆ ಎನ್ನಲಾಗ್ತಿದೆ. ಇದೀಗ ಅಭಿಮಾನಿಯೊಬ್ಬರು ತಮ್ಮ ಮಗುವಿಗೆ ಕೈದಿ ವೇಷದಲ್ಲಿ ಫೋಟೊಶೂಟ್ ಮಾಡಿಸಿ ಹುಚ್ಚು ಅಭಿಮಾನ ಮೆರೆದಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಒಂದು ವರ್ಷದ ಮಗುವಿಗೆ ಈ ರೀತಿ ಖೈದಿ ರೀತಿ ಬಟ್ಟೆ ಹಾಕಿ ಫೋಟೊಶೂಟ್ ಮಾಡಲಾಗಿದೆ. Brand of sandalhood dboss fans Mysore ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಫೋಟೊ ಹಂಚಿಕೊಳ್ಳಲಾಗಿದೆ. ಮಗುವಿನ ಬಟ್ಟೆ ಮೇಲೆ ಖೈದಿ ನಂಬರ್ 6106 ಎನ್ನುವುದನ್ನು ಹಾಕಲಾಗಿದೆ. ಅಷ್ಟೇ ಅಲ್ಲ, ಕೈ ಕೋಳ ಮಾದರಿ ಕೂಡ ಇದೆ. ಇನ್ನು ಜೈ ಡಿಬಾಸ್ ಎಂದು ಬರೆಯಲಾಗಿದೆ. ಸದ್ಯ ಈ ಪೋಸ್ಟ್‌ಗೆ ನಾನಾ ಬಗೆಯ ಕಾಮೆಂಟ್ಸ್ ಬರುತ್ತಿವೆ. ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ಮಕ್ಕಳು ದೇವರ ಸಮಾನ. ಏನು ಅರಿಯದ ಮಗುವಿಗೆ ಕೈದಿ ವೇಷದಲ್ಲಿ ಫೋಟೊಶೂಟ್ ಮಾಡಿಸಿದ್ದೀರಲ್ಲ, ನಿಮಗೆ ಸ್ವಲ್ಪ ಕೂಡ ಬುದ್ದಿ ಇಲ್ವಾ? ಎನ್ನುತ್ತಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ನಿರಪರಾಧಿಯಾಗಿ ಬಿಡುಗಡೆ ಆಗುತ್ತಾರೆ. ಸುಖಾಸುಮ್ಮನೆ ಹುಚ್ಚಾಟ ಬೇಡ. ಕಾನೂನಿಗಿಂತ ದೊಡ್ಡವರು ಇಲ್ಲಿ ಯಾರು ಇಲ್ಲ ಎಂದು ತಿಳಿ ಹೇಳುತ್ತಿದ್ದಾರೆ.
ಮತ್ತೊಂದು ಕಡೆ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಗಿಯುತ್ತಾ ಬರುತ್ತಿದೆ. ಮತ್ತೊಂದು ಕಡೆ ದರ್ಶನ್ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್ ಭೇಟಿ ಮಾಡಿ ಬರುತ್ತಿದ್ದಾರೆ. ಮೊದಲಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಹೋಗಿ ಭೇಟಿ ಮಾಡಿ ಬಂದಿದ್ದರು. ನಂತರ ವಿನೋದ್ ಪ್ರಭಾಕರ್, ಪ್ರೇಮ್- ರಕ್ಷಿತಾ ದಂಪತಿ ಹೋಗಿ ಬಂದಿದ್ದರು.
ನಿನ್ನೆ(ಜುಲೈ 1) ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ಸಹ ಕಾರಾಗೃಹಕ್ಕೆ ಭೇಟಿ ನೀಡಿ ದರ್ಶನ್ ಭೇಟಿ ಮಾಡಿದ್ದರು. ಇಂದು(ಜುಲೈ 2) ನಟ ಧನ್ವೀರ್ ಗೌಡ ಹೋಗಿ ಭೇಟಿ ಮಾಡಿ ಬಂದಿದ್ದಾರೆ. 2 ಗಂಟೆ ಕಾದ ಬಳಿಕ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿತ್ತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಧನ್ವೀರ್ "ಜಾಸ್ತಿ ಹೊತ್ತು ಮಾತನಾಡಲು ಆಗಲಿಲ್ಲ. ದರ್ಶನ್ ಬೇಜಾರಿನಲ್ಲಿದ್ದಾರೆ" ಎಂದಿದ್ದಾರೆ. ಮತ್ತೊಂದು ಕಡೆ ದರ್ಶನ್ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನು ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











