ದರ್ಶನ್ ಜಾಮೀನು ಅರ್ಜಿ ವಿಚಾರಣೆ; ಸೆಷನ್ ಕೋರ್ಟ್ ವರದಿ ಕೇಳಿದ ಸುಪ್ರೀಂ ಕೋರ್ಟ್
ಕಳೆದ 8 ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು(ಮೇ 4) ದರ್ಶನ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ದರ್ಶನ್ ಮನವಿಯನ್ನು ಆಲಿಸಿರುವ ಕೋರ್ಟ್ ಸದ್ಯ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯ ವರದಿಯ ಕೇಳಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ 2024, ಜೂನ್ 11ರಂದು ದರ್ಶನ್ ಸೇರಿ ಹಲವು ಆರೋಪಿಗಳ ಬಂಧನವಾಗಿತ್ತು. ಅದೇ ವರ್ಷ ಅಕ್ಟೋಬರ್ 30ರಂದು ದರ್ಶನ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದರು. ಆದರೆ ಕಳೆದ ವರ್ಷ ಆಗಸ್ಟ್ 14ರಂದು ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಎಲ್ಲಾ ಆರೋಪಿಗಳು ಕೂಡಲೇ ಶರಣಾಗಬೇಕು ಎಂದು ತಿಳಿಸಿತ್ತು. ಅದೇ ದಿನ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಈಗಾಗಲೇ ಸೆಷನ್ ಕೋರ್ಟ್‌ನಲ್ಲಿ ಪ್ರಕರಣದ ಟ್ರಯಲ್ ಆರಂಭವಾಗಿದೆ. 15 ಸಾಕ್ಷಿಗಳ ಹೇಳಿಕೆ ದಾಖಲಿಸಿ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗಿದೆ.

ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಸದ್ಯ ಜೈಲಿನಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ. ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಕನಿಷ್ಠ ಸೌಲಭ್ಯ ಕೋರಿ ಹೈಕೋರ್ಟ್ ಮೊರೆ ಹೋದ್ರೆ, ಸುಪ್ರೀಂ ಆದೇಶ ಎನ್ನುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ. ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.
ಸೆಷನ್ ಕೋರ್ಟ್ ವರದಿ ಕೇಳಿ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. "ಇಲ್ಲಿಯವರೆಗೆ ಪ್ರಕರಣದಲ್ಲಿ ಎಷ್ಟು ಸಾಕ್ಷಿಗಳ ವಿಚಾರಣೆ ನಡೆದಿದೆ. ಎಷ್ಟು ಸಾಕ್ಷಿಗಳ ವಿಚಾರಣೆಗೆ ಪ್ರಾಸಿಕ್ಯೂಷನ್ ಹೇಳಿದೆ? ಟ್ರಯಲ್ ಮುಗಿಯಲು ಇನ್ನು ಎಷ್ಟು ಸಮಯ ಬೇಕು? ಜೈಲಿನಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯ ನೀಡುತ್ತಿದ್ದಾರಾ? ಇಲ್ವಾ? ಎನ್ನುವ ಬಗ್ಗೆ ಒಂದು ವಾರದಲ್ಲಿ ವರದಿ ನೀಡುವಂತೆ ಸೆಷನ್ ಕೋರ್ಟ್ ಬಳಿ ಸುಪ್ರೀಂ ಕೋರ್ಟ್ ಕೇಳಿದೆ.
ಇನ್ನು ಜಾಮೀನು ಅರ್ಜಿಯಲ್ಲಿ ದರ್ಶನ್ ಕಾರಣಗಳ ದೊಡ್ಡ ಪಟ್ಟಿಯಲ್ಲೇ ಇಟ್ಟಿದ್ದಾರೆ. ಸಾಧ್ಯವಾದಷ್ಟು ಬೇಗ ಜೈಲಿನಿಂದ ಮುಕ್ತಿ ಕರುಣಿಸಿ ಎಂದು ಮನವಿ ಮಾಡಿದ್ದಾರೆ.
1. ಕುಟುಂಬಸ್ಥರಿಂದ ಕನಿಷ್ಠ ಸೌಕರ್ಯಕ್ಕೂ ಅವಕಾಶ ಸಿಕ್ತಿಲ್ಲ.
2. ಈವರೆಗೆ ಸೆಷನ್ ಕೋರ್ಟ್ ವಿಚಾರಣೆಯಲ್ಲಿ 7 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ.
3. ಜೈಲು ನಿಯಮಗಳಿಗೆ ವಿರುದ್ಧವಾಗಿ ಇನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ
4. ಕುಟುಂಬಸ್ಥರ ಜೊತೆ ಆಪ್ತವಾಗಿ ಮಾತನಾಡಲು ಸಾಧ್ಯವಾಗ್ತಿಲ್ಲ, ಬ್ಯಾರಿಕೇಡ್‌ಗಳಿವೆ.
5. ಇತರೆ ವಿಚಾರಣಾಧೀನ ಕೈದಿಗಳಿಗೆ ನೀಡಿರುವ ಸೌಲಭ್ಯಗಳು ನನನೆ ಸಿಗುತ್ತಿಲ್ಲ.
6. ಸಹ ಖೈದಿಗಳಿಂದ ಬೆದರಿಕೆ ಶುರುವಾಗಿದೆ, ಭದ್ರತೆ ಭಯ ಕಾಡುತ್ತಿದೆ.
7. ಬೆನ್ನು ನೋವಿನ ಸಮಸ್ಯೆಗೆ ಫಿಸಿಯೋಥೆರಪಿ ಮಾಡಿಸಲು ಅವಕಾಶ ಸಿಗುತ್ತಿಲ್ಲ.
8. ನಾನು ತಪ್ಪಿತಸ್ಥ ಎನ್ನುವುದಕ್ಕೆ ಸೂಕ್ತ ಸಾಕ್ಷಗಳು ಇಲ್ಲ.
9. ಕೆವಿಎನ್ ಪ್ರೊಡಕ್ಷನ್ ಜೊತೆ 6 ಕೋಟಿ ಪ್ರಾಜೆಕ್ಟ್ ಕಳೆದುಕೊಳ್ಳುವಂತಾಗಿದೆ
10. ವಿಚಾರಣೆ ತಡವಾಗುತ್ತಿರುವುದರಿಂದ ನನ್ನ ಸಿನಿಮಾ ವೃತ್ತಿಗೆ ಸಮಸ್ಯೆ ಎದುರಾಗಿದೆ.
11. ಜೈಲಿಗೆ ಬಂದಿದ್ದರಿಂದ 3 ಸಿನಿಮಾ ಅವಕಾಶಗಳು ಕೈತಪ್ಪಿವೆ.
ಹೀಗೆ ಒಂದಷ್ಟು ಕಾರಣಗಳನ್ನು ಕೊಟ್ಟು ನಟ ದರ್ಶನ್ ಸುಪ್ರೀಂ ಕೋರ್ಟ್ ಬಳಿ ಜಾಮೀನು ಕೇಳಿ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಬೇಗ ಜೈಲಿನಿಂದ ಹೊರ ಬರಲಿ ಎಂದು ಆಪ್ತರು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.


Click it and Unblock the Notifications