'ರಾಜ ವೀರಮದಕರಿ ನಾಯಕ' ಸಿನಿಮಾ ನಿಲ್ಲಲು ಕಾರಣ ಬಹಿರಂಗ ಪಡಿಸಿದ ದರ್ಶನ್
ದರ್ಶನ್ ನಟನೆಯ 'ಕಾಟೇರ' ಬಿಡುಗಡೆಗೆ ಇನ್ನೊಂದು ದಿನ ಮಾತ್ರ ಬಾಕಿಯಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್‌ಗಳನ್ನು 'ಕಾಟೇರ' ದರ್ಶನ್ ಸ್ವಾಗತಕ್ಕೆ ಕಾಯುತ್ತಿದ್ದಾರೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕೆಲವೆಡೆ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.
'ಕಾಟೇರ' ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ನಟ ದರ್ಶನ್ ಕೂಡ ಸಂದರ್ಶನಗಳಲ್ಲಿ ಭಾಗಿಯಾಗಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. 'ರಾಜ ವೀರಮದಕರಿ ನಾಯಕ' ಸಿನಿಮಾ ನಿಂತು ಹೋಗಲು ಕಾರಣ ಏನು ಎನ್ನುವುದನ್ನು ತಿಳಿಸಿದ್ದಾರೆ.

4 ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ 'ರಾಜ ವೀರಮದಕರಿ ನಾಯಕ' ಸಿನಿಮಾ ಶುರುವಾಗಿತ್ತು. ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಮದಕರಿ ನಾಯಕರ ಪಾತ್ರದಲ್ಲಿ ದರ್ಶನ್ ಬಣ್ಣ ಹಚ್ಚಿದ್ದರು. ನಗರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತ ನಡೆದಿತ್ತು. ಬಳಿಕ 10 ದಿನಗಳ ಕಾಲ ಕೇರಳದಲ್ಲಿ ಚಿತ್ರೀಕರಣ ನಡೆದಿತ್ತು.
ಕೊರೊನಾ ಹಾವಳಿ ಸಮಯದಲ್ಲಿ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಭಾರೀ ಬಜೆಟ್ ಚಿತ್ರವನ್ನು ಈಗ ಮಾಡುವುದು ಕಷ್ಟ ಎಂದು ರಾಕ್‌ಲೈನ್ ವೆಂಕಟೇಶ್ ನಿಲ್ಲಿಸಿದ್ದರು. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತೆ ಶುರುವಾಗುತ್ತದೆ ಎಂದು ಚಿತ್ರತಂಡ ಹೇಳಿತ್ತು. ಇದೀಗ ಇದೇ 'ರಾಜ ವೀರಮದಕರಿ ನಾಯಕ' ಚಿತ್ರದ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ.

'ಕಾಟೇರ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಡಿ ಕಂಪೆನಿ(ದರ್ಶನ್ ಅಭಿಮಾನಿಗಳ ತಂಡ) ಯೂಟ್ಯೂಬ್ ಸಂದರ್ಶನದಲ್ಲಿ ದರ್ಶನ್ ಮಾತನಾಡಿದ್ದಾರೆ. 'ರಾಜ ವೀರಮದಕರಿ ನಾಯಕ' ಚಿತ್ರವನ್ನು ನಿಲ್ಲಿಸಿ 'ಕಾಟೇರ' ಸಿನಿಮಾ ಕೈಗೆತ್ತಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ದರ್ಶನ್ ಉತ್ತರ ಕೊಟ್ಟಿದ್ದಾರೆ.
"10 ದಿನಗಳ ಕಾಲ 'ರಾಜ ವೀರಮದಕರಿ ನಾಯಕ' ಸಿನಿಮಾ ಚಿತ್ರೀಕರಣ ಮಾಡಿದ್ದೆವು. ಯಾಕೋ ಹಿಡಿತಕ್ಕೆ ಸಿಗಲಿಲ್ಲ. ಮದಕರಿ ದೇವಮಾನವ. ಒಂದು ಜನಾಂಗಕ್ಕೆ ಆತನ ದೇವರು. ಅದಕ್ಕೆ ಚ್ಯುತಿ ತರಬಾರದು ಎನ್ನುವ ಕಾರಣಕ್ಕೆ ನಾನು ಹೇಳಿದೆ. ಸದ್ಯಕ್ಕೆ ನಿಲ್ಲಿಸಿ, ಯಾಕೋ ನನಗೆ ಹಿಡಿತಕ್ಕೆ ಸಿಗುತ್ತಿಲ್ಲ. ಸುಮ್ಮನೆ ಮಾಡಿ ನಾಳೆ ಬೈಸಿಕೊಳ್ಳುವುದಕ್ಕಿಂತ ಇಲ್ಲಿಗೆ ನಿಲ್ಲಿಸೋಣ. ಮುಂದೆ ನೋಡೋಣ. ಮುಂದೆ ಸರಿ ಎನಿಸಿದಾಗ ಮಾಡೋಣ, ಸದ್ಯ 'ಕಾಟೇರ' ಸಿದ್ಧವಿದೆ ಮಾಡೋಣ ಎಂದು ಮಾಡಿದ್ದೆವು" ಎಂದಿದ್ದಾರೆ.
ಮದಕರಿ ನಾಯಕರ ಕುರಿತು ಸಿನಿಮಾ ಮಾಡಲು ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸುದೀಪ್ ಕೂಡ ಮದಕರಿಯಾಗಲು ಪ್ರಯತ್ನಿಸಿದ್ದರು. ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದರು. ಅಷ್ಟರಲ್ಲಿ ದರ್ಶನ್ ಹೀರೊ ಆಗಿ ರಾಕ್‌ಲೈನ್ ವೆಂಕಟೇಶ್ ಸಿನಿಮಾ ಘೋಷಿಸಿದರು. ರಾಜಮಾತೆಯಾಗಿ ಸುಮಲತಾ ನಟಿಸಬೇಕಿತ್ತು. ಹಂಸಲೇಖ ಸಂಗೀತ ಚಿತ್ರಕ್ಕಿತ್ತು. ಸಿನಿಮಾ ಸಿನಿಮಾಗಾಗಿ ರಾಜೇಂದ್ರ ಸಿಂಗ್ ಬಾಬು ಮತ್ತವರ ತಂಡ ಸಾಕಷ್ಟು ರಿಸರ್ಚ್ ನಡೆಸಿ ತಯಾರಿ ಮಾಡಿಕೊಂಡಿತ್ತು.
ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಸುದೀಪ್ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದು ಗೊತ್ತೇಯಿದೆ. ಹಾಗಾಗಿ ಮದಕರಿ ಸಿನಿಮಾ ಮಾಡುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸುದೀಪ್ ಕೂಡ ಸಿನಿಮಾ ಮಾಡುವುದಾಗಿ ಪಟ್ಟು ಹಿಡಿದಿದ್ದರು. ಕೊನೆ ಗಳಿಗೆಯಲ್ಲಿ ದರ್ಶನ್, ರಾಕ್‌ಲೈನ್ ವೆಂಕಟೇಶ್ ಮಾಡಲಿ ಎಂದು ಸುಮ್ಮನಾಗಿದ್ದರು.
ಸುದೀಪ್ ಅಭಿಮಾನಿಗಳು ಕೂಡ ನೆಚ್ಚಿನ ನಟನನ್ನು ಮದಕರಿ ನಾಯಕರ ಅವತಾರದಲ್ಲಿ ನೋಡಲು ಕಾತರಾಗಿದ್ದರು. ಆದರೆ ಅದು ಸಾಧ್ಯವಾಗಲೇಯಿಲ್ಲ. ಸದ್ಯಕ್ಕೆ ದರ್ಶನ್ ನಟನೆಯ 'ರಾಜ ವೀರಮದಕರಿ ನಾಯಕ' ಸಿನಿಮಾ ನಿಂತಿದೆ. ಮುಂದೆ ಯಾವಾಗ ಸಿನಿಮಾ ಶೂಟಿಂಗ್ ಪುನರಾರಂಭವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











