"ನಿಮ್ ಮನೆಯವ್ರು ಮುಂಗೋಪಿ ಅಂತ ಗೊತ್ತಿದ್ದು ನೀವ್ ಮಾಡಿದ್ ಸರಿಯಿಲ್ಲ"; ಪವಿತ್ರಾ ಗೌಡ ವಿರುದ್ಧ ಸಂಜನಾ ಗುಡುಗು
ರೇಣುಕಾಸ್ವಾಮಿ ಹತ್ಯೆ ನಡೆದು 3 ತಿಂಗಳು ಕಳೆದಿದೆ. ಪ್ರಕರಣದಲ್ಲಿ 17 ಜನ ಆರೋಪಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿದ್ದಾರೆ. ಅವರ ಕುಟುಂಬದವರು ನೋವಿನಲ್ಲಿ ದಿನ ಕಳೆಯುವಂತಾಗಿದೆ. ರೇಣುಕಾಸ್ವಾಮಿ ಮಾಡಿದ ಕೆಟ್ಟ ಮೆಸೇಜ್ ನೋಡಿ ಪವಿತ್ರಾ ಗೌಡ ಕೋಪದ ಕೈಗೆ ಬುದ್ದಿ ಕೊಟ್ಟಿದ್ದರಿಂದ ಇಷ್ಟು ಜನ ನೋವು ಅನುಭವಿಸುವಂತಾಗಿದೆ ಎನ್ನುವ ಚರ್ಚೆ ನಡೀತಿದೆ.
ನಟ ದರ್ಶನ್ ಹಾಗೂ ಪವಿತ್ರಾ ಗೌಡ 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ದರ್ಶನ್ ಅವರನ್ನು ಕೆರಳಿಸಿತ್ತು. ಹಾಗಾಗಿ ಆತನಿಗೆ ಬುದ್ದಿ ಕಲಿಸಲು ಮುಂದಾಗಿದ್ದರು. ಆತನಿಗೆ ಚಿತ್ರಹಿಂಸೆ ಕೊಟ್ಟಾಗ ಜೀವವೇ ಹೋಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಕೂಡ ಪ್ರಕರಣದಲ್ಲಿ ತಮ್ಮ ಪಾತ್ರವೇನು ಎನ್ನುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

17 ಜನ ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ತನಿಖಾಧಿಕಾರಿಗಳು ದಾಖಲಿಸಿದ್ದಾರೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ರೇಣುಕಸ್ವಾಮಿಗೆ ಮೇಲೆ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಟ್ಟಣಗೆರೆ ಶೆಡ್‌ಗೆ ಇಬ್ಬರೂ ಹೋಗಿದ್ದನ್ನು ಹೇಳಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದಾಗ ಅದನ್ನು ಬೇರೆ ರೀತಿ ಹ್ಯಾಂಡಲ್ ಮಾಡಬಹುದಿತ್ತು ಎಂದು ಕೆಲವರು ಹೇಳುತ್ತಾ ಬರ್ತಿದ್ದಾರೆ.
ನಟಿ ಸಂಜನಾ ಗರ್ಲಾನಿ ಕೂಡ ಪವಿತ್ರಾ ಗೌಡ ಮಾಡಿದ್ದು ತಪ್ಪು ಎಂದಿದ್ದಾರೆ. ಪೊಲೀಸರು ದರ್ಶನ್‌ನ ವಶಕ್ಕೆ ಪಡೆದ ದಿನದಿಂದಲೂ ಸಂಜನಾ ಅವರ ಪರ ಮಾತನಾಡುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಮೊದಲು ಪ್ರತಿಕ್ರಿಯಿಸಿದ್ದು ಸಂಜನಾ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ದರ್ಶನ್ ಯಾವುದೇ ತಪ್ಪು ಮಾಡಿರಲ್ಲ ಎನ್ನುವ ನಂಬಿಕೆ ನನಗಿದೆ. ಆದಷ್ಟು ಬೇಗ ಅವರು ಸಂಕಷ್ಟದಿಂದ ಪಾರಾಗಿ ಬರುತ್ತಾರೆ ಎಂದಿದ್ದರು.

ಇದೀಗ 'ಗ್ಯಾರೆಂಟಿ ನ್ಯೂಸ್' ಸುದ್ದಿ ವಾಹಿನಿ ಜೊತೆ ಸಂಜನಾ ಗರ್ಲಾನಿ ಮಾತನಾಡಿ ಪವಿತ್ರಾ ಗೌಡ ವಿರುದ್ಧ ಗುಡುಗಿದ್ದಾರೆ. ಆಕೆಯ ಆ ಸಣ್ಣ ತಪ್ಪಿನಿಂದ ಇಷ್ಟು ಕುಟುಂಬಗಳು ನೋವು ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ. "ರೇಣುಕಾಸ್ವಾಮಿ ಮಾಡಿದ ಕೆಟ್ಟ ಮೆಸೇಜ್ ಎನ್ನುವುದು ಸುಮ್ಮನೆ ಮೈ ಕೊಡವಿಕೊಂಡು ಹೋಗುವಂತಹ ವಿಚಾರ ಅಷ್ಟೆ. ಆದರೆ ಮಾಡಿದ ತಪ್ಪಿನಿಂದ ಇವತ್ತು 17 ಕುಟುಂಬ ಬೀದಿಗೆ ಬಂದಿದೆ" ಎಂದಿದ್ದಾರೆ.
"ಅದೊಂದು ತಪ್ಪಿನಿಂದ ಆರೋಪಿಯೊಬ್ಬರ ತಂದೆ ಸತ್ತಿದ್ದಾರೆ. ರೇಣುಕಾಸ್ವಾಮಿ ಜೀವವೇ ಹೋಗಿದೆ. ನಿಮ್ಮ ಮನೆಯವವ್ರು ಕೋಪಿಷ್ಟ, ಪೊಸೆಸ್ಸಿವ್ ಕ್ಯಾರೆಕ್ಟರ್ ಎಂದು ಗೊತ್ತಿದ್ದರೆ ನೀವು ಹೇಗಿರಬೇಕಿತ್ತು. ತಗ್ಗಿ ಬಗ್ಗಿ ಏನು ನಡೆದಿಲ್ಲ ಎನ್ನುವಂತೆ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಮ್ ಅಕೌಂಟ್ ಬ್ಲಾಕ್ ಮಾಡಿ ಸುಮ್ಮನಿರಬೇಕಿತ್ತು. ಬೀದಿಯಲ್ಲಿ ನಾಯಿ ಕಚ್ಚಿದ್ರೆ ತಿರುಗಿ ನಾವು ಕಚ್ಚೋಕೆ ಆಗುತ್ತಾ?" ಎಂದು ಸಂಜನಾ ಪ್ರಶ್ನಿಸಿದ್ದಾರೆ.
"ಪವಿತ್ರಾ ಗೌಡ ಮಾಡಿದ್ದು ಸರಿಯಲ್ಲ. ಕೆಟ್ಟ ಮಾತುಗಳಿಂದಲೇ ಮಹಾಭಾರತ ನಡೀತು. ನಮ್ಮ ಪುರಾಣ, ಇತಿಹಾಸದಲ್ಲೇ ಇದನ್ನೆಲ್ಲಾ ನೋಡಿದ್ದೇವೆ. ನಿಮಗೆ ಗೊತ್ತು, ನಿಮ್ಮ ಮನೆಯವ್ರು ಶಾರ್ಟ್ ಟೆಂಪರ್ ಅಂತ. ಆದರೂ ಯಾಕೆ ಹೀಗೆ ಮಾಡಿದ್ರಿ. ಪವಿತ್ರಾ ಗೌಡ ಬೇಕು ಅಂತ್ಲೇ ಹೀಗೆ ಮಾಡಿದ್ರಾ? ಗೊತ್ತಿಲ್ಲ. ನಾನು ಬದುಕಿದ್ದೀನಿ, ದರ್ಶನ್ ಜೀವನದಲ್ಲಿ ಇದ್ದೀನಿ ಎಂದು ತೋರಿಸಲು ಬೇಕು ಅಂತ್ಲೇ ಹೀಗೆ ಮಾಡಿದ್ದಾರೆ ಅಂತ ಅನ್ನಿಸ್ತಿದೆ" ಎಂದಿದ್ದಾರೆ.
"ನನಗೆ ಬಹಳ ಬೇಸರವಾಗುತ್ತಿದೆ. ದರ್ಶನ್ ರೀತಿಯ ದೊಡ್ಡ ವ್ಯಕ್ತಿಯನ್ನು ಯಾವ ಮಟ್ಟಕ್ಕೆ ತಂದುಬಿಟ್ರು, ನಾಶ ಮಾಡಿಬಿಟ್ರು ಅನ್ಸತ್ತೆ. ಇದು ತಾತ್ಕಾಲಿಕವೇ ಇರಬಹುದು. ಆದರೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪರಿಸ್ಥಿತಿ ನೋಡಿ, ಮಗ ಎಷ್ಟು ನೊಂದಿರ್ತಾನೆ. ಹೊರಗಿನ ಮಹಿಳೆ ಒಳಗೆ ಬಂದು ಏನೆಲ್ಲಾ ಆಯ್ತು ನೋಡಿ" ಎಂದು ಸಂಜನಾ ಗರ್ಲಾನಿ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications










