For Quick Alerts
  ALLOW NOTIFICATIONS  
  For Daily Alerts

  ಲವ್ಲಿ ಸ್ಟಾರ್ 'ಪ್ರೇಮಂ ಪೂಜ್ಯಂ' ವೀಕ್ಷಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ

  |

  ಲವ್ಲಿ ಸ್ಟಾರ್ ಪ್ರೇಮ್ ನಟಿಸಿರುವ 'ಪ್ರೇಮಂ ಪೂಜ್ಯಂ' ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ದಕ್ಕಿದೆ. 'ಪ್ರೇಮಂ ಪೂಜ್ಯಂ' ಸಿನಿಮಾ ವೀಕ್ಷಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ ದರ್ಶನ್.

  ಪ್ರೇಮಂ ಪೂಜ್ಯಂ ಸಿನಿಮಾಗೆ ಸಿಕ್ತು ಆನೆ ಬಲ

  ''ಪ್ರೇಮಂ-ಪೂಜ್ಯಂ' ಸಿನಿಮಾ ನವೆಂಬರ್ 12ನೇ ತಾರೀಖು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇಡೀ ಕರ್ನಾಟಕದ ಜನತೆ ಹಾಗೆ ಎಲ್ಲರೂ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಹರಸಿ ಎಂದು ಕೇಳಿಕೊಳ್ಳುತ್ತೇನೆ'' ಎಂದಿದ್ದಾರೆ ದರ್ಶನ್.

  'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ಪ್ರೇಮ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಬಹಳ ಹಿಟ್ ಆಗಿವೆ. ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಈ ಸಿನಿಮಾದ ಚಿತ್ರೀಕರಣ, ದೃಶ್ಯದ ಗುಣಮಟ್ಟದ, ಪ್ರೇಂಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

  'ಪ್ರೇಮಂ ಪೂಜ್ಯಂ' ಸಿನಿಮಾವು ಲವ್ಲಿ ಸ್ಟಾರ್ ಪ್ರೇಮ್‌ರ ಕಮ್‌ ಬ್ಯಾಕ್ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ. ಪುನೀತ್ ರಾಜ್‌ಕುಮಾರ್ ನಿಧನದಿಂದಾಗಿ ಸಿನಿಮಾ ಪ್ರಚಾರ ಕಾರ್ಯ ತಡವಾಗಿ ಪ್ರಾರಂಭ ಮಾಡಲಾಗಿದೆ.

  ಈ ಮೊದಲು ಅಕ್ಟೋಬರ್ 29 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. 'ಭಜರಂಗಿ 2' ಹಾಗೂ 'ಪ್ರೇಮಂ ಪೂಜ್ಯಂ' ಸಿನಿಮಾ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇತ್ತು, ಕೊನೆಗೆ 'ಪ್ರೇಮಂ ಪೂಜ್ಯಂ' ಸಿನಿಮಾದ ಬಿಡುಗಡೆಯನ್ನು ಎರಡು ವಾರ ತಡ ಮಾಡಲಾಯ್ತು. ಈ ನಿರ್ಧಾರ ಚಿತ್ರತಂಡಕ್ಕೆ ವರವೇ ಆಯಿತು. ಅಕ್ಟೋಬರ್ 29 ರಂದು 'ಭಜರಂಗಿ 2' ಸಿನಿಮಾ ಬಿಡುಗಡೆ ಆಯ್ತು, ಅದೇ ದಿನ ಪುನೀತ್ ರಾಜ್‌ಕುಮಾರ್ ನಿಧನವಾದ ಕಾರಣ ಸಿನಿಮಾಕ್ಕೆ ತೀವ್ರ ಹಿನ್ನಡೆ ಉಂಟಾಯಿತು.

  'ಪ್ರೇಮಂ ಪೂಜ್ಯಂ' ಸಿನಿಮಾದ ಪ್ರಚಾರಕ್ಕೆ ನಿನ್ನೆ ಮಂಗಳೂರಿಗೆ ತೆರಳಿದ್ದ ಪ್ರೇಮ್, ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ''ಪುನೀತ್ ಸರ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂದು ನಾನು ಬಯಸುತ್ತೇನೆ, ಪುನೀತ್ ಸರ್ ಅವರಿಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ'' ಎಂದಿದ್ದರು.

  ಪುನೀತ್ ಸಾವಿನ ಬಗ್ಗೆ ಮಾತನಾಡುತ್ತಾ, ''ಜಿಮ್‌ ಮಾಡುವುದರಿಂದ ಸಾವು ಸಂಭವಿಸುತ್ತದೆ ಎಂಬುದು ತಪ್ಪು. 50-60 ವರ್ಷ ಮೇಲ್ಪಟ್ಟರು ಜಿಮ್ ಸ್ವಲ್ಪ ಕಡಿಮೆ ಮಾಡಲಿ, ಭಾರ ಎತ್ತುವುದನ್ನು ಡಿಮೆ‌ ಮಾಡಲಿ, ಜಿಮ್ ಮಾಡಬೇಕೆಂಬ ಆಸೆ ಇದ್ದರೆ ಒಳ್ಳೆಯ ತರಬೇತುದಾರರ ಸಲಹೆ ತೆಗೆದುಕೊಳ್ಳಲಿ, ಫಿಟ್ ನೆಸ್ ಇರಬೇಕೆಂದರೆ ಜಿಮ್ ಮಾಡಲೇಬೇಕು, ಇಲ್ಲ ಬೇರೆ ವ್ಯಾಯಾಮಗಳನ್ನು ಮಾಡಬೇಕು. ಆರೋಗ್ಯವಾಗಿರಲಿ, ಆದರೆ 50 ವರ್ಷದ ಬಳಿಕ ಎಚ್ಚರದಿಂದಿರಲಿ'' ಎಂದಿದ್ದರು.

  ''ಪುನೀತ್ ನನ್ನ ಆತ್ಮೀಯ ಗೆಳೆಯ. ಫ್ಯಾಮಿಲಿ ಫ್ರೆಂಡ್​ ಆಗಿದ್ದರು. ನನ್ನ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಅವರಿಗೆ ಕಾಳಜಿಯಿತ್ತು. ಸಿಕ್ಕಾಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೆವು. ಮಾತಾಡುತ್ತಿದ್ದೆವು. ಅಪ್ಪು ಸರ್ ನಿಧನರಾದಾಗ ನನ್ನ ಪುತ್ರಿ ನೋಡಬೇಕೆಂದು ಹೇಳಿದ್ದಳು. ತುಂಬಾ ಜನರಿದ್ದಾರೆ ಎಂದು ಹೇಳಿದಾಗ ಊಟ ಬಿಟ್ಟು ಮಲಗಿದ್ದಳು. ಮರುದಿನ ಮನೆಯವರೆಲ್ಲರನ್ನೂ ಕರೆದೊಯ್ದು ಅಂತಿಮ ದರ್ಶನ ಮಾಡಿಸಿದೆ. ಯಾಕಮ್ಮ ಇಷ್ಟೊಂದು ಹಠ ಮಾಡಿದೆ ಎಂದು ಮಗಳನ್ನು ಕೇಳಿದೆ. ಎಷ್ಟೇ ಜನರ ನಡುವೆ ಇದ್ದರೂ ನನ್ನನ್ನು ಗುರುತಿಸಿ ಮಾತಾಡುತ್ತಿದ್ರು ಅಂತ ಮಗಳು ಹೇಳಿದಳು. ನಮ್ಮ ಮತ್ತು ಅವರ ಕುಟುಂಬದ ನಡುವೆ ಅಂತಹ ಬಾಂಧವ್ಯವಿತ್ತು'' ಎಂದಿದ್ದರು ಪ್ರೇಮ್​.

  'ಪ್ರೇಮಂ ಪೂಜ್ಯಂ' ಸಿನಿಮಾವನ್ನು ರಾಘವೇಂದ್ರ ಬಿಎಸ್ ನಿರ್ದೇಶನ ಮಾಡಿದ್ದಾರೆ. ಸಂಗೀತ ನೀಡಿರುವುದು ಸಹ ಅವರೇ. ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಜೊತೆಗೆ ಬೃಂದಾ ಆಚಾರ್ಯ, ಐಂದ್ರಿತಾ ರೇ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಅವಿನಾಶ್, ಮಾಸ್ಟರ್ ಆನಂದ್, ಸಾಧು ಕೋಕಿಲ, ಮಾಳವಿಕ ಅವಿನಾಶ್, ಟಿ.ಎಸ್.ನಾಗಾಭರಣ ಇನ್ನೂ ಹಲವರು ನಟಿಸಿದ್ದಾರೆ. ನವೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  English summary
  Actor Darshan request fans to watch Premam Poojyam movie in theaters on November 12. Actor Prem is in lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X