ರೇಣುಕಾಸ್ವಾಮಿ ಅಪಹರಣ, ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗಿಂತ ಈತನ ಕೈವಾಡವೇ ದೊಡ್ಡದು!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ದಿನಕ್ಕೊಂದು ಶಾಕಿಂಗ್ ನ್ಯೂಸ್ ಹೊಸ ಬೀಳುತ್ತಿದೆ. ಈಗಾಗಲೇ ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 3991 ಪುಟಗಳ ದೋಷಾರೋಪ ಪಟ್ಟಿಯಲ್ಲಿ ರೇಣುಕಾಸ್ವಾಮಿ ಅಪಹರಣ, ಹತ್ಯೆಯ ಇಂಚಿಂಚು ಮಾಹಿತಿ ಬಹಿರಂಗವಾಗಿದೆ.
ಪ್ರಕರಣದಲ್ಲಿ ಪೊಲೀಸರು ಕಲೆ ಹಾಕಿರುವ ಸಾಕ್ಷ್ಯಾಧಾರಗಳು, ಆರೋಪಿಗಳ ತಪ್ಪೊಪ್ಪಿಕೊಂಡು ನೀಡಿರುವ ಸ್ವಇಚ್ಚಾ ಹೇಳಿಕೆ ಎಲ್ಲದರ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ 17 ಜನ ಆರೋಪಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ಸ್ವಇಚ್ಚಾ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಅದನ್ನು ಚಾರ್ಜ್‌ಶೀಟ್‌ನಲ್ಲಿ ವಿವರವಾಗಿ ತಿಳಿಸಿದ್ದಾರೆ.

ಸ್ವಇಚ್ಚಾ ಹೇಳಿಕೆಗಳಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಜೊತೆಗೆ ಎ3 ಆರೋಪಿ ಪವನ್ ಹೇಳಿಕೆ ಭಾರೀ ಸದ್ದು ಮಾಡ್ತಿದೆ. ಒಂದರ್ಥದಲ್ಲಿ ರೇಣುಕಾಸ್ವಾಮಿ ಅಪಹರಣ ಹಾಗೂ ಹತ್ಯೆಯಲ್ಲಿ ಈತನ ಪಾತ್ರವೇ ದೊಡ್ಡದು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈತನ ಹೇಳಿಕೆಯೇ ದರ್ಶನ್‌ಗೆ ಕಂಟಕವಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪವನ್ ಕೈವಾಡ ಪ್ರಕರಣದಲ್ಲಿ ಜಾಸ್ತಿ ಇದೆ.
ಎಂಬಿಎ ಓದಿಕೊಂಡಿದ್ದ ಪವನ್ ಮೊದಲಿಗೆ ನಟ ದರ್ಶನ್ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ದರ್ಶನ್‌ಗೆ ಬಹಳ ಆಪ್ತನಾಗಿದ್ದ ಪವನ್ ಬಳಿಕ ಮನೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಮುಂದೆ ದರ್ಶನ್ ಆಣತಿಯಂತೆ ಪವಿತ್ರಾ ಗೌಡ ಮನೆಯಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆಕೆಯ ಕಾರ್ ಡ್ರೈವರ್ ಆಗಿ ಅಷ್ಟೇ ಅಲ್ಲದೇ ಆಪ್ತ ಸಹಾಯಕನಾಗಿಯೂ ಇದ್ದ.

ಪವನ್‌ಗೆ ಸ್ವತಃ ದರ್ಶನ್ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಕೊಡುತ್ತಿದ್ದರು ಎಂದು ಗೊತ್ತಾಗಿದೆ. ಪವಿತ್ರಾ ಗೌಡ ಪೋಸ್ಟ್‌ಗಳಿಗೆ ರೇಣುಕಾಸ್ವಾಮಿ ಕಾಮೆಂಟ್ ಮಾಡಲು ಆರಂಭಿಸಿದ್ದ. Gowtham KS ಎನ್ನು ನಕಲಿ ಇನ್‌ಸ್ಟಾಗ್ರಾಮ್ ಅಕೌಂಟ್ ಇಂದ ರೇಣುಕಾಸ್ವಾಮಿ ಚಾಟ್ ಮಾಡುತ್ತಿದ್ದ. ಒಂದರ್ಥದಲ್ಲಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಪವನ್ ಹ್ಯಾಂಡಲ್ ಮಾಡುತ್ತಿದ್ದ. ಹಾಗಾಗಿ ರೇಣುಕಾಸ್ವಾಮಿಗೆ ಮೊದಲು ಮೆಸೇಜ್ ಮಾಡಿದ್ದು ಪವನ್.
ಮುಂದೆ ಪವನ್ ತಮ್ಮ ಫೋನ್ ನಂಬರ್ ಅನ್ನು ಪವಿತ್ರಾ ಗೌಡ ನಂಬರ್ ಎನ್ನುವಂತೆ ರೇಣುಕಾಸ್ವಾಮಿಗೆ ಕಳುಹಿಸಿದ್ದ. ನಂತರ ಆಕೆಯ ಹೆಸರಲ್ಲಿ ರೇಣುಕಾಸ್ವಾಮಿ ಜೊತೆ ಚಾಟ್ ಮಾಡಲು ಆರಂಭಿಸಿದ್ದ ಎನ್ನುವುದು ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಗೊತ್ತಾಗುತ್ತಿದೆ. ಪವಿತ್ರಾ ಗೌಡರನ್ನು ಪವನ್ ಅಕ್ಕ ಎಂದು ಕರಯುತ್ತಿದ್ದ. ತನ್ನ ಅಕ್ಕನ ಸಮಾನರಾದ ಆಕೆಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ಗಳು ಕೆರಳಿಸಿತ್ತು ಎನ್ನುವುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ.
ರೇಣುಕಾಸ್ವಾಮಿಗೆ ಬುದ್ದಿ ಕಲಿಸಬೇಕು ಎಂದು ಪವಿತ್ರಾ ಗೌಡ ಸಹಕಾರದೊಂದಿಗೆ ಪವನ್ ಬಲೆ ಬೀಸಿದ್ದ. ಆತನಿಗೆ ನಂಬಿಕೆ ಬರಲಿ ಎಂದು ಒಮ್ಮೆ ಪವಿತ್ರಾ ಗೌಡರಿಂದ ಫೋನ್ ಮಾಡಿಸಿ ಪವನ್ ಮಾತನಾಡಿಸಿದ್ದ. ಹಾಗಾಗಿ ನಾನು ಚಾಟ್ ಮಾಡುತ್ತಿರುವುದು ಪವಿತ್ರಾ ಗೌಡ ಜೊತೆಗೆ ಎಂದು ರೇಣುಕಾಸ್ವಾಮಿ ನಂಬಿದ್ದ.
ಕೊನೆಗೆ Gowtham KS ಇನ್‌ಸ್ಟಾಗ್ರಾಮ್ ಅಕೌಂಟ್ ಯಾರದ್ದು ಆತನ ಹಿನ್ನೆಲೆ ಏನು ಎನ್ನುವ ಬಗ್ಗೆ ಪವನ್ ಮಾಹಿತಿ ಕಲೆ ಹಾಕಿದ್ದ. ರೇಣುಕಾಸ್ವಾಮಿ ಜೊತೆ ಪವಿತ್ರಾ ಗೌಡ ಹೆಸರಲ್ಲಿ ಚಾಟ್ ಮಾಡುತ್ತಲೇ ಆತನ ಊರು, ಮಾಡುವ ಕೆಲಸ, ಇರುವ ಜಾಗ ಎಲ್ಲದರ ಮಾಹಿತಿ ಸಂಗ್ರಹಿಸಿದ್ದ. ಮುಂದೆ ರೇಣುಕಾಸ್ವಾಮಿ ಅಪಹರಣದ ಸಂಚನ್ನು ಪವನ್ ರೂಪಿಸಿದ್ದ. ಅದಕ್ಕೆ ಪವಿತ್ರಾ ಗೌಡ ಸಹಕಾರವೂ ಇತ್ತು. ಕೊನೆಗೆ ಚಿತ್ರದುರ್ಗದ ರಾಘವೇಂದ್ರಗೆ ಹೇಳಿ ರೇಣುಕಾಸ್ವಾಮಿ ಅಪಹರಣ ಮಾಡಿಸಿದ್ದ. ಪಟ್ಟಣಗೆರೆ ಶೆಡ್‌ನಲ್ಲಿ ಪವನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವುದಾಗಿ ಸ್ವಇಚ್ಚಾ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎನ್ನಲಾಗ್ತಿದೆ.
ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ. ತಮ್ಮ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಚರ್ಚೆ ನಡೀತಿದೆ. ಆದರೆ ಗಂಭೀರ ಪ್ರಕರಣ ಆಗಿರುವುದರಿಂದ ಸದ್ಯಕ್ಕೆ ಜಾಮೀನು ಸಿಗಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











