ಸೂರ್ಯ, ಚಂದ್ರ ಅಲ್ಲಲ್ಲೇ ಇದ್ರೆ ಚೆಂದ; ಬೇರೆಯವ್ರ ವಿಚಾರದಲ್ಲಿ ತಲೆ ಹಾಕಲ್ಲ; ದರ್ಶನ್ ಬಗ್ಗೆ ಸುದೀಪ್ ಮಾತು
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಹೈಕೋರ್ಟ್‌ನಿಂದ ಪಡೆದಿದ್ದ ಜಾಮೀನು ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿದೆ. ಹಾಗಾಗಿ ಅನಿವಾರ್ಯವಾಗಿ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ಈ ನಡುವೆ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಒಂದ್ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಆದರೂ ನಮ್ಮಿಬ್ಬರ ನಡುವೆ ಅಂಥಾದ್ದೇನಿಲ್ಲ, ಕೊಂಚ ಅಂತರ ಇದೆ ಎಂದು ಸುದೀಪ್ ಹೇಳ್ತಾ ಬರ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ 'ಡೆವಿಲ್' ಚಿತ್ರಕ್ಕೆ ಶುಭವಾಗಲಿ ಎಂದಿದ್ದಾರೆ.

"ಖಂಡಿತ 'ಡೆವಿಲ್' ಚಿತ್ರಕ್ಕೆ ಒಳ್ಳೆದಾಗಲಿ. ಯಾವುದೇ ಚಿತ್ರ ಆದರೂ ಗೆಲ್ಲಬೇಕು. ಅವ್ರ ನೋವು ಅವರಿಗಿರುತ್ತೆ. ಅವ್ರ ಫ್ಯಾನ್ಸ್‌ಗೂ ನೋವಿದೆ. ಇಂತಹ ಸಮಯದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ಸರ್ಕಾರ, ಕಾನೂನು ಏನು ಬೇಕೋ ಅದನ್ನು ಮಾಡುತ್ತೆ. ಅದಕ್ಕೂ ನಾವು ಅಡ್ಡ ಬರಬಾರದು, ತಪ್ಪು, ಸರಿ ಅಲ್ಲೇ ನಿರ್ಧಾರ ಆಗುತ್ತೆ. ಹಾಗಂತ ಅವ್ರು ಕೈಕಟ್ಟಿ ಕೂತಿರಲ್ಲ" ಎಂದು ಸುದೀಪ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಸುದೀಪ್ "ನಾನು ಯಾಕೆ ಮಾತನಾಡುತ್ತಿಲ್ಲ ಅಂದ್ರೆ ವೈಯಕ್ತಿಕವಾಗಿ ಯಾರದ್ದೇ ವಿಚಾರದಲ್ಲಿ ತಲೆ ಹಾಕಲು ನನಗಿಷ್ಟ ಇಲ್ಲ. ಕೆಲವು ವಿಚಾರದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ಮಾತನಾಡುವುದು ಮತ್ತಷ್ಟು ಕೆಡಿಸಿಬಿಡುತ್ತದೆ. ಖಂಡಿತ ದರ್ಶನ್ ಜೊತೆ ಒಳ್ಳೆ ಕ್ಷಣಗಳನ್ನು ಕಳೆದಿದ್ದೇನೆ, ಬಳಿಕ ಏನಾಯ್ತು, ಅದಕ್ಕೆ ಕಾರಣ ಏನು ಎನ್ನುವುದು ಯಾರಿಗೂ ಬೇಕಾಗಲ್ಲ. ನಮಗೆ ಗೊತ್ತಿರುತ್ತದೆ. ಸೂರ್ಯ, ಚಂದ್ರ ಎರಡೂ ತಮ್ಮ ತಮ್ಮ ಜಾಗದಲ್ಲಿ ಚೆಂದವಾಗಿಯೇ ಇರುತ್ತದೆ" ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.
ದರ್ಶನ್- ಸುದೀಪ್ ಒಂದಾಗುವುದು ಚಿತ್ರರಂಗದಲ್ಲೇ ಕೆಲವರಿಗೆ ಇಷ್ಟವಿಲ್ಲ ಎಂದು ಇತ್ತೀಚೆಗೆ ನಟ ಹರೀಶ್ ರಾಯ್ ಹೇಳಿದ್ದರು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯಿಸಿ "ನಾವು 16-18 ವರ್ಷದ ಹುಡುಗರಲ್ಲ. ನಮಗೆ ಸ್ವಂತಿಕೆ ಇಲ್ವಾ? ಯಾರೋ ಏನೋ ಹೇಳುವುದನ್ನು ಕೇಳ್ತೀವಾ? ಆ ರೀತಿ ಯಾರಿಗಾದರೂ ಖುಷಿ ಆದ್ರೆ ಆಗ್ಲಿಬಿಡಿ. ಯಾರದ್ದೋ ಮಾತು ಕೇಳಿ ನಾನು ಪ್ರತಿಕ್ರಿಯಿಸಲ್ಲ. ನಮ್ಮ ಕಣ್ಮುಂದೆ ನಡೆದರೆ ಮಾತನಾಡ್ತೀನಿ. ನಮ್ಮಿಬ್ಬರ ಸತ್ಯ ನಮಗೆ ಗೊತ್ತು. ನಾವ್ ಯಾಕೆ ಹಂಗಿದ್ದೀವಿ, ಚೆನ್ನಾಗಿದ್ದಾಗೂ ಯಾಕೆ ಚೆನ್ನಾಗಿದ್ವಿ, ಬೇಡ ಅಂದಾಗಲೂ ಯಾಕೆ ಹಿಂಗಿದ್ದೀವಿ ಅನ್ನೋದು ನಮಗೆ ಚೆನ್ನಾಗಿ ಗೊತ್ತು" ಎಂದು ಸುದೀಪ್ ಹೇಳಿದ್ದಾರೆ.
ಒಮ್ಮೆ ದರ್ಶನ್ ಮೈಸೂರಿನ ಫಾರ್ಮ್‌ಹೌಸ್‌ಗೆ ಹೋಗಿದ್ದಾಗ ನಡೆದ ಘಟನೆಯನ್ನು ಕೂಡ ಸುದೀಪ್ ನೆನಪಿಸಿಕೊಂಡಿದ್ದಾರೆ. ಕುದುರೆ ಏರುವಂತೆ ದರ್ಶನ್ ಬಲವಂತ ಮಾಡಿದ್ದ. ಅಂತೂ ಇಂತೂ ಏರಿದ್ದೆ. ನನ್ನ ಮುಂದೆ ಅವನು ಕುದುರೆಯಿಂದ ಬಿದ್ದಿದ್ದು ನೋಡಿ ಮತ್ತೆ ಕುದುರೆ ಸವಾರಿ ಸಹವಾಸವೇ ಬೇಡ ಎಂದು ಬಿಟ್ಟುಬಿಟ್ಟೆ ಎಂದು ಸುದೀಪ್ ಮೆಲುಕು ಹಾಕಿದ್ದಾರೆ.
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರುವುದಾಗಿ ಚಿತ್ರತಂಡ ಘೋಷಿಸಿದೆ. ಡಿಸೆಂಬರ್ 25ಕ್ಕೆ ತಮ್ಮ ಸಿನಿಮಾ ರಿಲೀಸ್ ಎಂದು ಸುದೀಪ್ ಪುನರುಚ್ಚರಿಸಿದ್ದಾರೆ. ಇನ್ನು ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ ಡೆವಿಲ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಶೀಘ್ರದಲ್ಲೇ ಮತ್ತೊಂದು ಸಾಂಗ್ ರಿಲೀಸ್ ಪ್ಲ್ಯಾನ್ ನಡೀತಿದೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಸುದೀಪ್ ಕೂಡ ಚಿತ್ರಕ್ಕೆ ಶುಭ ಕೋರಿದ್ದಾರೆ.


Click it and Unblock the Notifications











